ಭಾರತ ಸರಕಾರದ ಇಂಡಿಯನ್ ರೋಡ್ ಕಾಂಗ್ರೆಸ್ ತಾಂತ್ರಿಕ ಸಮಿತಿಗೆ ಡಾ.ಹರ್ಷಕುಮಾರ್ ರೈ ಆಯ್ಕೆ

0

ಪುತ್ತೂರು: ನವದೆಹಲಿಯಲ್ಲಿ ಕೇಂದ್ರ ಕಛೇರಿ ಹೊಂದಿರುವ ಭಾರತ ಸರಕಾರ ಸ್ವಾಮ್ಯದ ಇಂಡಿಯನ್ ರೋಡ್ ಕಾಂಗ್ರೆಸ್ ಇದರ ತಾಂತ್ರಿಕ ಸಮಿತಿಗೆ ಸದಸ್ಯರಾಗಿ ಯುವ ಹೈವೇ ಇಂಜೀನಿಯರ್ ಪುತ್ತೂರಿನ ಡಾ.ಹರ್ಷಕುಮಾರ್ ರೈ ಮಾಡಾವು ಅವರನ್ನು ಆಯ್ಕೆ ಮಾಡಿ ನೇಮಕಗೊಳಿಸಲಾಗಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಇದರ ಆರ್ಕಿಟೆಕ್ಟ್ ಮತ್ತು ಕನ್ಸಲೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಹರ್ಷಕುಮಾರ್ ರೈ ರವರು ಬ್ರೈಟ್‌ವೇ ಇಂಡಿಯಾ ಸಂಸ್ಥೆಯ ಮೂಲಕ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಪಟ್ಟ ಅನುಮತಿ ದೊರಕಿಸುವ ತಂತ್ರಜ್ಞರಾಗಿ ಕೆಲಸ ಮಾಡುತ್ತಿದ್ದಾರೆ. ಇಂಡಿಯನ್ ರೋಡ್ ಕಾಂಗ್ರೆಸ್ 1934 ರಲ್ಲಿ ಸ್ಥಾಪನೆಯಾಗಿದ್ದು ರಸ್ತೆ ನಿರ್ಮಾಣಕ್ಕೆ ಪೂರಕವಾದ ಹೊಸ ಹೊಸ ತಂತ್ರಜ್ಞಾನ ಮತ್ತು ವಿನ್ಯಾಸಗಳನ್ನು ಅನುಷ್ಠಾನಗೊಳಿಸುವಲ್ಲಿ ಮತ್ತು ಸಂಶೋಧನೆ ನಡೆಸಿ ತಾಂತ್ರಿಕ ಬದಲಾವಣೆ ತರುವ ಜವಾಬ್ದಾರಿಯನ್ನು ನಿರ್ವಹಿಸುತ್ತಾ ಕೇಂದ್ರ ಸರಕಾರಕ್ಕೆ ಸಲಹೆ ಸೂಚನೆ ನೀಡುವ ಏಕೈಕ ರಸ್ತೆ ತಂತ್ರಜ್ಞಾನ ಸಂಸ್ಥೆಯಾಗಿದೆ.

