ಕೊಕ್ಕಡ: ವಜಾಗೊಳಿಸಿರುವ ಚಿನ್ನಾಭರಣ ಪರೀಕ್ಷಕನ ಮತ್ತೆ ನೇಮಕಕ್ಕೆ ಆಗ್ರಹಿಸಿ ಮನವಿ

0


ನೆಲ್ಯಾಡಿ: ಕೊಕ್ಕಡ ಶಾಖೆಯಿಂದ ವಜಾಗೊಳಿಸಿರುವ ಚಿನ್ನ ಪರಿಶೋಧಕ ಪದ್ಮನಾಭ ಆಚಾರ್ಯರನ್ನು ಮತ್ತೆ ಮುಂದುವರಿಸುವಂತೆ ಆಗ್ರಹಿಸಿ ಮಾ.18ರಂದು ಗ್ರಾಹಕರ ವತಿಯಿಂದ ಕೆನರಾ ಬ್ಯಾಂಕ್‌ನ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.

ಕೆನರಾ ಬ್ಯಾಂಕ್‌ನ ಕೊಕ್ಕಡ ಶಾಖೆಯಲ್ಲಿ ಕಳೆದ 19 ವರ್ಷಗಳಿಂದ ಪದ್ಮನಾಭ ಆಚಾರ್ಯರವರು ಚಿನ್ನ ಪರಿಶೋಧಕರಾಗಿ ಕೆಲಸ ಮಾಡುತ್ತಿದ್ದರು. ಇದೀಗ ನಕಲಿ ಚಿನ್ನ ಬ್ಯಾಂಕಿನಲ್ಲಿ ಅಡಮಾನವಿಡಲು ಕಾರಣರಾಗಿದ್ದೀರಿ ಎಂಬ ಕಾರಣ ನೀಡಿ ಅವರನ್ನು ಕೆಲಸದಿಂದ ವಜಾ ಮಾಡಲಾಗಿದೆ. ಆದರೆ ಬ್ಯಾಂಕ್‌ನ ಗೋಡೆಯಲ್ಲಿ ಅಂಟಿಸಲಾದ ಪತ್ರದಲ್ಲಿ ವ್ಯವಸ್ಥಾಪಕರಿದ್ದು ನಿಯಮಗಳ ಪ್ರಕಾರ ಚಿನ್ನ ಪರಿಶೋಧಿಸಬೇಕು ಎಂದು ಬರೆಯಲಾಗಿದೆ. ಪದ್ಮನಾಭ ಆಚಾರ್ಯರಿಗೆ ಚಿನ್ನವನ್ನು ವಿರೂಪಗೊಳಿಸಿ ಅಥವಾ ತುಂಡರಿಸಿ ಪರಿಶೀಲನೆ ಮಾಡಬಹುದು ಎಂಬ ನಿಯಮಗಳ ಮಾರ್ಗಸೂಚಿ ಪಟ್ಟಿ ಕೊಟ್ಟಿರುವುದಿಲ್ಲ. ನಕಲಿ ಚಿನ್ನವಾಗಿದ್ದಲ್ಲಿ ಸಾಲ ಪಡೆದ ವ್ಯಕ್ತಿಯ ಚಿನ್ನವನ್ನು ಯಾವ ಆಧಾರದಲ್ಲಿ ಅವರಿಗೆ ಹಿಂದಿರುಗಿಸಲಾಗಿದೆ. ವಂಚಕನ ಮೇಲೆ ಕೇಸು ದಾಖಲಿಸಿಲ್ಲ. ಆದ್ದರಿಂದ ಈ ಪ್ರಕರಣದಲ್ಲಿ ದುರುದ್ದೇಶದಿಂದ ಪದ್ಮನಾಭ ಆಚಾರ್ಯ ಅವರನ್ನು ಬಲಿಪಶು ಮಾಡಲಾಗಿದೆ. ನಿರಪರಾಧಿಯಾಗಿರುವ ಪದ್ಮನಾಭ ಆಚಾರ್ಯರವರನ್ನು ಮತ್ತೆ ಕೆಲಸದಲ್ಲಿ ಮುಂದುವರಿಸಬೇಕು. ಈ ಬಗ್ಗೆ ಮಾ.30ರೊಳಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ಲಿಖಿತ ರೂಪದಲ್ಲಿ ತಿಳಿಸಬೇಕು. ನ್ಯಾಯಯುತ ಬೇಡಿಕೆಗೆ ಸೂಕ್ತ ಸ್ಪಂದನೆ ಸಿಗದೇ ಇದ್ದಲ್ಲಿ ಬ್ಯಾಂಕ್‌ನ ಮುಂಭಾಗ ಜೂ.10ರಂದು ಪ್ರತಿಭಟನೆ ನಡೆಸಲಾಗುವುದು. ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸುವಂತೆಯೂ ಒತ್ತಾಯಿಸಿ ಬ್ಯಾಂಕ್‌ನ ಜನರಲ್ ಮೇನೇಜರ್ ಅವರಿಗೆ ಮನವಿ ಸಲ್ಲಿಸಲಾಗಿದೆ. ಕೆನರಾ ಬ್ಯಾಂಕ್‌ನ ಹಿರಿಯ ಪ್ರಬಂಧಕ ಅರುಣ್‌ಕುಮಾರ್ ಹಾಗೂ ಶಾಖಾ ಪ್ರಬಂಧಕ ಅಂಕಿತ್ ಸಿಂಗ್‌ರವರು ಮನವಿ ಸ್ವೀಕರಿಸಿದರು. ಕಾರ್ಮಿಕ ಮುಖಂಡ ಬಿ.ಎಮ್.ಭಟ್, ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ, ಪದ್ಮನಾಭ ಆಚಾರ್ಯ, ಸಾಮಾಜಿಕ ಹೋರಾಟಗಾರ ಶ್ರೀಧರ ಕೆಂಗುಡೇಲು, ದಯಾನೀಶ್, ಕೊಕ್ಕಡ ಗ್ರಾ.ಪಂ ಮಾಜಿ ಸದಸ್ಯ ಶೀನ ನಾಯ್ಕ, ಪಟ್ರಮೆ ಗ್ರಾ.ಪಂ ಮಾಜಿ ಸದಸ್ಯ ಶ್ಯಾಮ್‌ರಾಜ್, ಸಾಂತಪ್ಪ ಮಡಿವಾಳ, ಫಾರೂಕ್, ಉಮೇಶ್ ಸಪ್ತಗಿರಿ, ಬಾಲಕೃಷ್ಣ ಗೌಡ ಬಳಕ್ಕ, ಇಸ್ಮಾಯಿಲ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here