ಪುತ್ತೂರು: ಜಲಾನಯನ ಯೋಜನೆ ಸೇರಿದಂತೆ ಸರಕಾರದ ವಿವಿಧ ಅನುದಾನಗಳಲ್ಲಿ ಗ್ರಾಮದ ಬಹಳಷ್ಟು ಕಡೆ ತೋಡಿಗೆ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಆದರೆ ಇತ್ತೀಚಿನ ಕೆಲವು ವರ್ಷಗಳಿಂದ ಈ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಜೋಡಿಸದೆ ಇರುವುದರಿಂದ ಅಣೆಕಟ್ಟುಗಳು ಪಾಳು ಬಿದ್ದಿವೆ. ನೀರು ಇಂಗಿಸುವ ಸಲುವಾಗಿ ಸರಕಾರ ಮಾಡಿರುವ ಒಂದು ಒಳ್ಳೆಯ ಯೋಜನೆ ಜನರ ಹಾಗೂ ಗ್ರಾಪಂ ನಿರ್ಲಕ್ಷ್ಯದಿಂದ ಹಾಳಾಗುತ್ತಿದೆ. ಆದ್ದರಿಂದ ಈ ಬಗ್ಗೆ ಗ್ರಾಮ ಪಂಚಾಯತ್ ಕಾಳಜಿ ವಹಿಸಿಕೊಳ್ಳುವ ಮೂಲಕ ಕಿಂಡಿ ಅಣೆಕಟ್ಟುಗಳಿಗೆ ಮತ್ತೆ ಮರುಜೀವ ಕೊಡಬೇಕಾದ ಅಗತ್ಯತೆ ಇದೆ. ಈ ಬಗ್ಗೆ ಪಂಚಾಯತ್ ಕ್ರಮ ವಹಿಸಬೇಕು ಎಂದು ಕೆದಂಬಾಡಿ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದರು.
ಗ್ರಾಮಸಭೆಯು ಗ್ರಾಪಂ ಅಧ್ಯಕ್ಷೆ ಸುಜಾತ ಮುಳಿಗದ್ದೆಯವರ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕರಾದ ಶೈಲಜಾ ಭಟ್‌ರವರ ಮಾರ್ಗದರ್ಶನದಲ್ಲಿ ಮಾ.12ರಂದು ತಿಂಗಳಾಡಿಯಲ್ಲಿರುವ ಪಂಚಾಯತ್ ಕಟ್ಟಡದ ಮೇಲಂಸ್ತಿನ ಸಭಾಂಗಣದಲ್ಲಿ ನಡೆಯಿತು. ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಗ್ರಾಪಂ ಮಾಜಿ ಸದಸ್ಯ ವಿಜಯ ಕುಮಾರ್ ರೈ ಕೋರಂಗರವರು, ಬೇಸಿಗೆ ಕಾಲದಲ್ಲಿ ನೀರನ್ನು ತಡೆ ಹಿಡಿದು ನಿಲ್ಲಿಸುವ ಸಲುವಾಗಿ ಜಲಾನಯನ ಇಲಾಖೆ ಹಾಗೂ ಸರಕಾರದ ವಿವಿಧ ಅನುದಾನಗಳಲ್ಲಿ ಗ್ರಾಮದ ಹಲವು ಕಡೆಗಳಲ್ಲಿ ಕಿಂಡಿ ಅಣೆಕಟ್ಟುಗಳ ನಿರ್ಮಾಣವಾಗಿದೆ. ಗ್ರಾಮದ ಬೂಡುನಿಂದ ಇದ್ಪಾಡಿ ತನಕ ಒಂದೇ ತೋಡಿಗೆ 12 ಕಿಂಡಿಅಣೆಕಟ್ಟುಗಳನ್ನು ಕಟ್ಟಲಾಗಿದೆ.