ಬೆದ್ರೋಡಿ: ನೇತ್ರಾವತಿ ನದಿಯಲ್ಲಿ ಕಾಡಾನೆ

0

ಉಪ್ಪಿನಂಗಡಿ: ಕಾಡಾನೆಯೊಂದು ಮೊಗ್ರು, ಬೆದ್ರೋಡಿ, ನೀರಕಟ್ಟೆ ಪರಿಸರದಲ್ಲಿ ಕಾಣಿಸಿಕೊಂಡು ಜನರಲ್ಲಿ ಭೀತಿಯನ್ನು ಮೂಡಿಸಿದ ಘಟನೆ ಮಂಗಳವಾರ ಸಂಭವಿಸಿದೆ.
ಮಂಗಳವಾರ ಬೆಳಗ್ಗೆ ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದಲ್ಲಿ ಕಾಣಿಸಿಕೊಂಡ ಒಂಟಿ ಸಲಗವು ನೇತ್ರಾವತಿ ನದಿಯಲ್ಲಿ ವಿಹರಿಸುತ್ತಾ ಬೆದ್ರೋಡಿ, ವಳಾಲು, ನೀರಕಟ್ಟೆ ಪರಿಸರದಲ್ಲಿ ಸಂಚರಿಸಿತ್ತು. ನದಿಯಲ್ಲಿ ಸಂಚರಿಸುತ್ತಿದ್ದ ವೇಳೆ ನದಿಯ ನೀರನ್ನು ತನ್ನ ಸೊಂಡಿಲಿನಿಂದ ತನ್ನ ಮೈಗೆಲ್ಲಾ ಸಿಂಪಡಿಸುತ್ತಾ ಬಿಸಿಲ ಝಳಕ್ಕೆ ತಂಪೆರೆಯುತ್ತಿತ್ತು.
ನದಿ ಪಾತ್ರದಲ್ಲಿ ತನ್ನ ಸಂಚಾರದ ವೇಳೆ ಒಂದು ಪಂಪು ಶೆಡ್ ಕೆಲ ಬಾಳೆ ಗಿಡಗಳಿಗೆ ಹಾನಿಯಾಗಿರುವುದನ್ನು ಹೊರತು ಪಡಿಸಿ ಬೇರಾವುದೇ ಹಾನಿಯುಂಟಾಗಲಿಲ್ಲ. ತನ್ನ ಎಂದಿನ ಕಾಡಿನೊಳಗಿನ ಸಂಚಾರ ಪಥದಲ್ಲಿ ದಿಕ್ಕು ತಪ್ಪಿಸಿಕೊಂಡು ಬಂದಿರುವ ಈ ಆನೆಯು ದಿನದುದ್ದಕ್ಕೂ ಶಾಂತಯುತವಾಗಿಯೇ ವರ್ತಿಸಿದ್ದು, ಪುನರಪಿ ಕಾಡಿನ ದಾರಿ ತಿಳಿಯದೆ ನದಿ ತಟದಲ್ಲಿ ಸಂಚರಿಸಿತ್ತು. ಮಂಗಳವಾರ ಸಾಯಂಕಾಲದಿಂದ ಮತ್ತೆ ನೀರಕಟ್ಟೆಯಿಂದ ವಳಾಲಿನತ್ತ ಪ್ರಯಾಣ ಬೆಳೆಸಿದ ಈ ಆನೆಯು ರಾತ್ರಿ ವೇಳೆ ಕಾಡಿನೊಳಗೆ ಪ್ರವೇಶಿಸಿದೆ ಎಂದು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ತಿಳಿಸಿದ್ದಾರೆ.
ಕಾಡಿನೊಳಗೆ ದಿಕ್ಕು ತಪ್ಪಿ ಜನವಸತಿ ಪ್ರದೇಶದೊಳಗೆ ಬರುವ ಆನೆಯನ್ನು ಜನರು ಪಟಾಕಿ ಸಿಡಿಸಿ, ಭೀತಿ ಹುಟ್ಟಿಸಿ ಓಡಿಸುವ ಯತ್ನ ಮಾಡುವುದರಿಂದಲೇ ಈ ರೀತಿ ಆನೆಗಳು ತನ್ನ ನೈಜ ಪಥವನ್ನು ಬಿಟ್ಟು ಎಲ್ಲೆಲ್ಲೋ ಅಲೆಯುವಂತಾಗುವುದು. ಆನೆಗಳೊಂದಿಗೆ ಶಾಂತಚಿತ್ತವಾಗಿ ವರ್ತಿಸುವುದರಿಂದ ಆನೆಗಳಿಗೆ ಒಮ್ಮೆ ದಿಕ್ಕು ತಪ್ಪಿದರೂ ಮತ್ತೆ ಅದರ ನೈಜ ಪಥವನ್ನು ಹಿಡಿಯಲು ಸಾಧ್ಯವಾಗುತ್ತದೆ. ಈ ಕಾರಣಕ್ಕಾಗಿಯೇ ಮಂಗಳವಾರದಂದು ಆನೆಯತ್ತ ಜನ ಜಮಾಯಿಸದಂತೆ ಪೊಲೀಸರ ಸಹಕಾರ ಪಡೆಯಲಾಗಿದೆ. ಅರಣ್ಯ ಸಿಬ್ಬಂದಿ ಆನೆಯ ಚಲನವಲನದ ಬಗ್ಗೆ ನಿಗಾವಿರಿಸಿ ಆನೆಯನ್ನು ಕಾಡಿನತ್ತ ಸಾಗಲು ಪೂರಕ ವಾತಾವರಣವನ್ನು ಕಲ್ಪಿಸಿಕೊಟ್ಟಿದ್ದಾರೆ ಎಂದು ಅರಣ್ಯಾಧಿಕಾರಿ ಜಯಪ್ರಕಾಶ್ ವಿವರಿಸಿದರು.
ಈ ಸಂದರ್ಭ ಪುತ್ತೂರು ವಲಯ ಉಪ ಅರಣ್ಯಾಧಿಕಾರಿ ಹರ್ಷ, ಅರಣ್ಯ ರಕ್ಷಕರಾದ ಸುಧೀರ್ ಹೆಗ್ಡೆ, ಮಂಜುನಾಥ್, ಉಪ್ಪಿನಂಗಡಿ ವಲಯದ ಉಪ ಅರಣ್ಯಾಧಿಕಾರಿ ಸಂದೀಪ್, ಜಗದೀಶ್, ಅರಣ್ಯ ರಕ್ಷಕ ಜಯಪ್ರಕಾಶ್ ಇದ್ದರು.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here