ಆರ್ಯಾಪು ಗ್ರಾಮ ಸಭೆ

0

ನಗರ ಸಭೆಯಿಂದ 5 ಕಿ.ಮೀ ವ್ಯಾಪ್ತಿಯಲ್ಲಿ ಜಮೀನು ಅಕ್ರಮ-ಸಕ್ರಮಕ್ಕೆ ಅವಕಾಶವಿಲ್ಲದ ನಿಯಮ ರದ್ದತಿಗೆ ಆಗ್ರಹ

ಪುತ್ತೂರು:ಅಕ್ರಮ-ಸಕ್ರಮ ಯೋಜನೆಯಲ್ಲಿ ನಗರ ಸಭೆಯ ಗಡಿಭಾಗದಿಂದ 5 ಕಿ.ಮೀ ಅಂತರದೊಳಗಿರುವವರಿಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ ಎಂಬ ನಿಯಮದಿಂದಾಗಿ ಹಲವರು ವಂಚಿತರಾಗಿರುವುದರಿಂದ ಈ ಮಾನದಂಡವನ್ನು ರದ್ದು ಮಾಡಬೇಕು ಇಲ್ಲವೇ ಈ ಅಂತರವನ್ನು ಕಡಿಮೆ ಮಾಡಬೇಕು ಎಂದು ಆರ್ಯಾಪು ಗ್ರಾಮ ಸಭೆಯಲ್ಲಿ ಆಗ್ರಹ ವ್ಯಕ್ತವಾಗಿದೆ.


ಸಭೆಯು ಫೆ.29ರಂದು ಅಧ್ಯಕ್ಷೆ ಗೀತಾರವರ ಅಧ್ಯಕ್ಷತೆಯಲ್ಲಿ ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾ ಭವನದಲ್ಲಿ ನಡೆಯಿತು.ತಾ.ಪಂ.ಯೋಜನಾಧಿಕಾರಿ ಸುಕನ್ಯ ಮಾರ್ಗದರ್ಶಿ ಅಧಿಕಾರಿಯಾಗಿದ್ದರು.ಕಂದಾಯ ಇಲಾಖೆಯ ಮಾಹಿತಿಯ ಸಂಭರ್ದದಲ್ಲಿ ಗ್ರಾಮಸ್ಥ ಕೇಶವ ಸುವರ್ಣ ಮಾತನಾಡಿ, ಅಕ್ರಮ-ಸಕ್ರಮದಲ್ಲಿ ಅರ್ಜಿ ಸಲ್ಲಿಸಲು ನಗರ ವ್ಯಾಪ್ತಿಯಿಂದ ಇರುವ ಅಂತರದ ನಿಯಮದ ಬಗ್ಗೆ ಪ್ರಶ್ನಿಸಿದರು.ಪಂಚಾಯತ್ ವ್ಯಾಪ್ತಿಯಲ್ಲಿ ಮತ್ತು ಕುಮ್ಕಿ ಭೂಮಿಗೂ ಹಕ್ಕು ಪತ್ರ ನೀಡಲಾಗಿದೆ.ಅಲ್ಲದೆ 94ಸಿ ಯೋಜನೆಯಲ್ಲಿ ಹಕ್ಕು ಪತ್ರ ನೀಡಲಾಗಿದೆ. ಹಕ್ಕು ಪತ್ರ ನೀಡಲು ನಿಯಮಗಳಿದ್ದರೂ ಕೆಲವರಿಗೆ ಅಕ್ರಮ-ಸಕ್ರಮ ಹಾಗೂ 94ಸಿಯಲ್ಲಿ ಹಕ್ಕುಪತ್ರ ನೀಡಲಾಗಿದೆ.ಕೆಲವರಿಗೆ ನೀಡಿ ಇನ್ನು ಕೆಲವರಿಗೆ ನೀಡದಿರುವುದು ಯಾವ ನ್ಯಾಯ ಎಂದು ಅವರು ಪ್ರಶ್ನಿಸಿದರು.