ಇದೇ ರೀತಿಯಲ್ಲಿ ಗ್ರಾಮದಲ್ಲಿ ಸುಮಾರು 20 ಕ್ಕೂ ಅಧಿಕ ಕಿಂಡಿ ಅಣೆಕಟ್ಟುಗಳಿವೆ. ಈ ಅಣೆಕಟ್ಟುಗಳಿಗೆ ಕಳೆದ ಕೆಲವು ವರ್ಷಗಳಿಂದ ಹಲಗೆ ಜೋಡಿಸದೆ ಬಿಟ್ಟಿದ್ದು ಅಣೆಕಟ್ಟುಗಳು ಪಾಳು ಬಿದ್ದಿವೆ. ಈ ಅಣೆಕಟ್ಟುಗಳಿಗೆ ಹಲಗೆ ಜೋಡಿಸಿ ನೀರನ್ನು ತಡೆ ಹಿಡಿಯುವ ಕೆಲಸ ಮಾಡಿದ್ದರೆ ಇಂದು ಗ್ರಾಮದಲ್ಲಿ ನೀರಿಗೆ ಬರ ಬರುವುದು ಸ್ವಲ್ಪವಾದರೂ ತಪ್ಪುತ್ತಿತ್ತು. ಈ ಬಗ್ಗೆ ಗ್ರಾಪಂ ಕಾಳಜಿ ವಹಿಸಿಕೊಳ್ಳಬೇಕು ಎಂದು ತಿಳಿಸಿದರು.
ನಾಮಕಾವಸ್ತೆ ಸಮಿತಿ ರಚನೆ
ಈ ಕಿಂಡಿಅಣೆಕಟ್ಟುಗಳ ನಿರ್ವಹಣೆಗೆ ಒಂದು ಸಮಿತಿಯನ್ನು ರಚನೆ ಮಾಡಬೇಕಾಗಿದೆ. ಈ ಸಮಿತಿ ಇದರ ನಿರ್ವಹಣೆಗೆ ಮಾಡಬೇಕಿದೆ. ಆದರೆ ಗುತ್ತಿಗೆದಾರರ ತಮಗೆ ಬಿಲ್ ಪಾಸ್ ಆಗಬೇಕು ಎಂಬ ನಿಟ್ಟಿನಲ್ಲಿ ನಾಮಕಾವಸ್ತೆ ಸಮಿತಿ ರಚಿಸಿ ಬಿಲ್ ಪಾಸ್ ಮಾಡಿಕೊಂಡಿರುತ್ತಾರೆ. ಈಗ ಅಣೆಕಟ್ಟುಗಳು ನಿರ್ವಹಣೆ ಇಲ್ಲದೆ ಬಣಗುಟ್ಟುತ್ತಿವೆ. ಈ ಬಗ್ಗೆ ಆ ಭಾಗದ ಗ್ರಾಮಸ್ಥರು ಹಾಗೂ ಪಂಚಾಯತ್ ಸೂಕ್ತ ಕ್ರಮ ಕೈಗೊಂಡು ಅಣೆಕಟ್ಟುಗಳಿಗೆ ಮತ್ತೆ ಮರುಜೀವ ಕೊಡುವ ಕೆಲಸ ಮಾಡಬೇಕಾದ ಅನಿವಾರ್‍ಯತೆ ಇದೆ ಎಂದು ತಿಳಿಸಿದರು. ಈ ಬಗ್ಗೆ ಗಮನ ಹರಿಸಲಾಗುವುದು ಎಂದು ಪಂಚಾಯತ್ ಅಭಿವೃದ್ದಿ ಅಧಿಕಾರಿ ಅಜಿತ್ ಜಿ.ಕೆ ತಿಳಿಸಿದರು.
