ಪುತ್ತೂರು: ಶಿಕ್ಷಣ ಶಿಲ್ಪಿ ಮೊ|ಪತ್ರಾವೋರವರಿಂದ ಸ್ಥಾಪಿಸಲ್ಪಟ್ಟ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಎಂದು ಹೆಸರು ಗಳಿಸಿರುವ ಹಾಗೂ ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿಗೆ ಐಎಸ್ಒ 9001:2015 ಮಾನ್ಯತೆ ದೊರಕಿದೆ.
“ಗ್ರಾಮೀಣ ಪ್ರದೇಶದ ವಿದ್ಯಾಸಂಸ್ಥೆಯಾದ ಸಂತ ಫಿಲೋಮಿನಾ ಕಾಲೇಜಿಗೆ 9001:2015 ಮಾನ್ಯತೆ ದೊರಕಿರುವುದು ಸಂತಸದ ವಿಚಾರವಾಗಿದೆ. ಈ ಅಂತರ್ರಾಷ್ಟ್ರೀಯ ಮನ್ನಣೆಯು ವಿದ್ಯಾರ್ಥಿಗಳಿಗೆ ಸಂಸ್ಥೆ ನೀಡುತ್ತಿರುವ ಗುಣಮಟ್ಟದ ಶಿಕ್ಷಣ ಹಾಗೂ ಶೈಕ್ಷಣಿಕ ಉತ್ಕೃಷ್ಟತೆಗಾಗಿ ನಮ್ಮ ನಿರಂತರ ಅನ್ವೇಷನೆಯನ್ನು ಪ್ರತಿಬಿಂಬಿಸುತ್ತದೆ. ಇದು ಕೇವಲ ಒಬ್ಬ ವ್ಯಕ್ತಿಯಿಂದ ನಡೆಯುವ ಕಾರ್ಯವಲ್ಲ. ಇದರ ಹಿಂದೆ ಶಿಕ್ಷಣ ಕ್ಷೇತ್ರದಲ್ಲಿ ಸಂಸ್ಥೆಯ ಗುಣಮಟ್ಟದ ಸೇವೆಗಾಗಿ ಅತ್ಯಂತ ಮುತುವರ್ಜಿಯಿಂದ ಮಾರ್ಗದರ್ಶನ ನೀಡುತ್ತಿರುವ ಸಂಚಾಲಕರು ಮತ್ತು ಆಡಳಿತ ಮಂಡಳಿ, ಸಮರ್ಪಣಾ ಮನೋಭಾವದಿಂದ ಶ್ರಮಿಸುತ್ತಿರುವ ಸಿಬ್ಬಂದಿ ವರ್ಗ, ಸಂಪೂರ್ಣ ಬೆಂಬಲ ನೀಡುತ್ತಿರುವ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘ ಹಾಗೂ ರಕ್ಷಕ ಶಿಕ್ಷಕ ಸಂಘ, ಸಹಕಾರ ನೀಡುತ್ತಿರುವ ವಿದ್ಯಾರ್ಥಿ ವೃಂದ ಇವರೆಲ್ಲರ ಪಾಲು ಗಮನಾರ್ಹವಾದುದು. ಈ ಮನ್ನಣೆಯು ಶಿಕ್ಷಣ ಕ್ಷೇತ್ರದಲ್ಲಿ ನಮ್ಮ ಕಾಲೇಜು ನೀಡುತ್ತಿರುವ ಸೇವೆಯನ್ನು ಇನ್ನಷ್ಟು ಉತ್ಕೃಷ್ಟಗೊಳಿಸಲು ನಮಗೆ ಸ್ಫೂರ್ತಿ ನೀಡಿದೆ” ಎಂದು ಕಾಲೇಜಿನ ಪ್ರಾಂಶುಪಾಲ ವಂ|ಡಾ|ಆಂಟನಿ ಪ್ರಕಾಶ್ ಮೊಂತೆರೋರವರು ‘ಸುದ್ದಿ’ಗೆ ತಿಳಿಸಿದ್ದಾರೆ.