ಭಾರತ ಸೇರಿದಂತೆ ಒಮನ್ ಸೌದಿ ಅರೇಬಿಯ ಯು ಎ ಇ ರಾಷ್ಟ್ರಗಳಲ್ಲಿ ರಸ್ತೆ ಮತ್ತು ಮೂಲಭೂತ ಸೌಕರ್ಯ ತಂತ್ರಜ್ಞರಾಗಿ ಕಾರ್ಯನಿರ್ವಹಿಸಿ ಅನುಭವ ಹೊಂದಿರುವ ಹರ್ಷಕುಮಾರ್ ರೈ 15 ಕ್ಕೂ ಹೆಚ್ಚು ರಾಷ್ಟ್ರೀಯ, ಅಂತರಾಷ್ಟ್ರೀಯ ತರಬೇತಿಯನ್ನು ಪಡೆದಿದ್ದಾರೆ. ಸುರತ್ಕಲ್ ಎನ್‌ಐಟಿಕೆಯಲ್ಲಿ ಟ್ರಾನ್ಸ್‌ಪೊರ್ಟೆಶನ್ ಇಂಜಿನಿಯರಿಂಗ್‌ನಲ್ಲಿ ಎಂ.ಟೆಕ್ ಪದವಿ ಪೂರೈಸಿರುವ ಇವರು ಕರಾವಳಿಯ ರಸ್ತೆ ಗುಣಮಟ್ಟಕ್ಕೆ ಸಂಬಂಧಪಟ್ಟ ಸಂಶೋಧನೆ ನಡೆಸಿ ಮಲೇಶ್ಯಾದ ಅಂತರಾಷ್ಟ್ರೀಯ ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ಗೌರವವನ್ನು ಪಡೆದಿದ್ದಾರೆ. ಇಂಜಿನಿಯರಿಂಗ್‌ನಲ್ಲಿ ರಾಜ್ಯಕ್ಕೆ ರ್‍ಯಾಂಕ್ ವಿದ್ಯಾರ್ಥಿಯಾಗಿ ಗುರುತಿಸಿಕೊಂಡು 2011ನೇ ಇಸವಿಯಲ್ಲಿ ಕಿರಿಯ ವಯಸ್ಸಿನಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮಾಡಿರುವ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಾಧನೆಗೆ ಅನಿವಾಸಿ ಭಾರತೀಯ ವಿಭಾಗದಲ್ಲಿ ಪ್ರತಿಷ್ಠಿತ ಭಾರತ್ ಸಮ್ಮಾನ್ ಪ್ರಶಸ್ತಿಯಿಂದ ಗೌರವಿಸಲ್ಪಟ್ಟಿರುವ ಇವರು ಫ್ರಾನ್ಸ್‌ನಲ್ಲಿ ವರ್ಲ್ಡ್ ರೋಡ್ ಅಸೋಸಿಯೇಷನ್ ಇದರ ಸದಸ್ಯತ್ವವನ್ನು ಪಡೆದಿರುವ ಕೆಲವೇ ಭಾರತೀಯರಲ್ಲಿ ಒಬ್ಬರಾಗಿದ್ದಾರೆ.

ಇವರ ಬ್ರೈಟ್‌ವೇ ಸಂಸ್ಥೆಯು ಕಳೆದ 10 ವರ್ಷಗಳಲ್ಲಿ 1300ಕ್ಕೂ ಹೆಚ್ಚು ಪೆಟ್ರೋಲ್ ಪಂಪ್‌ಗಳಿಗೆ ರಾಷ್ಟ್ರೀಯ ಹೆದ್ದಾರಿಯ ಅನುಮತಿ ಕೊಡಿಸಿ ಪೆಟ್ರೋಲ್ ಪಂಪ್ ನಿರ್ಮಾಣ ಮಾಡುವಲ್ಲಿ ಬಹಳ ದೊಡ್ಡ ಪಾತ್ರವಹಿಸಿದೆ ಮಾತ್ರವಲ್ಲದೆ ಪಬ್ಲಿಕ್ ರಿಲೇಷನ್ಸ್ ಕೌನ್ಸಿಲ್ ಆಫ್ ಇಂಡಿಯಾದಿಂದ ಅತ್ಯುತ್ತಮ ಸಂಸ್ಥೆ ಎನ್ನುವ ಪ್ರಶಂಸೆಯನ್ನು ಕೂಡ ಪಡೆದಿದೆ.
ತಮ್ಮ ಉದ್ಯೋಗ, ಉದ್ಯಮದ ಜೊತೆಗೆ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಇವರು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಕೋಶಾಧ್ಯಕ್ಷರಾಗಿ, ರೋಟರಿ ರಸ್ತೆ ಸುರಕ್ಷತೆ ಮತ್ತು ಜಾಗೃತೆಯ ಜಿಲ್ಲಾ ಚೇರ್‌ಮ್ಯಾನ್ ಆಗಿ, ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷರಾಗಿ, ಅಸೋಸಿಯೇಷನ್ ಆಫ್ ಕೌನ್ಸಿಲಿಂಗ್ ಸಿವಿಲ್ ಇಂಜೀನಿಯರ್‍ಸ್ ಮಂಗಳೂರು ಇದರ ಕಮಿಟಿ ಸದಸ್ಯರಾಗಿ, ರಾಜ್ಯ ವಿಜ್ಞಾನ ಪರಿಷತ್ ಸದಸ್ಯರಾಗಿ, ಜನ್ಮ ಫೌಂಡೇಷನ್ ಟ್ರಸ್ಟ್‌ನ ಅಧ್ಯಕ್ಷರಾಗಿ ಹಲವಾರು ಸಂಘ ಸಂಸ್ಥೆಗಳ ಜೊತೆ ಸೇರಿಕೊಂಡು ಸಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಇವರು ಕುರಿಯ ಮಾಡಾವು ಏಳ್ನಾಡುಗುತ್ತು ಮೋಹನ್ ರೈ ಮತ್ತು ಜಯಂತಿ ರೈ ಮಿತ್ರಂಪಾಡಿ ದಂಪತಿಗಳ ಪುತ್ರ.

LEAVE A REPLY

Please enter your comment!
Please enter your name here