ಕಾವು: ತುಡರ್ ಯುವಕ ಮಂಡಲದ 13ನೇ ವಾರ್ಷಿಕೋತ್ಸವ-ತುಡರ್ ಹಬ್ಬ

0

*ನೃತ್ಯಾರ್ಪಣ
* ಸಭಾಕಾರ್ಯಕ್ರಮ-ಸನ್ಮಾನ
*ಕಾಪು ರಂಗತರಂಗ ಕಲಾವಿದರಿಂದ ತುಳು ನಾಟಕ



ಕಾವು: ಜಿಲ್ಲಾ ಪ್ರಶಸ್ತಿ ಪುರಸ್ಕೃತ ಕಾವು ನನ್ಯ ತುಡರ್ ಯುವಕ ಮಂಡಲದ 13ನೇ ವರ್ಷದ ವಾರ್ಷಿಕೋತ್ಸವ-ತುಡರ್ ಹಬ್ಬ ಕಾರ್ಯಕ್ರಮವು ಮಾ.24ರಂದು ಸಂಜೆ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು.

ನೃತ್ಯಾರ್ಪಣ-ಸಾಂಸ್ಕೃತಿಕ ಕಲರವ
ಸಂಜೆ 7 ಗಂಟೆಗೆ ಆರಂಭಗೊಂಡ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪುತ್ತೂರು ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ವಿದ್ವಾನ್ ದೀಪಕ್ ಕುಮಾರ್‌ರವರ ನಿರ್ದೇಶನದಲ್ಲಿ ತುಡರ್ ಕಲಾ ಸಂಘದ ವಿದ್ಯಾರ್ಥಿಗಳಿಂದ “ನೃತ್ಯಾರ್ಪಣ” ಕಾರ್ಯಕ್ರಮ ನಡೆಯಿತು. ನಾಟ್ಯ ಶಿಕ್ಷಕಿಯರಾದ ಅಕ್ಷತಾ ಮತ್ತು ಅಪೂರ್ವರವರು ಸಹಕರಿಸಿದರು. ತುಡರ್ ಯುವಕ ಮಂಡಲದ ಪ್ರತಿಭೆಗಳಿಂದ ವಿವಿಧ ಸಾಂಸ್ಕೃತಿಕ ಕಲರವ ನಡೆಯಿತು.

ಸಭಾ ಕಾರ್ಯಕ್ರಮ-ಸನ್ಮಾನ:
ಸಾಂಸ್ಕೃತಿಕ ಕಾರ್ಯಕ್ರಮದ ಬಳಿಕ ಸಭಾ ಕಾರ್ಯಕ್ರಮ ನಡೆಯಿತು.

ಸ್ವಂತ ಕಟ್ಟಡ ನಿರ್ಮಾಣ ಅದ್ಭುತ ಕೆಲಸ-ನನ್ಯ
ಸನ್ಮಾನ ಕಾರ್ಯಕ್ರಮ ನೆರವೇರಿಸಿದ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯರವರು ಮಾತನಾಡಿ ತುಡರ್ ಯುವಕ ಮಂಡಲವು ತನ್ನ 13ನೇ ವರ್ಷದಲ್ಲಿ ಸ್ವಂತ ಕಟ್ಟಡವನ್ನು ನಿರ್ಮಿಸುವ ಮೂಲಕ ಅದ್ಭುತ ಕೆಲಸವನ್ನು ಮಾಡಿದೆ, ಯುವಕ ಮಂಡಲಕ್ಕೆ ದೇವರ ಅನುಗ್ರಹದಿಂದ ಎಲ್ಲಾ ಕೆಲಸ ಕಾರ್ಯಗಳು ಒಳ್ಳೆಯ ರೀತಿಯಲ್ಲಿ ನಡೆಯುತ್ತಿದೆ, ಯುವಕ ಮಂಡಲ ಸಾಮಾಜಿಕವಾಗಿ ಏನೆಲ್ಲಾ ಕೆಲಸ ಮಾಡಬೇಕು ಅವೆಲ್ಲವನ್ನೂ ಶಿಸ್ತುಬದ್ಧವಾಗಿ ಸಾಧಿಸಿದ್ದಾರೆ, ಪ್ರತಿ ವರ್ಷ ತುಡರ್ ಹಬ್ಬ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸುವ ಒಳ್ಳೆಯ ಕೆಲಸ ಮಾಡುತ್ತಿದ್ದು, ಈ ಬಾರಿ ಸ್ವಂತ ಪರಿಶ್ರಮದಿಂದ ಬೆಳೆದು ಬಂದ ಪ್ರಾಮಾಣಿಕ ವ್ಯಕ್ತಿ ನಾರಾಯಣ ಮೂಲ್ಯರವರನ್ನು ಸನ್ಮಾನಿಸಿರುವುದು ಅತೀವ ಸಂತೋಷವಾಗಿದೆ ಎಂದು ಹೇಳಿದರು