ಗ್ರಾಮಸ್ಥರ ಹೋರಾಟಕ್ಕೆ ಬೆಂಬಲ-ಬೂಡಿಯಾರ್:
ನಗರಸಭೆಯಿಂದ 5 ಕಿ.ಮೀ ವ್ಯಾಪ್ತಿಯಲ್ಲಿ ಹಕ್ಕು ಪತ್ರ ನೀಡಲು ಅವಕಾಶ ಇಲ್ಲದಿದ್ದರೂ ಇಲ್ಲಿ ಕೆಲವರಿಗೆ ನೀಡಲಾಗಿದೆ.ನಿಮ್ಮ ಮಾನದಂಡದಂತೆ ನೀಡುವುದಾದರೆ ಎಲ್ಲರಿಗೂ ನೀಡಬೇಕು.ನೀಡಲು ಸಾಧ್ಯವಿಲ್ಲವಾದರೆ ಈಗಾಗಲೇ ನೀಡಿರುವುದನ್ನು ರದ್ದು ಮಾಡಬೇಕು.ಕೆಲವರಿಗೆ ನೀಡುವುದು, ಇನ್ನು ಕೆಲವರಿಗೆ ನೀಡದಿರುವುದು ಸರಿಯಲ್ಲ.ಈ ಹೋರಾಟದಲ್ಲಿ ಗ್ರಾಮಸ್ಥರಿಗೆ ನನ್ನ ಬೆಂಬಲವಿದೆ ಎಂದು ಸದಸ್ಯ ಬೂಡಿಯಾರ್ ಪುರುಷೋತ್ತಮ ರೈ ಹೇಳಿದರು.ನಮಗೆ ತಿದ್ದುಪಡಿ ಮಾಡಲು ಸಾಧ್ಯವಿಲ್ಲ.ಸರಕಾರ ಆದೇಶ ಮಾಡಿದರೆ ನಾವು ನೀಡಬಹುದು.ನಾನು ಬಂದ ಬಳಿಕ ನಗರಸಭೆಯಿಂದ 5 ಕಿ.ಮೀ.ವ್ಯಾಪ್ತಿಯಲ್ಲಿ ಯಾರಿಗೂ ನೀಡಿಲ್ಲ ಎಂದು ಗ್ರಾಮ ಆಡಳಿತಾಧಿಕಾರಿ ಅಶ್ವಿನಿ ತಿಳಿಸಿದರು.ಹಕ್ಕುಪತ್ರ ನೀಡುವುದಾದರೆ ಸರಕಾರ ಎಲ್ಲರಿಗೂ ಒಂದೇ ನಿಯಮ ಜಾರಿಗೊಳಿಸಬೇಕು ಎಂದು ಆಗ್ರಹಿಸಿದ ಗ್ರಾಮಸ್ಥರು ಅರ್ಜಿ ಸಲ್ಲಿಸಲು ಇರುವ ನಿಯಮವನ್ನು ರದ್ದು ಮಾಡಬೇಕು.ಇಲ್ಲವೇ ಅಂತರ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.ಈ ಕುರಿತು ಸರಕಾರಕ್ಕೆ ಬರೆದುಕೊಳ್ಳಲು ನಿರ್ಣಯಿಸಲಾಯಿತು.


