ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯಿಂದ ರೂ.500 ಕೋಟಿ ಮೀರಿದ ಠೇವಣಿ ಸಂಗ್ರಹಣೆಯ ಅಮೋಘ ಸಾಧನೆ : ಅಧ್ಯಕ್ಷ ಕೆ. ಜೈರಾಜ್ ಬಿ. ರೈ

0

ಪುತ್ತೂರು: ರಾಜ್ಯದ ಅಗ್ರಗಣ್ಯ ಕ್ರೆಡಿಟ್ ಸಹಕಾರ ಸಂಸ್ಥೆಗಳಲ್ಲೊಂದಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ ಠೇವಣಾತಿಯು 2024 ಫೆಬ್ರವರಿ ತಿಂಗಳಾಂತ್ಯಕ್ಕೆ ರೂ.503 ಕೋಟಿಗೂ ಮೀರಿದೆ. ಇದು ಸಹಕಾರ ಸಂಘದ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು. ಸ್ಥಾಪನೆಯ 30 ವರ್ಷದ ಅವಧಿಯಲ್ಲಿ ಒಂದು ಸಹಕಾರ ಸಂಸ್ಥೆಯು ರೂ.೫೦೦ ಕೋಟಿ ಮೀರಿದ ಠೇವಣಾತಿ ಹೊಂದಿರುವುದು ಅನುಪಮ ಸಾಧನೆಯಾಗಿದೆ ಎಂದು ಅಧ್ಯಕ್ಷ ಕೆ. ಜೈರಾಜ್ ಬಿ. ರೈ ತಿಳಿಸಿದ್ದಾರೆ.

ಅಧ್ಯಕ್ಷ ಕೆ. ಜೈರಾಜ್ ಬಿ. ರೈ

2024ರ ಫೆಬ್ರವರಿ ತಿಂಗಳ ಅಂತ್ಯಕ್ಕೆ ಠೇವಣಿ ಮತ್ತು ಸಾಲ ಸೇರಿ ರೂ.943 ಕೋಟಿಯನ್ನು ಮೀರಿದ ವ್ಯವಹಾರವನ್ನು ದಾಖಲಿಸಿ, ವರ್ಷಾಂತ್ಯ ಮಾರ್ಚ್‌ಗೆ ರೂ.1000 ಕೋಟಿ ಒಟ್ಟು ವ್ಯವಹಾರವನ್ನು ಸಾಧಿಸುವ ನಿಟ್ಟಿನಲ್ಲಿ ದೃಢ ಹೆಜ್ಜೆಯನ್ನಿರಿಸಿದೆ.

ಸಂಘವು ವರ್ಷಾಂತ್ಯ 31.03.2024ಕ್ಕೆ ರೂ.10 ಕೋಟಿ ಮೀರಿದ ನಿವ್ವಳ ಲಾಭ ಗಳಿಸುವ ನಿರೀಕ್ಷೆಯಲ್ಲಿದೆ. ಸಂಘದ ವ್ಯವಹಾರ ದಕ್ಷತೆಯ ಇನ್ನೊಂದು ಪ್ರಮುಖ ಅಂಶವೆಂದರೆ ಕಳೆದ 16 ವರ್ಷಗಳಿಂದ ನಿವ್ವಳ ಅನುತ್ಪಾದಕ ಆಸ್ತಿಯು ಶೂನ್ಯ ಪ್ರಮಾಣದಲ್ಲಿರುವುದು ಹಾಗೂ ಸಂಘದ ಸದಸ್ಯರಿಗೆ ಸ್ಥಾಪನೆಯಿಂದ ನಿರಂತರವಾಗಿ ಡಿವಿಡೆಂಡ್ ನೀಡುತ್ತಾ ಬಂದಿದ್ದು, ಕಳೆದ ಐದು ವರ್ಷದಲ್ಲಿ ಗರಿಷ್ಠ ಶೇ.25 ಡಿವಿಡೆಂಡನ್ನು ವಿತರಿಸಲಾಗಿದೆ. ಸಂಘದ ಕೇಂದ್ರ ಕಛೇರಿಗೆ ಸುಸಜ್ಜಿತ ನೂತನ ಕಟ್ಟಡದ ಕಾಮಗಾರಿಯು ಪ್ರಗತಿಯಲ್ಲಿದೆ. ಅದನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲು ಉದ್ದೇಶಿಸಲಾಗಿದೆ.

ಸಂಘದ ಅಧ್ಯಕ್ಷ ಕೆ. ಜೈರಾಜ್ ಬಿ. ರೈ, ಸಂಘದ ಈ ಸಾಧನೆಗಳಿಗೆ ಕಾರಣಕರ್ತರಾದ ಸಂಘದ ನಿರ್ದೇಶಕರುಗಳಿಗೆ, ಸರ್ವ ಸದಸ್ಯರುಗಳಿಗೆ ಹಾಗೂ ಸಿಬ್ಬಂದಿಗಳಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ. ಈ ಎಲ್ಲರ ಸಹಕಾರದೊಂದಿಗೆ ಸಂಘವು 2024ರ ಮಾರ್ಚ್ 31ಕ್ಕೆ ರೂ.1000 ಕೋಟಿ ಒಟ್ಟು ವ್ಯವಹಾರದ ಗುರಿಯನ್ನು ಸಾಧಿಸುತ್ತದೆ ಎಂಬ ಭರವಸೆಯನ್ನು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here