ತುಡರ್‌ನಲ್ಲಿ ತಪ್ಪು ಹುಡುಕಲು ಸಾಧ್ಯವೇ ಇಲ್ಲ-ಕಾವು ಹೇಮನಾಥ ಶೆಟ್ಟಿ
ಮುಖ್ಯ ಅತಿಥಿಯಾಗಿದ್ದ ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ ಕಳೆದ 13 ವರ್ಷಗಳಲ್ಲಿ ಸುಮಾರು 500ಕ್ಕೂ ಅಧಿಕ ಸಮಾಜಮುಖಿ ಕಾರ್ಯಗಳನ್ನು ನಡೆಸಿರುವ ನಮ್ಮೂರಿನ ಹೆಮ್ಮೆಯ ಸಂಘಟನೆ ತುಡರ್‌ನಲ್ಲಿ ಯಾವುದೇ ತಪ್ಪು ಹುಡುಕಲು ಸಾಧ್ಯವೇ ಇಲ್ಲ, ಅವರು ಮಾಡಿರುವ ಪ್ರತಿಯೊಂದು ಕೆಲಸವೂ ಅದ್ಭುತವಾಗಿದೆ, ರಾಜಕೀಯ ಒಂದು ಕ್ಷೇತ್ರವನ್ನು ಬಿಟ್ಟು ಮತ್ತೆಲ್ಲಾ ಕ್ಷೇತ್ರದಲ್ಲೂ ತನ್ನದೇ ಆದ ಕೊಡುಗೆಗಳನ್ನು ನೀಡಿದ್ದಾರೆ, 10 ಸಾವಿರ ಸಸಿ ನೆಡುವ ಕಾರ್ಯಕ್ರಮ, ದಿನವೊಂದಕ್ಕೆ ದುಡಿಮೆಯ ರೂ. 1 ಉಳಿತಾಯ ಯೋಜನೆ ಈ ಯೋಜನೆಗಳು ನನಗೆ ಬಹಳ ಮೆಚ್ಚುಗೆಯನ್ನು ನೀಡಿದೆ ಎಂದು ಹೇಳಿದರು.