ಸದಸ್ಯ-ಗ್ರಾಮಸ್ಥ ಮಧ್ಯೆ ವಾಗ್ವಾದ:
ಸಂಪ್ಯ ಶಾಲೆಗೆ ಕ್ರೀಡಾ ಸಾಮಾಗ್ರಿ ನೀಡಿಲ್ಲ ಎಂಬ ಆರೋಪ ವ್ಯಕ್ತವಾಗಿ ಗ್ರಾಮಸ್ಥ ಸಲಾಂ ಹಾಗೂ ಸದಸ್ಯ ನೇಮಾಕ್ಷ ಸುವರ್ಣರವರ ಮಧ್ಯೆ ವಾಗ್ವಾದ ನಡೆಯಿತು.ಕ್ರೀಡಾ ಸಾಮಾಗ್ರಿ ವಿತರಿಸುವಾಗ ಸಂಪ್ಯ ಶಾಲೆಯನ್ನು ಕೈ ಬಿಟ್ಟಿರುವ ಬಗ್ಗೆ, ಸಭೆ ನಿರೂಪಣೆ ಮಾಡುತ್ತಿದ್ದ ಗ್ರಾ.ಪಂ.ಸದಸ್ಯ ನೇಮಾಕ್ಷ ಸುವರ್ಣರವರಲ್ಲಿ ಸಲಾಂ ವಿಚಾರಿಸಿದರು.ಸಂಪ್ಯ ಶಾಲೆಯು ನಗರ ಸಭಾ ವ್ಯಾಪ್ತಿಯಲ್ಲಿದೆ. ಹೀಗಾಗಿ ಆ ಶಾಲೆಗೆ ಪಂಚಾಯತ್‌ನಿಂದ ನೀಡಲು ಸಾಧ್ಯವಿಲ್ಲ ಎಂದು ನೇಮಾಕ್ಷ ಸುವರ್ಣ ಹೇಳಿದರು.ಕ್ರೀಡಾ ಸಾಮಾಗ್ರಿ ವಿತರಣೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಪಂಚಾಯತ್ ವ್ಯಾಪ್ತಿಯ ವಿದ್ಯಾರ್ಥಿಗಳೇ ಅಲ್ಲಿದ್ದರೂ ಅಲ್ಲಿಗೆ ವಿತರಿಸಿಲ್ಲ ಎಂದು ಸಲಾಂ ಆರೋಪಿಸಿದರು.ಸರಕಾರಿ ನಿಯಮದಂತೆ ಪಂಚಾಯತ್ ವ್ಯಾಪ್ತಿಯ ಶಾಲೆಗಳಿಗೆ ಮಾತ್ರ ವಿತರಿಸಲಾಗುವುದು ಎಂದು ನೇಮಾಕ್ಷ ಸುವರ್ಣ ಮನವರಿಕೆ ಮಾಡಿದರು.ಆದರೆ ಇದಕ್ಕೆ ಸಮಾಧಾನಗೊಳ್ಳದ ಸಲಾಂ, ಇಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಮತ್ತೆ ಮತ್ತೆ ಆರೋಪಿಸಿದ್ದು ಇದೇ ವಿಚಾರದಲ್ಲಿ ಅವರಿಬ್ಬರ ಮಧ್ಯೆ ವಾಗ್ವಾದ ನಡೆಯಿತು.ಪಂಚಾಯತ್ ವ್ಯಾಪ್ತಿಯಲ್ಲಿರುವ ಶಾಲೆಗಳಿಗೆ ಮಾತ್ರವೇ ಪಂಚಾಯತ್‌ನಿಂದ ಯಾವುದೇ ಸೌಲಭ್ಯಗಳನ್ನು ನೀಡಲಾಗುವುದು.ಸಂಪ್ಯ ಶಾಲೆಯು ನಗರ ಸಭಾ ವ್ಯಾಪ್ತಿಯಲ್ಲಿದ್ದು ನಗರ ಸಭೆಯ ಪೌರಾಯುಕ್ತರಲ್ಲಿ ಮನವಿ ಮಾಡಬೇಕು ಎಂದು ಹೇಳಿದ ಪಿಡಿಒ ನಾಗೇಶ್, ಮಾನವೀಯ ನೆಲೆಯಲ್ಲಿ ಸ್ವಾತಂತ್ರ್ಯೋತ್ಸದ ದಿನ ಪಂಚಾಯತ್‌ನಿಂದ ಈ ಶಾಲೆಗೂ ಸಿಹಿತಿಂಡಿ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.