ಕಾಲೇಜಿಗೆ ಐಎಸ್ಒ 9001:2015 ಮಾನ್ಯತೆ ದೊರಕಿದ ಬಗ್ಗೆ ಕಥೋಲಿಕ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಅತಿ.ವಂ|ಡಾ|ಪೀಟರ್ ಪಾವ್ಲ್ ಸಲ್ದಾನ್ಹಾ, ಕಾರ್ಯದರ್ಶಿ ಅತಿ.ವಂ|ಆಂಟನಿ ಮೈಕಲ್ ಶೆರಾ, ನಿಯೋಜಿತ ಕಾರ್ಯದರ್ಶಿ ವಂ|ಪ್ರವೀಣ್ ಲಿಯೋ ಲಸ್ರಾದೊ, ಕಾಲೇಜಿನ ಸಂಚಾಲಕ ವಂ|ಲಾರೆನ್ಸ್ ಮಸ್ಕರೇನ್ಹಸ್, ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋರವರು ಕಾಲೇಜಿನ ಪ್ರಾಂಶುಪಾಲರಾದ ವಂ|ಡಾ|ಆಂಟನಿ ಪ್ರಕಾಶ್ ಮೊಂತೆರೋರವರಿಗೆ ಹಾಗೂ ಮಾನ್ಯತೆ ದೊರಕುವಲ್ಲಿ ಶ್ರಮವಹಿಸಿದ ಪ್ರತಿಯೋರ್ವರಿಗೂ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ವಿನಯಚಂದ್ರ ಹಾಗೂ ವ್ಯವಹಾರ ಆಡಳಿತ ವಿಭಾಗದ ಪ್ರಾಧ್ಯಾಪಕರಾದ ಅಭಿಷೇಕ್ ಸುವರ್ಣ ಮತ್ತು ತಂಡದವರಿಗೆ ಶ್ಲಾಘನೆ ವ್ಯಕ್ತಪಡಿಸಿರುತ್ತಾರೆ.
ಈ ಅಂತರ್ರಾಷ್ಟ್ರೀಯ ಮನ್ನಣೆಯು ಸಂತ ಫಿಲೋಮಿನಾ ಕಾಲೇಜಿನ ಗುಣಮಟ್ಟ ನಿರ್ವಹಣಾ ಪ್ರಕ್ರಿಯೆಯ ಪ್ರಮುಖ ಮೈಲುಗಲ್ಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿ ವರ್ಷ ಕಾಲೇಜಿನ ಎಲ್ಲ ದಾಖಲೆಗಳನ್ನು ಆಂತರಿಕ ಹಾಗೂ ಬಾಹ್ಯ ಮರು ಮೌಲ್ಯಮಾಪನಕ್ಕೆ ಒಳಪಡಿಸಿ ಮಾನ್ಯತೆ ನವೀಕರಿಸಿಕೊಳ್ಳಬೇಕಾಗುತ್ತದೆ. ಈ ಮಾನ್ಯತೆಗೆ 3 ವರ್ಷಗಳ ಕಾಲಾವಧಿಯಿರುತ್ತದೆ. ಮುಂಬರುವ ದಿನಗಳಲ್ಲಿ ಕಾಲೇಜು ಐಎಸ್ಒ 9001:2015 ಮಾನ್ಯತೆ ಮೂಲಕ ವಿದ್ಯಾರ್ಥಿಗಳು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು ಅವಕಾಶವನ್ನು ಒದಗಿಸುವುದು ಮತ್ತು ಅವರ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಸಾಧ್ಯವಾದಷ್ಟು ಉತ್ತಮ ಫಲಿತಾಂಶಗಳನ್ನು ಸಾಧಿಸುವುದು, ವಿದ್ಯಾರ್ಥಿಗಳ ಶೈಕ್ಷಣಿಕ ಉತ್ಕೃಷ್ಟತೆ ಮತ್ತು ಸಮಗ್ರ ಅಭಿವೃದ್ಧಿಗೆ ಇನ್ನಷ್ಟು ಪ್ರಾಮುಖ್ಯತೆ ನೀಡುವುದು, ಅತ್ಯಾಧುನಿಕ ಕಲಿಕಾ ಸೌಕರ್ಯಗಳ ಮೂಲಕ ಅನುಕೂಲಕರ ಕಲಿಕೆಯ ವಾತಾವರಣವನ್ನು ನಿರ್ವಹಿಸುವುದು, ಅಧ್ಯಾಪಕರ ಸಾಮರ್ಥ್ಯದ ಮಟ್ಟವನ್ನು ಹೆಚ್ಚಿಸುವುದು, ಆಧುನಿಕ ಬೋಧನೆ-ಕಲಿಕೆಯ ತಂತ್ರಗಳು/ಪ್ರಕ್ರಿಯೆಗಳನ್ನು ಅಳವಡಿಸಿಕೊಳ್ಳಲು ಅವರನ್ನು ಪ್ರೋತ್ಸಾಹಿಸುವುದು, ಉದ್ಯಮ ಅಥವಾ ಇತರ ಸಂಸ್ಥೆಗಳೊಡನೆ ಸಹಯೋಗ ಹಾಗೂ ಗುಣಮಟ್ಟ ನಿರ್ವಹಣಾ ವ್ಯವಸ್ಥೆಯ ನಿರಂತರ ಸುಧಾರಣೆಯನ್ನು ಖಚಿತಪಡಿಸಿಕೊಳ್ಳುವುದಾಗಿದೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.
