ಪ್ರಗತಿ ಆಸ್ಪತ್ರೆಯಲ್ಲಿ ಪ್ಯಾಂಕ್ರಿಯಾಸ್ ಕ್ಯಾನ್ಸರ್ ಗಂಭೀರ ಕಾಯಿಲೆಗೆ ಯಶಸ್ವಿ ಶಸ್ತ್ರಚಿಕಿತ್ಸೆ-ನುರಿತ ವೈದ್ಯರ ತಂಡದ ಸಾಧನೆಗೆ ಪ್ರಶಂಸೆ

0

ಪುತ್ತೂರು: ಮಹಾನಗರಗಳ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗಳಲ್ಲಿ ನಡೆಯುವಂತಹ ಗಂಭೀರ ಕಾಯಿಲೆಗಳ ಶಸ್ತ್ರಚಿಕಿತ್ಸೆ ಬೊಳುವಾರು ಪ್ರಗತಿ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆದಿದ್ದು ಪುತ್ತೂರಿನಲ್ಲೂ ಕೂಡ ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ಸಾಧ್ಯವಿದೆಯೆಂಬುದನ್ನು ನುರಿತ ವೈದ್ಯರ ತಂಡ ಸಾಬೀತು ಮಾಡಿದೆ.


ಕೆಲ ದಿನಗಳ ಹಿಂದೆ ಹಳದಿ ಖಾಯಿಲೆಯಿಂದ ಆನಾರೋಗ್ಯಕ್ಕೀಡಾದ ಸ್ಥಳೀಯ ಮಹಿಳೆಯೊಬ್ಬರು ಇಲ್ಲಿನ ವೈದ್ಯರನ್ನು ಸಂಪರ್ಕಿಸಿದಾಗ, ವೈದ್ಯರ ಸೂಚನೆಯಂತೆ ಅವರನ್ನು ಸಿ. ಟಿ ಸ್ಕ್ಯಾನ್, ಪೆಟ್ ಸ್ಕ್ಯಾನಿಂಗ್‌ಗೆ ಒಳಪಡಿಸಿದ್ದರು. ಅವರ ಪ್ಯಾಂಕ್ರಿಯಾಸ್‌ನ ತಲೆಭಾಗದಲ್ಲಿ ಗೆಡ್ಡೆಯೊಂದು ಕಂಡುಬಂದಿತ್ತು.


ಮಹಿಳೆಯು ಸುಮಾರು 70ರ ಆಸುಪಾಸಿನವರಾಗಿದ್ದರಿಂದ ಅವರಿಗೆ ಶಸ್ತ್ರಚಿಕಿತ್ಸೆ ನೆರವೇರಿಸುವುದು ವೈದ್ಯರಿಗೆ ಅತೀ ಸವಾಲೆನಿಸಿದ್ದು, ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುವಂತೆ ವೈದ್ಯರು ಸೂಚಿಸಿದ್ದರು. ಆರ್ಥಿಕ ಸಮಸ್ಯೆ ಕಾರಣ ರೋಗಿ ಕುಟುಂಬದವರು ಇಲ್ಲೇ ಕಡಿಮೆ ಖರ್ಚಿಯಲ್ಲಿ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಮನವಿ ಮಾಡಿದ್ದರು. ಪರಿಣಾಮ ವೈದ್ಯರ ತಂಡ ಸುಮಾರು 7-8 (ವಿಪ್ಪಲ್ ಪ್ರೊಸಿಜರ್) ತಾಸು ಮಹಿಳೆಗೆ ಶಸ್ತ್ರಚಿಕಿತ್ಸೆ ನೆರವೇರಿಸಿ, ಕೃತಕ ಉಸಿರಾಟ ವ್ಯವಸ್ಥೆ ಮಾಡಿ ಎರಡು ದಿನಗಳ ಕಾಲ ಐ ಸಿ ಯು ಮೂಲಕ ಆ ಬಳಿಕ ಆಸ್ಪತ್ರೆಯಲ್ಲೇ ಎರಡು ವಾರಗಳ ಚಿಕಿತ್ಸೆ ನೀಡಿ ಮಹಿಳೆಯು ಗುಣಮುಖರಾಗಿ ಮನೆ ಸೇರುವಲ್ಲಿ ವೈದ್ಯರ ತಂಡ ಯಶಸ್ಸನ್ನು ಕಂಡಿದೆ.
ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿ ಗ್ಯಾಸ್ಟ್ರೋ ಸರ್ಜನ್ ಆಗಿರುವ ಡಾ. ಅಶ್ವಿನ್ ಆಳ್ವರವರ ನೇತೃತ್ವದಲ್ಲಿ ಅರಿವಳಿಕೆ ತಜ್ಞ ಡಾ. ಅನೀಶ್ ಶರ್ಮಾ, ಸಹ ಸರ್ಜನ್ ಡಾ. ಶ್ರೀ ವರ್ಷಾ ಮತ್ತು ದಾದಿ ಉಷಾ ಇವರುಗಳ ತಂಡ ಈ ಶಸ್ತ್ರಚಿಕಿತ್ಸೆಯಲ್ಲಿ ಪಾಲ್ಗೊಂಡಿದ್ದು, ಆಡಳಿತ ಮಂಡಳಿಯೂ ವೈದ್ಯರ ತಂಡದ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿ ಅಭಿನಂದಿಸಿದೆ.

LEAVE A REPLY

Please enter your comment!
Please enter your name here