ಆಶಾ, ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ ಏರಿಕೆ ಮಾಡಿ:
ಕಳೆದ ಅವಧಿಯಲ್ಲಿ ಸರಕಾರಿ ನೌಕರರ ವೇತನ ಏರಿಕೆ ಮಾಡಿದೆ.ಆದರೆ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ ಏರಿಕೆ ಮಾಡಿಲ್ಲ.ಇವರು ತಳ ಮಟ್ಟದಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತಿದ್ದು ಅವರಿಗೂ ಗೌರವ ಧನ ಏರಿಕೆ ಮಾಡಬೇಕು ಎಂದು ಕೇಶವ ಸುವರ್ಣ ಆಗ್ರಹಿಸಿದರು.


ಸಭೆಯ ನಿರ್ಣಯದ ಪ್ರತಿ ವಿಧಾನ ಸೌಧಕ್ಕೆ ತಲುಪಬೇಕು:
ಗ್ರಾಮ ಸಭೆಯಲ್ಲಿ ಬರುವ ಬೇಡಿಕೆ, ಆಗ್ರಹಗಳ ನಿರ್ಣಯಗಳ ಪ್ರತಿಯನ್ನು ತಾ.ಪಂ., ಜಿ.ಪಂಗೆ ಕಳುಹಿಸಿದರೆ ಯಾವುದೇ ಪ್ರಯೋಜನವಾಗುವುದಿಲ್ಲ.ಹೀಗಾಗಿ ಪಂಚಾಯತ್‌ನ ಗ್ರಾಮ ಸಭೆ, ಸಾಮಾನ್ಯ ಸಭೆಯಲ್ಲಿ ಕೈಗೊಳ್ಳುವ ನಿರ್ಣಯಗಳ ಪ್ರತಿಯನ್ನು ನೇರವಾಗಿ ವಿಧಾನ ಸೌಧದ ಆಯಾ ವಿಭಾಗಗಳಿಗೆ ಕಳುಹಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.


ಸದಸ್ಯರು, ಅಧಿಕಾರಿಗಳ ಗೈರು ಗ್ರಾಮಸ್ಥರ ಅಸಮಾಧಾನ:
ಸಭೆಯಲ್ಲಿ 8 ಮಂದಿ ಸದಸ್ಯರು ಹಾಗೂ ಕೆಲವು ಇಲಾಖೆಗಳ ಅಧಿಕಾರಿಗಳು ಗೈರಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಗ್ರಾಮಸ್ಥರು ಸದಸ್ಯರು ಗೈರಾಗಿರುವುದಕ್ಕೆ ಕಾರಣವೇನು?ಎಂದರಲ್ಲದೆ, ಅಧಿಕಾರಿಗಳೇ ಗೈರಾಗುವುದಾದರೆ ಗ್ರಾಮ ಸಭೆ ಯಾಕೆ ಎಂದು ಪ್ರಶ್ನಿಸಿದರು.ಗೈರಾದ ಸದಸ್ಯರ ಪೈಕಿ ಇಬ್ಬರು ಕರೆಮಾಡಿ ಕಾರಣ ತಿಳಿಸಿರುವುದಾಗಿ ಅಧ್ಯಕ್ಷೆ ಗೀತಾ ತಿಳಿಸಿದರು.


