ರಾಮಕುಂಜ: ರಾಮಕುಂಜ ಗ್ರಾ.ಪಂ.ನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮತ್ತು 15ನೇ ಹಣಕಾಸು ಯೋಜನೆಯ 2023-24ನೇ ಸಾಲಿನ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮಸಭೆ ಮಾ.14ರಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಓಂಬುಡ್ಸ್‌ಮೆನ್ ಲೋಕೇಶ್ ಅವರು ಮಾತನಾಡಿ, ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳಿಗೆ ಹೆಚ್ಚು ಒತ್ತು ಕೊಡಬೇಕು. ಈ ರೀತಿಯಾದಲ್ಲಿ 60:40 ಅನುಪಾತದಲ್ಲಿ ಸಾರ್ವಜನಿಕ ಕೆಲಸ ಮಾಡಲು ಅವಕಾಶ ಸಿಗುತ್ತದೆ. ಅಲ್ಲದೇ ಯೋಜನೆ ದುರುಪಯೋಗ ಆಗಬಾರದು. ಅದೇ ಉದ್ದೇಶಕ್ಕೆ ಬಳಕೆಯಾಗಬೇಕೆಂದು ಹೇಳಿದರು. ಚೆಕ್ ಮೆಜರ್‌ಮೆಂಟ್, ರಾಜಧನ ಪಾವತಿ ವಿಳಂಬ, ನಾಮಫಲಕ ಅಳವಡಿಕೆ ಸೇರಿದಂತೆ ಯೋಜನೆ ಸಮರ್ಪಕವಾಗಿ ಕಾರ್ಯಗತ ಆಗದೇ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ತಪ್ಪುಗಳನ್ನು ಸರಿಪಡಿಸಿಕೊಳ್ಳುವಂತೆ ಹೇಳಿದರು. ಫಲಾನುಭವಿಗಳಿಗೆ ಯಾವುದೇ ತೊಂದರೆ ಆದಲ್ಲಿ ಅಥವಾ ಲೋಪ ದೋಷಗಳಿದ್ದಲ್ಲಿ ದೂರವಾಣಿ ಮೂಲಕ ದೂರು ನೀಡಬಹುದು. ಸ್ಥಳ ಹಾಗೂ ಕಡತ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಚಂದ್ರಶೇಖರ ಅವರು ಯೋಜನೆಯ ಕುರಿತು ಮಾಹಿತಿ ನೀಡಿ, ರಾಮಕುಂಜ ಹಾಗೂ ಹಳೆನೇರೆಂಕಿ ಗ್ರಾಮದಲ್ಲಿ ಒಟ್ಟು 176 ಕಾಮಗಾರಿಗಳು ನಡೆದಿದ್ದು 109 ಮನೆಗಳ ಭೇಟಿ ಮಾಡಲಾಗಿದ್ದು ಕಾಮಗಾರಿಗಳು ಸಮರ್ಪಕವಾಗಿ ನಡೆದಿದೆ ಎಂದು ತಿಳಿಸಿದರು. ಫಲಾನುಭವಿ ನೀಲಯ್ಯ ಗೌಡ ಮರಂಕಾಡಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ.ಅಧ್ಯಕ್ಷೆ ಸುಚೇತಾ ಬರೆಂಬೆಟ್ಟು, ಉಪಾಧ್ಯಕ್ಷ ಕೇಶವ ಗಾಂಧಿಪೇಟೆ, ಪಿಡಿಒ ಮೋಹನ್‌ಕುಮಾರ್ ಜಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾ.ಪಂ.ಸದಸ್ಯರಾದ ಪ್ರಶಾಂತ್ ಆರ್.ಕೆ., ಸೂರಪ್ಪ ಕುಲಾಲ್, ಭಾರತಿ ಕುಲಾಲ್, ಆಯಿಷಾ ಶರೀಫ್, ಮಾಲತಿ ಕದ್ರ, ರೋಹಿಣಿ ಆನ, ಸುಜಾತ ಕಾಪಿಕಾಡು, ಭವಾನಿ ಸಂಪ್ಯಾಡಿ, ಇಂಜಿನಿಯರ್‌ಗಳಾದ ಸವಿತಾ ಲೋಬೋ, ಮನೋಜ್‌ಕುಮಾರ್ ಹಾಗೂ ಫಲಾನುಭವಿಗಳು, ಗ್ರಾಮಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಲಲಿತ ಜಿ.ಡಿ. ಸ್ವಾಗತಿಸಿ, ವರದಿ ವಾಚಿಸಿದರು. ಸಿಬ್ಬಂದಿಗಳು ಸಹಕರಿಸಿದರು.
ನರೇಗಾದಲ್ಲಿ 57.62 ಲಕ್ಷ ರೂ.ಖರ್ಚು:
2023-24ನೇ ಸಾಲಿನಲ್ಲಿ ನರೇಗಾ ಯೋಜನೆಯಡಿ ರಾಮಕುಂಜ ಗ್ರಾ.ಪಂ.ನಲ್ಲಿ 34,98,852 ರೂ.ಕೂಲಿ ಹಾಗೂ 22, 64,094 ರೂ.ಸಾಮಾಗ್ರಿ ಮೊತ್ತ ಸೇರಿ ಒಟ್ಟು 57,62,946 ರೂ.ಖರ್ಚು ಆಗಿದೆ. 11,318 ಮಾನವ ದಿನ ಸೃಜನೆಯಾಗಿದ್ದು 268 ಕುಟುಂಬದ 447 ಮಂದಿ ಕೆಲಸ ನಿರ್ವಹಿಸಿರುವುದಾಗಿ ಸಭೆಗೆ ತಿಳಿಸಲಾಯಿತು. 15ನೇ ಹಣಕಾಸು ಯೋಜನೆಯಡಿ 40 ಕಾಮಗಾರಿ ನಡೆದಿದ್ದು 33,78,825 ರೂ.ಖರ್ಚು ಮಾಡಲಾಗಿದೆ ಎಂದು ತಿಳಿಸಲಾಯಿತು. ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ಜಯಮಣಿ ಪಿ., ಶ್ವೇತಾಕ್ಷಿ ಎಸ್., ಪ್ರಣಮ್ಯ ಪಿ., ರಮ್ಯ ಎಸ್., ಸವಿತಾಕುಮಾರಿ ವಿ., ಪ್ರೇಮಲತಾ, ಯಶ್ಮಿತಾ ಪಿ. ಅವರು ಸಾಮಾಜಿಕ ಪರಿಶೋಧನೆ ನಡೆಸಿದರು.