ಕುರಿಯ:ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಜೆಸಿಬಿಯಿಂದ ಮನೆ ಕೆಡವಿ ಲಕ್ಷಾಂತರ ರೂ.ನಷ್ಟ-ದೂರು

0

ಪುತ್ತೂರು:ಸಂಬಂಧಿಸಿದ ಯಾರೂ ಇಲ್ಲದ ಸಮಯ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಜೆಸಿಬಿಯಿಂದ ಹೆಂಚಿನ ಮಾಡಿನ ಮನೆಯೊಂದನ್ನು ಕೆಡವಿ ನಷ್ಟ ಉಂಟು ಮಾಡಿದ ಘಟನೆ ಮಾ.9ರ ಮಧ್ಯಾಹ್ನ ಕುರಿಯದಲ್ಲಿ ನಡೆದಿರುವುದಾಗಿ ವರದಿಯಾಗಿದೆ.ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಮಾಹಿತಿ ಪಡೆದುಕೊಂಡಿದ್ದಾರೆ.


ಪುತ್ತೂರು ಆದರ್ಶ ಆಸ್ಪತ್ರೆ ಬಳಿಯಿರುವ ಹೊಟೇಲ್ ಶ್ರೀಲಕ್ಷ್ಮೀ ಇದರ ಮಾಲಕ, ಕುರಿಯ ಹೊಸಮಾರು ನಿವಾಸಿ ವಸಂತ ಪೂಜಾರಿ ಎಂಬವರು ಘಟನೆ ಕುರಿತು ಸಂಪ್ಯ ಪೊಲೀಸರಿಗೆ ದೂರು ನೀಡಿ.‘ನಮ್ಮ ಸ್ವಾಧೀನದಲ್ಲಿರುವ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಮನೆಯೊಳಗೆ ಜೆಸಿಬಿ ನುಗ್ಗಿಸಿ ಮನೆಯನ್ನು ಕೆಡವಿ ಮನೆಯ ವಸ್ತುಗಳನ್ನೆಲ್ಲಾ ನಾಶ ಮಾಡಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ನಾನು ಮತ್ತು ಪತ್ನಿ ಜಯಮಾಲ ವಾಸ್ತವ್ಯವಿದ್ದ ಮನೆಯನ್ನು ಜೆಸಿಬಿ ಮೂಲಕ ಕೆಡವಲಾಗಿದೆ.ನಾನು ಪತ್ನಿ ಜಯಮಾಲಾ ಹೆಸರಲ್ಲಿ ಎಗ್ರಿಮೆಂಟ್ ಮೂಲಕ ಸೂತ್ರಬೆಟ್ಟು ನಿವಾಸಿ ಶಶಿಕಲಾ ಅವರಿಂದ ಜಾಗವನ್ನು ಖರೀದಿಸಿದ್ದು ಪ್ರಸ್ತುತ ಮನೆಯು ನನ್ನ ಪತ್ನಿಯ ಹೆಸರಲ್ಲಿದ್ದು ನಮ್ಮ ಸ್ವಾಧಿನದಲ್ಲಿತ್ತು.ಈ ನಡುವೆ ನಮಗೂ, ಶಶಿಕಲಾ ರೈ ಅವರಿಗೂ ಜಾಗದ ವಿಚಾರದಲ್ಲಿ ತಕರಾರುಂಟಾಗಿ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು.ಮಾ.8ರಂದು ನಾನು ಪತ್ನಿಯ ತವರು ಮನೆ ಪಂಜಕ್ಕೆ ಹೋಗಿದ್ದೆ.ಪತ್ನಿಯ ಹೆಸರಿನಲ್ಲಿರುವ ಮನೆಯನ್ನು ಜೆಸಿಬಿಯಿಂದ ಕೆಡವಲಾಗುತ್ತಿದೆ ಎಂದು ಮಾ.9ರಂದು ನನಗೆ ಬಂದ ದೂರವಾಣಿ ಕರೆಯಂತೆ ನಾನು ತಕ್ಷಣ ಮನೆಯ ಕಡೆ ಬಂದು ನೋಡಿದಾಗ ಮನೆಯನ್ನು ಜೆಸಿಬಿಯಿಂದ ಸಂಪೂರ್ಣ ಕೆಡವಲಾಗಿತ್ತು.ಘಟನೆ ಕುರಿತು ಸ್ಥಳೀಯರ ಮೂಲಕ ಮಾಹಿತಿ ಪಡೆದಾಗ, ಸೂತ್ರಬೆಟ್ಟು ಶಶಿಕಲಾ ರೈಯವರ ಮಗ ಉಜ್ವಲ್ ರೈಯವರು ಬಂದು ‘ರಾಜಾಹುಲಿ’ ಎಂದು ಬರೆದಿರುವ ಜೆಸಿಬಿಯಲ್ಲಿ ಮನೆಯನ್ನು ಕೆಡವಲಾಗಿದೆ ಎಂದು ತಿಳಿದು ಬಂದಿದೆ ಎಂದು ವಸಂತ ಪೂಜಾರಿ ಅವರು ಸಂಪ್ಯ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಶಶಿಕಲಾ ರೈ,ಮತ್ತವರ ಮಗ ಉಜ್ವಲ್ ರೈ ಹಾಗೂ ಜೆಸಿಬಿ ಆಪರೇಟರ್ ವಿರುದ್ಧ ಅವರು ದೂರು ನೀಡಿದ್ದಾರೆ.ಪೊಲೀಸರು ಕಲಂ 447,448,427,34 ಐಪಿಸಿಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಲಕ್ಷಾಂತರ ರೂ.ಗಳ ಸೊತ್ತುನಾಶ:
ಘಟನೆಯಿಂದಾಗಿ ಮನೆಯ ಒಳಗೆ ಇದ್ದ ಗೃಹ ಬಳಕೆ ವಸ್ತುಗಳು ಸಂಪೂರ್ಣ ನಾಶವಾಗಿರುತ್ತವೆ.ರೂ.2.35 ಲಕ್ಷ ಮೌಲ್ಯದ ಚಿನ್ನಾಭರಣ ಸಹಿತ ಮನೆಯ ವಸ್ತುಗಳು ಹಾಗೂ ಬಟ್ಟೆಬರೆಗಳು ಸೇರಿ ಲಕ್ಷಾಂತರ ರೂ.ಮೌಲ್ಯದ ಸೊತ್ತುಗಳು ನಾಶವಾಗಿರುವುದಾಗಿ ವಸಂತ ಪೂಜಾರಿ ಅವರು ದೂರಿನಲ್ಲಿ ತಿಳಿಸಿದ್ದಾರೆ.


