ಆರ್ಲಪದವು : ನೂತನ ದೈವಸ್ಥಾನಕ್ಕೆ ಶಿಲಾನ್ಯಾಸ

0

ಪಾಣಾಜೆ: ಆರ್ಲಪದವಿನ ಪೂಮಾಣಿ – ಕಿನ್ನಿಮಾಣಿ, ಪಿಲಿಭೂತ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ ನೂತನ ದೈವಸ್ಥಾನಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಕ್ಷೇತ್ರದ ತಂತ್ರಿಗಳಾದ ಕುಂಟಾರು ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ಕುಂಟಾರು ವಿಷ್ಣುಪ್ರಸಾದ್ ತಂತ್ರಿಗಳು ಮಾ. 13 ರಂದು ನೆರವೇರಿಸಿದರು.


ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ವಾಸ್ತುಶಿಲ್ಪಿ ಮಹೇಶ್ ಮುನಿಯಂಗಳರವರು ಮಾತನಾಡಿ ‘ಹಿಂದೆ ಇದ್ದ ಕಟ್ಟಡದ ವಿನ್ಯಾಸ ಕ್ರಮಗಳನ್ನು ಅನುಸರಿಸಿಕೊಂಡು ಹೊಸ ದೈವಸ್ಥಾನ
ಗರ್ಭಗೃಹವನ್ನು ಎಂಟೆಂಟು ಅಂಗುಲದಷ್ಟು ವೃದ್ಧಿಗೊಳಿಸಿ ಹೊಸ ನಕ್ಷೆ ಮಾಡಲಾಗಿದೆ. ಗ್ರಾಮಸ್ಥರು ನಿಯಮಗಳನ್ನು ಪಾಲಿಸಿಕೊಂಡು ಜೀರ್ಣೋದ್ಧಾರ ಕಾರ್ಯದಲ್ಲಿ ಏಕಮನಸ್ಸಿನಿಂದ ಪಾಲ್ಗೊಂಡು ದೇವತಾ ಸಾನ್ನಿಧ್ಯದ‌ ಕೈಂಕರ್ಯದಲ್ಲಿ ಪಾಲ್ಗೊಳ್ಳಿ ಎಂದು ಕರೆ ನೀಡಿದರು.


ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಕಾವು ಹೇಮನಾಥ ಶೆಟ್ಟಿಯವರು ‘ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸರ್ವರಿಗೂ ಸಮಾನ ನ್ಯಾಯ ಒದಗಿಸಿಕೊಡುವವರು. ಅವರ ನೇತೃತ್ವದಲ್ಲಿ ಮತ್ತು ಮಾರ್ಗದರ್ಶನದಲ್ಲಿ ನಮ್ಮ ಜಿವನಕ್ಕೆ ಪ್ರೇರಣೆ ಕೊಡುವ ದೈವಸ್ಥಾನದ ಜೀರ್ಣೋದ್ಧಾರ ಆರಂಭಗೊಂಡಿದೆ. ಈ ಕಾರ್ಯಕ್ಕೆ ಎಲ್ಲರ ಸಹಕಾರ ನಿರೀಕ್ಷೆಗೂ ಮೀರಿ ದೊರೆತು ಅತ್ಯಂತ ಸುಂದರವಾಗಿ ದೈವಸ್ಥಾನ ಮೂಡಿಬರಲಿದೆ. ಈ ಕಾರಣಿಕ ಕ್ಷೇತ್ರದಲ್ಲಿ ಯಾವುದೇ ಸಮಸ್ಯೆಗಳು ಕ್ಷಣ ಮಾತ್ರದಲ್ಲಿ ಬಗೆಹರಿಯುತ್ತದೆ’ ಎಂದರು. ವಿಜ್ಞಾಪನಾ ಪತ್ರದ ಮುಖೇನ ಭಕ್ತರು ಈ‌ ಕ್ಷೇತ್ರಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರ ನೀಡುವಂತಾಗಲಿ’ ಎಂದು ಹೇಳಿ ಜೀರ್ಣೋದ್ಧಾರ ಕೆಲಸ ಕಾರ್ಯಗಳಿಗೆ ತನ್ನ ವೈಯುಕ್ತಿಕ ನೆಲೆಯಿಂದ ರೂ. 1 ಲಕ್ಷ ಸಹಕಾರ ನೀಡುವುದಾಗಿ ಘೋಷಣೆ ಮಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೋಳಿಲ್ಲಾಯರವರು ಮಾತನಾಡಿ ‘ನಾವೆಲ್ಲಾ ಸಂಕಲ್ಪ ಮಾಡಿದ ರೀತಿಯಲ್ಲಿ ದೈವಗಳ ಅನುಗ್ರಹದಿಂದ ಆದಷ್ಟು ಶೀಘ್ರವಾಗಿ ಜೀರ್ಣೋದ್ಧಾರ ಕೆಲಸ ಕಾರ್ಯಗಳು ನಡೆಯುವಲ್ಲಿ ಗ್ರಾಮಸ್ಥರ ಸರ್ವ ಸಹಕಾರವಿರಲಿ’ ಎಂದರು.
ಅತಿಥಿಯಾಗಿದ್ದ ಹರೀಶ್ಚಂದ್ರ ಪಕ್ಕಳ ರವರು ಮಾತನಾಡಿ ‘ದೇವರ ಪುಣ್ಯಕಾರ್ಯ ಮಾಡುವ ಅವಕಾಶ ನಮಗೆಲ್ಲಾ ದೊರೆತಿದೆ. ಪರಶುರಾಮ ಸೃಷ್ಟಿಯ ತುಳುನಾಡು ಶ್ರೇಷ್ಠವಾದುದು. ಈ ಕ್ಷೇತ್ರದ ಸತ್ಯ ಮತ್ತು ಶಕ್ತಿಯ ಅನುಭವ ತನ್ನ ಜೀವನದಲ್ಲಿಯೂ ಆಗಿರುವುದಾಗಿ ಅನುಭವ ಹಂಚಿಕೊಂಡರು.


ನಿವೃತ್ತ ಶಿಕ್ಷಕ ಶಿವಕುಮಾರ್ ಕಾಕೆಕೊಚ್ಚಿಯವರು ಮಾತನಾಡಿ ‘ದೈವಸ್ಥಾನದ ಇತಿಹಾಸ, ಕಾರಣಿಕತೆ ಮತ್ತು ಮಹಿಮೆಯನ್ನು ಸಂಕ್ಷಿಪ್ತವಾಗಿ ವಿಜ್ಞಾಪನಾ ಪತ್ರದಲ್ಲಿ ಉಲ್ಲೇಖಿಸುವ ಪ್ರಯತ್ನ ಮಾಡಿದ್ದೇವೆ. ಪರವೂರಿನ ಭಕ್ತರೂ ಇಲ್ಲಿನ ವಿಚಾರಗಳನ್ನು ತಿಳಿದುಕೊಳ್ಳುವ ದಿಶೆಯಲ್ಲಿ ಪತ್ರ ರಚಿಸಲಾಗಿದೆ. ಈ ಕ್ಷೇತ್ರಕ್ಕೆ ಹೊರಜಿಲ್ಲೆ, ಹೊರರಾಜ್ಯಗಳಲ್ಲಿಯೂ ಅನೇಕ ಭಕ್ತರಿದ್ದಾರೆ. ಅನೇಕ ಜನರ ಸಮಸ್ಯೆಗಳು ದೈವದ ಮುಂದೆ ಅರಿಕೆ ಮಾಡಿಕೊಂಡು ಬಗೆಹರಿದ ಅದೆಷ್ಟೋ ನಿದರ್ಶನಗಳಿವೆ’ ಎಂದರು.


ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಜಗನ್ಮೋಹನ ರೈ ಸೂರಂಬೈಲು, ಕಾರ್ಯದರ್ಶಿ ಶುಭಕರ ರೈ ಪಡ್ಯಂಬೆಟ್ಟು, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರಾದ ಸದಾಶಿವ ರೈ ಸೂರಂಬೈಲು, ಲಕ್ಷ್ಮೀನಾರಾಯಣ ರೈ ಕೆದಂಬಾಡಿ, ಸದಸ್ಯರಾದ ರಮಾನಾಥ ರೈ ಪಡ್ಯಂಬೆಟ್ಟು, ತಮ್ಮಣ್ಣ ನಾಯ್ಕ್ ಸುಡುಕುಳಿ ಮತ್ತಿತರರು ಉಪಸ್ಥಿತರಿದ್ದರು. ಶ್ರೀಹರಿ ನಡುಕಟ್ಟ ಸ್ವಾಗತಿಸಿ, ಕರಸೇವೆ ಸಮಿತಿ ಕಾರ್ಯದರ್ಶಿ ಶ್ರೀಪ್ರಸಾದ್ ಪಾಣಾಜೆ ವಂದಿಸಿದರು. ಗ್ರಾಮಸ್ಥರು ಪಾಲ್ಗೊಂಡರು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.

ಪೂಮಾಣಿ – ಕಿನ್ನಿಮಾಣಿ, ಪಿಲಿಭೂತ ಕಾರಣಿಕ ಶಕ್ತಿಗಳು
ಕ್ಷೇತ್ರದ ಸಾನ್ನಿಧ್ಯಗಳಾದ ಪೂಮಾಣಿ ಕಿನ್ನಿಮಾಣಿ ಮತ್ತು ರಾಜನ್ ದೈವ ಎಂದೇ ಕರೆಯಲ್ಪಡುವ ಪಿಲಿಭೂತ ದೈವಗಳು ಕಾರಣಿಕ ಶಕ್ತಿಯನ್ನು ಹೊಂದಿವೆ. ಪರವೂರುಗಳಲ್ಲಿಯೂ ಈ ದೈವಗಳ ಅನೇಕ ಭಕ್ತರಿದ್ದಾರೆ. ವರ್ಷಂಪ್ರತಿ ಉತ್ಸವದ ವೇಳೆ ಅರಿಕೆ, ಹರಕೆಗಳು ಬರುವುದೇ ಇದಕ್ಕೆ ನಿದರ್ಶನವಾಗಿದೆ. ನಮ್ಮ ಜೀವನದ ಸುಯೋಗ ಎಂಬಂತೆ ಅವುಗಳ ಸಾನ್ನಿಧ್ಯ ವೃದ್ಧಿಗಾಗಿ ಜೀರ್ಣೋದ್ಧಾರ ಕಾರ್ಯವನ್ನು ದೈವಗಳ ಅಪ್ಪಣೆಯಂತೆ ಭಕ್ತಜನರ ಸಹಕಾರದಿಂದ ಕೈಗೆತ್ತಿಕೊಂಡಿದ್ದೇವೆ. ಆದಷ್ಟು ಶೀಘ್ರವಾಗಿ ಜೀರ್ಣೋದ್ಧಾರವಾಗಿ ಮುಂದಿನ ವರ್ಷದ ಉತ್ಸವದ ಮುಂಚಿತವಾಗಿ ಬ್ರಹ್ಮಕಲಶಾಭಿಷೇಕ ನಡೆಸಲಿದ್ದೇವೆ.
ಶ್ರೀಕೃಷ್ಣ ಬೋಳಿಲ್ಲಾಯ ಆಡಳಿತ ಮೊಕ್ತೇಸರರು

ವಿಜ್ಞಾಪನಾ ಪತ್ರ ಬಿಡುಗಡೆ
ಇದೇ ವೇಳೆ ಜೀರ್ಣೋದ್ಧಾರಕ್ಕೆ ಸಂಬಂಧಿಸಿದ ವಿಜ್ಞಾಪನಾ ಪತ್ರವನ್ನು ಕಾವು ಹೇಮನಾಥ ಶೆಟ್ಟಿಯವರು ಬಿಡುಗಡೆಗೊಳಿಸಿದರು.

LEAVE A REPLY

Please enter your comment!
Please enter your name here