ತಿಂಗಳಾಡಿಗೆ 108 ಆಂಬುಲೆನ್ಸ್ ಬೇಕು
ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರವು ತಾಲೂಕಿನ ಅತೀ ದೊಡ್ಡ ಆರೋಗ್ಯ ಕೇಂದ್ರವಾಗಿದೆ. ಈ ಮೊದಲು ಈ ಆರೋಗ್ಯ ಕೇಂದ್ರಕ್ಕೆ 108 ಆಂಬುಲೆನ್ಸ್ ಸೇವೆ ನೀಡಲಾಗಿತ್ತು. ಆದರೆ ಕಳೆದ ಹಲವು ವರ್ಷಗಳಿಂದ ಈ ಆಂಬುಲೆನ್ಸ್ ಸೇವೆಯನ್ನು ರದ್ದು ಮಾಡಲಾಗಿದೆ. ಪುತ್ತೂರು ಬಿಟ್ಟರೆ ಬೇರೆ ಎಲ್ಲಿಯೂ 108 ಆಂಬುಲೆನ್ಸ್ ಸೇವೆ ಇಲ್ಲದೆ ಇರುವುದರಿಂದ ತಿಂಗಳಾಡಿಗೆ ಅಗತ್ಯವಾಗಿ ಬೇಕಾಗಿದೆ ಎಂದು ಗ್ರಾಪಂ ಸದಸ್ಯ ಭಾಸ್ಕರ ರೈ ಮಿತ್ರಂಪಾಡಿ ತಿಳಿಸಿದರು. ಈ ಬಗ್ಗೆ ಆರೋಗ್ಯ ಇಲಾಖೆಗೆ ಬರೆದುಕೊಳ್ಳುವುದು ಎಂದು ನಿರ್ಣಯಿಸಲಾಯಿತು. ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಕ್ಕಳ ತಜ್ಞರ ಅಗತ್ಯವಿದೆ. ಈ ಬಗ್ಗೆ ಇಲಾಖೆ ಗಮನ ಹರಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಬಶೀರ್ ಡಿ.ಎ ತಿಳಿಸಿದರು.
ವಿದ್ಯುತ್ ಕಂಬಗಳಿಗೆ ಬ್ಯಾನರ್ ಕಟ್ಟುವಂತಿಲ್ಲ…!
ಕಾರ್ಯಕ್ರಮ ಮುಗಿದರೂ ಬ್ಯಾನರ್ ತೆರವು ಮಾಡುತ್ತಿಲ್ಲ, ಇದಲ್ಲದೆ ಕೆಲವು ಕಡೆಗಳಲ್ಲಿ ವಿದ್ಯುತ್ ಕಂಬಗಳಿಗೆ ಬ್ಯಾನರ್ ಕಟ್ಟುತ್ತಾರೆ. ಅವಧಿ ಮುಗಿದ ಬ್ಯಾನರ್‌ಗಳ ತೆರವು ಮಾಡುವುದು, ಪರವಾನಗೆ ಇಲ್ಲದೆ ಬ್ಯಾನರ್ ಅಳವಡಿಸಿದರೆ ಕ್ರಮ ಕೈಗೊಳ್ಳುವುದು ಈ ಬಗ್ಗೆ ಪಂಚಾಯತ್ ಗಮನ ಹರಿಸಬೇಕು ಎಂದು ವಿಜಯ ಕುಮಾರ್ ರೈ ಕೋರಂಗ ತಿಳಿಸಿದರು. ಇದಕ್ಕೆ ಉತ್ತರಿಸಿದ ಮೆಸ್ಕಾಂ ಜೆ.ಇ ರವೀಂದ್ರರವರು, ಯಾವುದೇ ಕಾರಣಕ್ಕೂ ವಿದ್ಯುತ್ ಕಂಬಗಳಿಗೆ ಬ್ಯಾನರ್ ಕಟ್ಟುವಂತಿಲ್ಲ,ಇದು ಅಪರಾಧವಾಗುತ್ತದೆ. ಈ ಬಗ್ಗೆ ಗ್ರಾಮಸ್ಥರು ತಿಳಿದುಕೊಳ್ಳಬೇಕು ಎಂದರು.
