ಬಹುಮುಖ ವ್ಯಕ್ತಿತ್ವ ಹೊಂದಿದ್ದ ಪ್ರತಿಭೆ ನಟ್ಟೋಜ ಶಿವಾನಂದ ರಾವ್: ಸಂಜೀವ ಮಠಂದೂರು
ಪುತ್ತೂರು: ಎಲೆಮರೆ ಕಾಯಿಯಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜ ಕಟ್ಟುವ ಕಾಯಕದಲ್ಲಿ ತೊಡಗಿದ್ದ ಬಹುಮುಖ ವ್ಯಕ್ತಿತ್ವ ಹೊಂದಿದ್ದ ಪ್ರತಿಭೆ ನಟ್ಟೋಜ ಶಿವಾನಂದ ರಾವ್ ಅವರು. ಪುತ್ತೂರಿನಲ್ಲಿ ಮಾಜಿ ಶಾಸಕ ರಾಮ ಭಟ್ ಅವರ ಜೊತೆಗೆ ಹಿಂದೂ ಸಮಾಜವನ್ನು ಕಟ್ಟುವ ಕಾರ್ಯ ನಡೆಸಿದರು. ಅವರ ವ್ಯಕ್ತಿತ್ವ ಅನುಕರಣೀಯ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ನಗರದ ಅಂಬಿಕಾ ವಿದ್ಯಾಲಯದ ಶ್ರೀ ಶಂಕರ ಸಭಾಭವನದ ಲಲಿತಾಂಬಿಕಾ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಇತ್ತೀಚೆಗೆ ನಿಧನ ಹೊಂದಿದ ನಟ್ಟೋಜ ಶಿವಾನಂದ ರಾವ್ ಅವರ ಸಾರ್ವಜನಿಕ ಶ್ರದ್ಧಾಂಜಲಿ, ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಮ ಭಟ್ ಹಾಗೂ ಶಿವಾನಂದರು ಪುತ್ತೂರಿನಲ್ಲಿ ಸಹೋದರರಂತೆ ಓಡಾಡಿಕೊಂಡು ಸಮಾಜಮುಖಿ ಕೆಲಸಗಳನ್ನು ನಿರ್ವಹಿಸುತ್ತಿದ್ದರು. ಅವರಿಬ್ಬರೂ ಒಂದೇ ರೀತಿಯಾಗಿ ಆದರ್ಶವನ್ನು ಪಾಲಿಸುತ್ತಿದ್ದರು. ಶಿವಾನಂದರು ವಿಶ್ವಹಿಂದೂ ಪರಿಷತ್ ಮೂಲಕ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮಾಡಿದ ಹೋರಾಟಗಳು ಅವಿಸ್ಮರಣೀಯ. ಆಧ್ಯಾತ್ಮಿಕ ಹಾಗೂ ಸಾಮಾಜಿಕವಾಗಿ ತೊಡಗಿಕೊಂಡು ಅಂಬಿಕಾದಂತಹಾ ಶೈಕ್ಷಣಿಕ ಕ್ಷೇತ್ರಕ್ಕೂ ಅನನ್ಯ ಕೊಡುಗೆ ನೀಡಿದ್ದಾರೆ ಎಂದರು.
ಶಾಲೆಗಾಗಿ ಜಾಗ ನೀಡಿದರು:
ಅಂಬಿಕಾ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಬಾಲಕೃಷ್ಣ ಬೋರ್ಕರ್ ಮಾತನಾಡಿ, ಶಿವಾನಂದರು ಮೃದು ಸ್ವಭಾವದರಾಗಿದ್ದರೂ ಅವರು ಕೈಗೊಳ್ಳುತ್ತಿದ್ದ ನಿರ್ಧಾರಗಳು ಮಾತ್ರ ವಜ್ರದಂತೆ ಕಠಿಣವಾಗಿದ್ದವು. ಸ್ಥಳೀಯವಾಗಿ ಸರ್ಕಾರಿ ಶಾಲೆ ನಿರ್ಮಾಣವಾಗಬೇಕೆಂದು ತಮ್ಮ ಜಾಗವನ್ನೇ ಕೊಡುಗೆಯಾಗಿ ನೀಡಿದ್ದರು. ಹಿಂದುತ್ವ ಜಾಗೃತಿಗೆ ಸಾಮೂಹಿಕ ಸಾರ್ವಜನಿಕ ಸತ್ಯನಾರಾಯಣ ಪೂಜೆ ಆರಂಭಿಸಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಅಂಬಿಕಾ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಸುರೇಶ್ ಶೆಟ್ಟಿ ಮಾತನಾಡಿ, ಶಿವಾನಂದರು ಸನಾತನ ಹಿಂದೂ ಧರ್ಮದ ಬಗೆಗೆ ಅಪಾರ ಗೌರವ ಹೊಂದಿದ್ದು, ಅದರ ಪಾಲನೆಗೆ ಕಂಕಣ ಬದ್ಧರಾಗಿದ್ದರು. ಸಮರ್ಪಣಾ ಭಾವದಿಂದ ಸಮಾಜದ ಏಳಿಗೆಗೆ ತಮ್ಮನ್ನು ತಾವು ತೊಡಗಿಸಿಕೊಂಡರು ಎಂದರು.
