ಪುತ್ತೂರು: ಕುರಿಯ ಹೊಸಮಾರು ಎಂಬಲ್ಲಿ ಜೆಸಿಬಿ ಮೂಲಕ ಮನೆಯೊಂದನ್ನು ಕೆಡವಿ ಧ್ವಂಸ ಮಾಡಿ ಲಕ್ಷಾಂತರ ರೂ.ನಷ್ಟ ಉಂಟು ಮಾಡಿದ್ದ ಘಟನೆಗೆ ಸಂಬಂಧಿಸಿ ಮೂವರ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿ,ದೂರುದಾರ ಸಹಿತ ಇಬ್ಬರ ವಿರುದ್ಧ ಶಶಿಕಲಾ ಪಿ.ಸೂತ್ರಬೆಟ್ಟುರವರು ಪೊಲೀಸರಿಗೆ ಪ್ರತಿದೂರು ನೀಡಿದ್ದಾರೆ.
ಮಾ.11ರಂದು ಪುತ್ತೂರು ಡಿವೈಎಸ್ಪಿಯವರಿಗೆ ಅವರು ದೂರೊಂದನ್ನು ನೀಡಿದ್ದಾರೆ.`ಕುರಿಯ ಹೊಸಮಾರು ಎಂಬಲ್ಲಿ ಮನೆ ನಂಬ್ರ 3-7ರಲ್ಲಿ ನನ್ನ ಮೂಲ ದಾಖಲೆಯನ್ನು ಹೊಂದಿರುವ ಮನೆಯಾಗಿದ್ದು ತೋಟ ಹಾಗೂ ಹಟ್ಟಿ, ಅಡಿಕೆ ದಾಸ್ತಾನು ಕೊಠಡಿಯನ್ನು ಹೊಂದಿದ್ದು ಅಕ್ರಮವಾಗಿ ಪ್ರವೇಶ ಮಾಡಿದ ವಸಂತ ಪೂಜಾರಿ ಮತ್ತು ಜಯಮಾಲ ಎಂಬವರು ನನ್ನ ಮೂಲ ದಾಖಲೆಯಿದ್ದ ಹಟ್ಟಿ, ಅಡಿಕೆ ದಾಸ್ತಾನು ಕೊಠಡಿಯನ್ನು ಕೆಡವಿ ಅಡಿಕೆ, ತೆಂಗು, ಬಾಳೆ, ಕಾಳುಮೆಣಸು ಅಕ್ರಮವಾಗಿ ತೆಗೆದು ಮಾರಾಟ ಮಾಡಿರುವಂತೆ, ಪುತ್ತೂರು ಕೋರ್ಟು ಕೇಸಿನಲ್ಲಿದೆ.ನನ್ನ ವಾಸ್ತವ್ಯದ ಮನೆಯನ್ನು ದುರಸ್ಥೆಗೊಳಿಸಿರುತ್ತಾರೆ.ಹಾಗಾಗಿ ನನ್ನ ಸುಪರ್ದಿಯಲ್ಲಿದ್ದ ಮನೆಯನ್ನು ಕೆಡವಿ ಸುವ್ಯವಸ್ಥೆಗೊಳಿಸಲು ತಯಾರಿ ನಡೆಸಿರುತ್ತೇನೆ.ಈ ಸಂದರ್ಭದಲ್ಲಿ ನಕಲಿ ದಾಖಲೆಗಳ ಹೆಸರನ್ನು ಹೇಳಿ ಸಂಪ್ಯ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿರುತ್ತಾರೆ’ ಎಂದು ವಸಂತ ಪೂಜಾರಿ ಮತ್ತು ಜಯಮಾಲಾ ವಿರುದ್ಧ ಡಿವೈಎಸ್ಪಿಯವರಿಗೆ ದೂರು ನೀಡಿರುವ ಶಶಿಕಲಾ ಅವರು, ನನ್ನ ಸುಪರ್ದಿಯಲ್ಲಿರುವ ಜಾಗಕ್ಕೆ ಅಕ್ರಮ ಪ್ರವೇಶ ಮಾಡದಂತೆ, ನನಗೆ ಮತ್ತು ಮಗನಿಗೆ ರಕ್ಷಣೆ ನೀಡಬೇಕಾಗಿ ಮನವಿ ಮಾಡಿದ್ದಾರೆ.
ಸಂಬಂಧಿಸಿದ ಯಾರೂ ಇಲ್ಲದ ಸಮಯ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಜೆಸಿಬಿಯಿಂದ ಹೆಂಚಿನ ಮಾಡಿನ ಮನೆಯನ್ನು ಕೆಡವಿ ನಷ್ಟ ಉಂಟು ಮಾಡಿರುವುದಾಗಿ ಆರೋಪಿಸಿ ಕುರಿಯ ಹೊಸಮಾರು ನಿವಾಸಿ, ಪುತ್ತೂರು ಆದರ್ಶ ಆಸ್ಪತ್ರೆ ಬಳಿಯಿರುವ ಹೊಟೇಲ್ ಶ್ರೀಲಕ್ಷ್ಮೀ ಇದರ ಮಾಲಕ ವಸಂತ ಪೂಜಾರಿ ಎಂಬವರು ನೀಡಿದ್ದ ದೂರಿನ ಮೇರೆಗೆ ಶಶಿಕಲಾ ರೈ, ಮತ್ತವರ ಮಗ ಉಜ್ವಲ್ ರೈ,ಜೆಸಿಬಿ ಆಪರೇಟರ್ ವಿರುದ್ಧ ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.ಇದೇ ಪ್ರಕರಣಕ್ಕೆ ಸಂಬಂಧಿಸಿ ಇದೀಗ ವಸಂತ ಪೂಜಾರಿ-ಜಯಮಾಲಾ ಅವರ ವಿರುದ್ಧ ಶಶಿಕಲಾ ಅವರು ಪೊಲೀಸರಿಗೆ ಪ್ರತಿದೂರು ನೀಡಿ, ವಸಂತ ಪೂಜಾರಿ-ಜಯಮಾಲಾ ಅವರು ನಕಲಿ ದಾಖಲೆಗಳ ಮೂಲಕ ಪೊಲೀಸರಿಗೆ ತಮ್ಮ ವಿರುದ್ಧ ದೂರು ನೀಡಿರುವುದಾಗಿ ಆರೋಪಿಸಿದ್ದಾರೆ.