ಸನ್ಯಾಸಿಗುಡ್ಡೆ ಜನತಾ ಕಾಲನಿಯಲ್ಲಿ ರಸ್ತೆ ಕುಸಿತ..!
ಸನ್ಯಾಸಿಗುಡ್ಡೆ ಜನತಾ ಕಾಲನಿಯಲ್ಲಿ ರಸ್ತೆಯ ಬದಿ ಕುಸಿತಗೊಂಡಿದ್ದರಿಂದ ವಾಹನ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ. ದ್ವಿಚಕ್ರ ವಾಹನ ಕೂಡ ಹೋಗಲು ಸಾಧ್ಯವಿಲ್ಲದೆ ಇರುವುದರಿಂದ ಬಹಳಷ್ಟು ಸಮಸ್ಯೆಯಾಗಿದೆ. ತಾತ್ಕಾಲಿಕ ತಡೆಗೋಡೆಯಾದರೂ ನಿರ್ಮಾಣ ಮಾಡಬೇಕಾಗಿದೆ. ಈ ಬಗ್ಗೆ ಪಂಚಾಯತ್ ಸ್ಥಳ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತ ಬಶೀರ್ ಡಿ.ಎ ವಿನಂತಿಸಿಕೊಂಡರು. ಪಂಜಿಗುಡ್ಡೆ ಪರಿಸರದಲ್ಲಿ ಕುಡಿಯುವ ನೀರಿನ ಅಭಾವ ಇದ್ದು ಈ ಭಾಗದಲ್ಲಿ ಹೊಸ ಬೋರ್‌ವೆಲ್ ಕೊರೆಯುವ ಅವಶ್ಯಕತೆ ಇದೆ ಎಂದು ಇಸ್ಮಾಯಿಲ್ ಗಟ್ಟಮನೆ ತಿಳಿಸಿದರು.
ಕೆದಂಬಾಡಿಗೆ ಖಾಯಂ ಪಿಡಿಓ ಬೇಕು
ಕೆದಂಬಾಡಿ ಗ್ರಾಮ ಪಂಚಾಯತ್‌ನ ಅಭಿವೃದ್ದಿ ಅಧಿಕಾರಿ ಅಜಿತ್ ಜಿ.ಕೆಯವರಿಗೆ ಹೆಚ್ಚುವರಿಯಾಗಿ ಮುಂಡೂರು ಗ್ರಾಪಂನ ಚಾರ್ಜ್ ನೀಡಲಾಗಿದ್ದು ಇದರಿಂದ ಕೆದಂಬಾಡಿ ಗ್ರಾಮದ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ. ಮೂರು ಅಲ್ಲಿ, ಮೂರು ದಿನ ಇಲ್ಲಿ ಎಂದೇಳಿ ಸಮಸ್ಯೆಯಾಗುತ್ತಿದೆ. ಆದ್ದರಿಂದ ಕೆದಂಬಾಡಿ ಗ್ರಾಪಂ ಪಿಡಿಓ ಖಾಯಂ ಆಗಿ ಕೆದಂಬಾಡಿ ಕಛೇರಿಯಲ್ಲೇ ಇರಬೇಕು ಈ ಬಗ್ಗೆ ತಾಪಂ ಕಾರ್ಯನಿರ್ವಹಣಾಧಿಕಾರಿಯವರು ಗಮನ ಹರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಬೀದಿ ದೀಪಗಳನ್ನು ಸರಿಪಡಿಸಿ
ಗ್ರಾಪಂಗೆ ಎಲ್ಲಾ ಮೂಲಗಳಿಂದ ಸೇರಿ 12 ಲಕ್ಷ ತೆರಿಗೆ ವಸೂಲಾತಿ ಆಗುತ್ತಿದ್ದು ಇದರಲ್ಲಿ ಒಂದಂಶವಾದರೂ ಬೀದಿ ದೀಪಗಳ ದುರಸ್ತಿಗೆ ವಿನಿಯೋಗಿಸಿ, ಗ್ರಾಮದ ಎಲ್ಲಾ ಕಡೆ ಬೀದಿ ದೀಪಗಳು ಸರಿಯಾಗಿ ಉರಿಯುತ್ತಿಲ್ಲ ಈ ಬಗ್ಗೆ ಪಂಚಾಯತ್ ಗಮನ ಹರಿಸಬೇಕು ಎಂದು ಗ್ರಾಪಂ ಮಾಜಿ ಸದಸ್ಯ ರಾಘವ ಗೌಡ ಕೆರೆಮೂಲೆ ತಿಳಿಸಿದರು. ಕೆದಂಬಾಡಿ ಶಾಲೆಯ ಬಳಿ ವಿದ್ಯುತ್ ತಂತಿ ಜೋತುಬಿದ್ದು ಆಗಾಗ ತುಂಡಾಗುತ್ತಿದೆ. ಶಾಲೆಯ ಸಮೀಪವೇ ಈ ಟ್ರಾನ್ಸ್‌ಫಾರ್‍ಮರ್ ಇದ್ದು ತಂತಿ ತುಂಡಾಗಿ ಬೀಳುತ್ತಿರುವುದರಿಂದ ಮಕ್ಕಳಿಗೆ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಮಳೆಗಾಲದಲ್ಲೂ ತಂತಿ ತುಂಡಾಗಿ ಬೀಳುತ್ತಿದೆ. ಈ ಬಗ್ಗೆ ಮೆಸ್ಕಾಂ ಕೂಡಲೇ ಗಮನ ಹರಿಸಬೇಕು ಎಂದು ರಾಘವ ಗೌಡ ಕೆರೆಮೂಲೆ ವಿನಂತಿಸಿಕೊಂಡರು.ಕುಂಬ್ರ ಮೆಸ್ಕಾಂ ಕಛೇರಿ ಎದುರು ರಾಜ ರಸ್ತೆಯಲ್ಲಿ ತಿರುವಿನಲ್ಲಿ ವಿದ್ಯುತ್ ಕಂಬಗಳನ್ನು ರಾಶಿ ಹಾಕಲಾಗಿದೆ. ಈಗಾಗಲೇ ಇಲ್ಲಿ ಹಲವು ಅಪಘಾತಗಳು ಸಂಭವಿಸಿದೆ. ರಸ್ತೆ ತಿರುವಿನಲ್ಲಿ ಈ ರೀತಿ ಕಂಬಗಳನ್ನು ರಾಶಿ ಹಾಕಿದ್ದರಿಂದ ವಾಹನ ಸವಾರರಿಗೆ ಅಪಾಯ ಇದೆ. ಇದನ್ನು ತೆರವುಗೊಳಿಸಿ ಎಂದು ಗ್ರಾಪಂ ಸದಸ್ಯ ಪ್ರವೀಣ್ ಶೆಟ್ಟಿ ತಿಂಗಳಾಡಿ ವಿನಂತಿಸಿಕೊಂಡರು.
ವಿವಿಧ ಇಲಾಖೆಯ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಜಯಲಕ್ಷ್ಮೀ ಬಲ್ಲಾಳ್, ಸದಸ್ಯರುಗಳಾದ ಪ್ರವೀಣ್ ಶೆಟ್ಟಿ ತಿಂಗಳಾಡಿ, ಸುಜಾತ ರೈ, ರೇವತಿ ಬೋಳೋಡಿ, ಅಸ್ಮಾ ಗಟ್ಟಮನೆ,`ಭಾಸ್ಕರ ರೈ ಮಿತ್ರಂಪಾಡಿ, ಕೃಷ್ಣ ಕುಮಾರ್ ಇದ್ಯಾಪೆ, ವಿಠಲ ರೈ ಮಿತ್ತೋಡಿ ಉಪಸ್ಥಿತರಿದ್ದರು. ಗ್ರೇಡ್1 ಕಾರ್ಯದರ್ಶಿ ಸುನಂದ ರೈ ಸ್ವಾಗತಿಸಿ, ವರದಿ ವಾಚಿಸಿದರು. ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆ ಗ್ರಾಪಂ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ಸಿಬ್ಬಂದಿಗಳಾದ ಜಯಂತ ಮೇರ್ಲ, ಗಣೇಶ್, ಮೃದುಳಾ, ಶಶಿಪ್ರಭಾ ರೈ, ವಿದ್ಯಾಪ್ರಸಾದ್ ಸಹಕರಿಸಿದ್ದರು.