ವಾಗ್ಮಿ ಆದರ್ಶ ಗೋಖಲೆ ಮಾತನಾಡಿ, ಸಮಾಜಕ್ಕೆ ಶಿವಾನಂದರು ಆದರ್ಶಪ್ರಾಯರು. ಸರ್ವಸ್ವವನ್ನೂ ಸಮಾಜಕ್ಕೆ ಎಂಬಂತೆ ಬದುಕಿದರು. ಅಬಾಲವೃದ್ಧರಾದಿಯಾಗಿ ಎಲ್ಲರಿಗೂ ಸಮಾನ ಗೌರವ ನೀಡುತ್ತಿದ್ದರು. ಅಧಿಕಾರ್ಕಕಾಗಿ ಆಸೆ ಪಟ್ಟಿದ್ದರೆ ಉನ್ನತ ಹುದ್ದೆ ಅಲಂಕರಿಸುತ್ತಿದ್ದರು ಆದರೆ, ಜನಸಾಮಾನ್ಯರಂತೆ ಬದುಕಿದರು. ರಾಮಮಂದಿರ ಲೋಕಾರ್ಪಣೆಯಾದ ಕ್ಷಣವನ್ನು ಕಣ್ಣಲ್ಲಿ ತುಂಬಿಕೊಂಡು ಕಣ್ಣೀರು ಹಾಕಿದ್ದರು ಎಂದು ಆ ಕ್ಷಣವನ್ನು ನೆನಪಿಸಿಕೊಂಡರು.
ನಟ್ಟೋಜ ಶಿವಾನಂದ ರಾವ್ ಅವರ ಅಳಿಯ ಸತ್ಯಶಂಕರ ಬೊಳ್ಮ ಮಾತನಾಡಿ, ಶಿವಾನಂದರು ಭವ್ಯ ಇತಿಹಾಸ ಹೊಂದಿರುವ ನಟ್ಟೋಜ ಮನೆತನದವರಾಗಿದ್ದು, ಆಧ್ಯಾತ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ಮಾದರಿ ವಿದ್ಯಾಲಯ ನಿರ್ಮಿಸಿದ ಸಂತೃಪ್ತಿ ಅವರದಾಗಿದ್ದು, ಇನ್ನಷ್ಟು ಬೆಳೆಯಬೇಕು ಎಂಬ ಮಹದಾಸೆ ಹೊಂದಿದ್ದರು ಎಂದರು.
ಹಿರಿಯ ವಕೀಲ ಎನ್.ಕೆ. ಜಗನ್ನಿವಾಸ ರಾವ್ ಮಾತನಾಡಿ, ಶಿವಾನಂದರು ಬಾಲ್ಯದಲ್ಲಿ ಉತ್ತಮ ಚಿತ್ರಕಾರರಾಗಿದ್ದರು. ಶಿವ ಬ್ರಾಹ್ಮಣ ಸಂಘಕ್ಕೆ ಅವರು ನೀಡಿದ ಕೊಡುಗೆ ಅನನ್ಯ ಎಂದರು.
ಡಾ.ಜೆ.ಸಿ.ಅಡಿಗಾ ಅವರು ನುಡಿನಮನ ಸಲ್ಲಿಸಿದರು. ಎಸ್.ವಿ. ರಾಮನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಟ್ಟೋಜ ಶಿವಾನಂದ ರಾವ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಪುತ್ತೂರು ಹಿಂದೂ ರುದ್ರಭೂಮಿ ನಿರ್ವಹಣೆ ಮಾಡುವ ಸತೀಶ್ ಅವರನ್ನು ಗೌರವಿಸಲಾಯಿತು.
ವಿದ್ಯಾ ಅರವಿಂದ್ ಪ್ರಾರ್ಥಿಸಿದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಸ್ವಾಗತಿಸಿದರು. ವಿದ್ಯಾಶಂಕರ ಕೋಟೇಕಾರು ವಂದಿಸಿದರು. ಬಾಲಕೃಷ್ಣ ರಾವ್ ನಿರೂಪಿಸಿದರು.