ಕ್ರೀಡಾ ಸಾಮಾಗ್ರಿ ವಿತರಣೆ:
ಪಂಚಾಯತ್ ವ್ಯಾಪ್ತಿಯ ಇಡಬೆಟ್ಟು, ಹಂಟ್ಯಾರ್, ಕುರಿಯ ಮಾವಿನಕಟ್ಟೆ ಹಾಗೂ ಕುಂಜೂರುಪಂಜ ಶಾಲೆಗಳಿಗೆ ವಿವಿಧ ಕ್ರೀಡಾ ಸಾಮಾಗ್ರಿಗಳಿರುವ ಕಿಟ್‌ನ್ನು ಗ್ರಾಮ ಸಭೆಯಲ್ಲಿ ವಿತರಿಸಲಾಯಿತು. ಶಾಲೆಗಳಿಗೆ ಕ್ರೀಡಾ ಸಾಮಾಗ್ರಿ ವಿತರಿಸಿದ ಪಂಚಾಯತ್‌ಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು. ಸಂವಿಧಾನ ದಿನಾಚರಣೆಯ ಸಂದರ್ಭ ನಡೆಸಲಾದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಶಾಲಾ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.
ಸಂಟ್ಯಾರ್ ಅಂಗನವಾಡಿಯಲ್ಲಿ ನೀರಿನ ಸಮಸ್ಯೆಯಿದ್ದು ಅದಕ್ಕೆ ಶಾಶ್ವತ ಪರಿಹಾರ ನೀಡಬೇಕು.ಯಾವುದೇ ಕಾಮಗಾರಿ ಪೂರ್ಣಗೊಳ್ಳದೇ ಎನ್‌ಒಸಿ ನೀಡಬಾರದು.ಕಿನ್ನಿಮಜಲು ಸ್ಮಶಾನಕ್ಕೆ ದಾರಿ ಸೌಲಭ್ಯ ಕಲ್ಪಿಸಬೇಕು ಎಂದು ಬೇಡಿಕೆ ವ್ಯಕ್ತವಾಯಿತು.


ಸಾಧಕರಿಬ್ಬರಿಗೆ ಗ್ರಾಮ ಸಭಾ ಪುರಸ್ಕಾರ
ಪಂಚಾಯತ್ ವ್ಯಾಪ್ತಿಯ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಅವರಿಗೆ ಗ್ರಾಮ ಪುರಸ್ಕಾರ ನೀಡಲಾಗುತ್ತಿದು ಈ ಬಾರಿ ಗ್ರಾಮ ಸಭೆಯಲ್ಲಿ ನಾಟಕ, ಯಕ್ಷಗಾನ ಕಲಾವಿದ ಸುಬ್ಬು(ಸುಬ್ರಹ್ಮಣ್ಯ)ಸಂಟ್ಯಾರ್ ಹಾಗೂ ನಾಟಿ ವೈದ್ಯರು, ದೈವನರ್ತಕ ಪುತ್ತ ಯಾನೆ ಕೊರಗ ಅಜಿಲ ಪಿಲಿಗುಂಡ ಇವರಿಗೆ ಆರ್ಯಾಪು ಗೌರವ ಗ್ರಾಮ ಸಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ರೂ.5000ದ ಚೆಕ್ ಹಾಗೂ ಫಲಪುಷ್ಪ, ಸ್ಮರಣಿಕೆಯೊಂದಿಗೆ ಗ್ರಾಮ ಸಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.


ಉಪಾಧ್ಯಕ್ಷ ಅಶೋಕ್ ಕುಮಾರ್, ಸದಸ್ಯರಾದ ಯತೀಶ್ ದೇವಾ, ವಸಂತ ಶ್ರೀದುರ್ಗಾ, ಚೇತನ್, ಹರೀಶ್ ನಾಯಕ್, ಶ್ರೀನಿವಾಸ ರೈ, ಯಾಕೂಬ್, ಸುಲೈಮಾನ್, ನಾಗೇಶ್, ಸರಸ್ವತಿ. ಪೂರ್ಣಿಮಾ ರೈ, ಕಸ್ತೂರಿ, ಕಲಾವತಿ ಹಾಗೂ ದೇವಕಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಪಿಡಿಓ ನಾಗೇಶ್ ಸ್ವಾಗತಿಸಿದರು. ಕಾರ್ಯದರ್ಶಿ ಮೋನಪ್ಪ ವಂದಿಸಿದರು.ಸದಸ್ಯ ನೇಮಾಕ್ಷ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here