ಗ್ರಾಪಂ ನೌಕರರ ಬೇಡಿಕೆ ಈಡೇರಿಸುವಂತೆ ಸರಕಾರಕ್ಕೆ ಗ್ರಾಮಸ್ಥರ ಅಗ್ರಹ
ಗ್ರಾಮಸಭೆಯ ವೇಳೆ ಗ್ರಾಪಂ ನೌಕರರ ತಮ್ಮ ಕೈತೋಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡಿರುವುದನ್ನು ಗಮನಿಸಿದ ಗ್ರಾಮಸ್ಥ ಇಸ್ಮಾಯಿಲ್ ಗಟ್ಟಮನೆಯವರು, ನೌಕರರು ಯಾಕೆ ಕೈಕಪ್ಪು ಪಟ್ಟಿ ಧರಿಸಿದ್ದಾರೆ. ಏನು ವಿಷಯ ಎಂದು ನಮಗೆ ಗೊತ್ತಾಗಬೇಕು ಎಂದು ಕೇಳಿದರು. ಇದಕ್ಕೆ ತಾರಾ ಬಲ್ಲಾಳ್ ಧ್ವನಿಗೂಡಿಸಿದರು. ಇದಕ್ಕೆ ಉತ್ತರಿಸಿದ ಪಿಡಿಒ ಅಜಿತ್‌ರವರು ಅವರ ಕೆಲವೊಂದು ಬೇಡಿಕೆಗಳಿಗೆ ಅದನ್ನು ಸರಕಾರಕ್ಕೆ ತಿಳಿಸುವುದಕ್ಕೆ ಈ ರೀತಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದರು. ಬೇಡಿಕೆಗಳ ಬಗ್ಗೆ ಮಾತನಾಡಿದ ಗ್ರಾಪಂ ಕ್ಲರ್ಕ್ ಜಯಂತ್ ಮೇರ್ಲರವರು, ನಾವು ಪಂಚಾಯತ್‌ನಲ್ಲಿ ನಾಯಿ ದುಡಿದಂತೆ ದುಡಿಯುತ್ತೇವೆ ವಿನಹ ನಮಗೆ ಸರಕಾರದಿಂದ ಯಾವುದೇ ಜೀವನ ಭದ್ರತೆ ಇಲ್ಲ, ನಮ್ಮನ್ನು ಸರಕಾರದ ಸಿ.ಡಿ ಗ್ರೂಪ್‌ಗೂ ಸೇರಿಸಿಲ್ಲ, ಸರಕಾರ ನಮ್ಮನ್ನು ಕಡೆಗಣಿಸುತ್ತಿದೆ ಅದಕ್ಕಾಗಿ ಈ ರೀತಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು. ಇದಕ್ಕೆ ಇಸ್ಮಾಯಿಲ್ ಗಟ್ಟಮನೆಯವರು ಮಾತನಾಡಿ, ಪಂಚಾಯತ್ ನೌಕರರ ಜೊತೆಯಲ್ಲಿ ಗ್ರಾಮಸ್ಥರಾದ ನಾವೆಲ್ಲರೂ ಇದ್ದೇವೆ. ಸರಕಾರ ಅವರ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಈ ಬಗ್ಗೆ ಸರಕಾರಕ್ಕೆ ನಾವು ಆಗ್ರಹಿಸುತ್ತೇವೆ ಎಂದರು.