ಏನಿದು ಐಎಸ್ಒ 9001:2015 ಮಾನ್ಯತೆ?:
ಐಎಸ್ಒ 9001:2015 ಒಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಗುಣಮಟ್ಟ ನಿರ್ವಹಣಾ ಮಾನದಂಡವಾಗಿರುತ್ತದೆ. ಗ್ರಾಹಕರ ನಿರೀಕ್ಷೆಗಳನ್ನು ಪೂರೈಸುವ ಹಾಗೂ ನಿರಂತರವಾಗಿ ಗುಣಮಟ್ಟ ಸುಧಾರಣಾ ಪ್ರಕ್ರಿಯೆಗೊಳಬಯಸುವ ಯಾವುದೇ ಸಂಸ್ಥೆಯೂ ಐಎಸ್ಒ 9001:2015 ಪ್ರಮಾಣೀಕರಣಕ್ಕೊಳಗಾಗಬಹುದಾಗಿದೆ. ಐಎಸ್ಒ 9001:2015 ಪ್ರಮಾಣೀಕರಣವು ಸಂಸ್ಥೆಗಳಿಗೆ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ, ಹಾಗೂ ಕಾರ್ಯದಕ್ಷತೆಯನ್ನು ಸುಧಾರಿಸುವ ಮೂಲಕ ಇನ್ನಷ್ಟು ಹೊಸ ಅವಕಾಶಗಳಿಗೆ ಅನುವು ಮಾಡಿಕೊಡುತ್ತದೆ. ಇದು ಗುಣಮಟ್ಟದ ನಿರ್ವಹಣೆ ಮತ್ತು ಗ್ರಾಹಕರ ತೃಪ್ತಿಗೆ ಸಂಸ್ಥೆಯ ಬದ್ಧತೆಗೆ ಸಾಕ್ಷಿಯಾಗಿ ಕಾರ್ಯನಿರ್ವಹಿಸುತ್ತದೆ, ಸಂಸ್ಥೆಯ ಗುಣಮಟ್ಟದ ಬಗ್ಗೆ ಇತರರಿಗೆ ನಂಬಿಕೆ ಮತ್ತು ವಿಶ್ವಾಸವನ್ನು ಉಂಟುಮಾಡಲು ಸಹಾಯ ಮಾಡುತ್ತದೆ. ಈ ಪ್ರಮಾಣೀಕರಣಗೊಳ್ಳಬಯಸುವ ಸಂಸ್ಥೆಯು ತನ್ನ ಗುಣಮಟ್ಟ ನಿರ್ವಹಣಾ ವ್ಯವಸ್ಥೆಯನ್ನು ಐಎಸ್ಒ 9001:2015 ಸಂಸ್ಥೆಯ ಮಾನದಂಡಗಳ ಪ್ರಕಾರ ದಾಖಲಿಸಿ, ಆಂತರಿಕ ಹಾಗೂ ಬಾಹ್ಯ ಮೌಲ್ಯಮಾಪನಕ್ಕೊಳಗಾಗಬೇಕಾಗಿರುತ್ತದೆ. ಮೌಲ್ಯಾಂಕನಕ್ಕೊಳಗಾಗುವ ಸಂಸ್ಥೆಯ ಗುಣಮಟ್ಟ ನಿರ್ವಹಣಾ ವ್ಯವಸ್ಥೆಯು ಐಎಸ್ಒ 9001:2015 ಮಾನದಂಡಗಳಿಗೆ ಅನುಗುಣವಾಗಿದ್ದಲ್ಲಿ ಆ ಸಂಸ್ಥೆಗೆ ಪ್ರಮಾಣೀಕರಣವನ್ನು ನೀಡಲಾಗುತ್ತದೆ.