ವಸಂತ ಪೂಜಾರಿಯವರ ಪತ್ನಿ ಅಸ್ವಸ್ಥರಾಗಿ ಮಂಗಳೂರು ಫಾ| ಮುಲ್ಲರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.ಅಲ್ಲಿ ಚೇತರಿಸಿಕೊಂಡ ಅವರು ಪಂಜದಲ್ಲಿ ತವರು ಮನೆಯದ್ದರು.ಮಾ.8ರಂದು ವಸಂತ ಪೂಜಾರಿಯವರು ಹೆಂಡತಿಯ ತವರು ಮನೆ ಪಂಜಕ್ಕೆ ಹೋಗಿದ್ದರು.ಮಾ.9ರಂದು, ಕುರಿಯಲ್ಲಿದ್ದ ಅವರ ಮನೆಯನ್ನು ಕೆಡವಲಾಗಿದೆ.ಕಳೆದ ಕೆಲವು ಸಮಯಗಳಿಂದ ಇವರ ಹೊಟೇಲ್ ವ್ಯವಹಾರವೂ ಸ್ಥಗಿತಗೊಂಡಿದ್ದು,ಮಾ.11ರಂದು ಹೊಟೇಲ್ ಪುನರಾರಂಭಿಸುವುದಾಗಿ ಸ್ಥಳೀಯರಲ್ಲಿ ಹೇಳಿಕೊಂಡಿದ್ದರು.ಈ ಮಧ್ಯೆ ಮನೆ ಕೆಡವಿರುವ ಘಟನೆ ಅವರಿಗೆ ಮತ್ತೊಂದು ಆಘಾತ ಉಂಟು ಮಾಡಿದೆ ಎಂಬ ಮಾತು ಅವರ ಆಪ್ತ ವಲಯದಿಂದ ಕೇಳಿ ಬರುತ್ತಿದೆ.

LEAVE A REPLY

Please enter your comment!
Please enter your name here