ರಾಜ್ಯೋತ್ಸವ ಪ್ರಶಸ್ತಿ ಸಿಗುವಂತಾಗಲಿ-ಪುತ್ತಿಲ
ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲರವರು ಮಾತನಾಡಿ ಸಾಮಾಜಿಕ ಪರಿಕಲ್ಪನೆಯಡಿ ಕೆಲಸ ಮಾಡುತ್ತಿರುವ ತುಡರ್ ಯುವ ಸಂಘಟನೆ ಸಮಾಜ ಕಾರ್ಯದ ಜತೆಗೆ ಧಾರ್ಮಿಕ ಪ್ರಜ್ಞೆ, ಸಾಮಾಜಿಕ ಕಳಕಳಿ, ಶಾಶ್ವತ ಕೊಡುಗೆಗಳ ಮೂಲಕ ದೂರದರ್ಶಿ ಸೂತ್ರವನ್ನು ಅಳವಡಿಸಿಕೊಂಡು ರಾಮರಾಜ್ಯದ ಪರಿಕಲ್ಪನೆಗೆ ಪೂರಕವಾದ ಕೆಲಸವನ್ನು ಮಾಡುತ್ತಿದೆ, ಇಂತಹ ಸಂಘಟನೆಗೆ ಮುಂದಿನ ವರ್ಷದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಸಿಗುವಂತಾಗಲಿ ಎಂದು ಶುಭಹಾರೈಸಿದರು.

ಯುವಶಕ್ತಿ ಸದ್ಭಳಕೆ ಆಗಿದೆ-ಡಾ. ಹರಿಕೃಷ್ಣ ಪಾಣಾಜೆ
ಎಸ್‌ಡಿಪಿ ರೆಡಿಮಿಸ್ & ರಿಸರ್ಚ್ ಸೆಂಟರ್‌ನ ನಿರ್ದೇಶಕ ಡಾ. ಹರಿಕೃಷ್ಣ ಪಾಣಾಜೆಯವರು ಮಾತನಾಡಿ ತುಡರ್ ಯುವಕ ಮಂಡಲವೂ ಗ್ರಾಮೀಣ ಭಾಗದಲ್ಲಿದ್ದರೂ ನಗರ ಪ್ರದೇಶದಲ್ಲಿರುವ ಅಂತರಾಷ್ಟೀಯ ಸಂಸ್ಥೆಗಳ ಸಮಾಜ ಸೇವೆಗೆ ಸರಿಸಮಾನವಾಗಿ ಬೆಳೆದು ನಿಂತಿದೆ, ಅಸಾಧ್ಯವಾದ ಕೆಲಸವನ್ನು ಗ್ರಾಮೀಣ ಭಾಗದಲ್ಲಿ ಸಾಧಿಸಿದ್ದಾರೆ, ಆ ಮೂಲಕ ದೇಶದ ಶಕ್ತಿಯಾಗಿರುವ ಯುವಶಕ್ತಿಯು ಸದ್ಭಳಕೆ ಆಗಿದೆ ಎಂದು ಹೇಳಿದರು.

ಜಾತ್ರಾ ಸಂಭ್ರಮವೂ ಹೆಚ್ಚಿದೆ-ದಿವ್ಯನಾಥ ಶೆಟ್ಟಿ ಕಾವು
ಸಭಾಧ್ಯಕ್ಷತೆ ವಹಿಸಿದ್ದ ಕಾವು ದೇವಸ್ಥಾನದ ಜಾತ್ರೋತ್ಸವ ಸಮಿತಿ ಅಧ್ಯಕ್ಷ ದಿವ್ಯನಾಥ ಶೆಟ್ಟಿ ಕಾವುರವರು ಮಾತನಾಡಿ ತುಡರ್ ಯುವಕ ಮಂಡಲದವರು ಜಾತ್ರೋತ್ಸವದ ಸಂದರ್ಭದಲ್ಲಿ ತುಡರ್ ಹಬ್ಬದ ಮೂಲಕ ಒಳ್ಳೆಯ ಕಾರ್ಯಕ್ರಮವನ್ನು ನೀಡಿ ಜಾತ್ರಾ ಸಂಭ್ರಮವನ್ನು ಹೆಚ್ಚಿಸಿದ್ದಾರೆ. ಯುವಕ ಮಂಡಲದ ಎಲ್ಲಾ ಕೆಲಸ ಕಾರ್ಯಗಳಿಗೆ ನಾವು ಬೆಂಬಲವನ್ನು ನೀಡಿದ್ದೇವೆ, ಸಮಾಜದಲ್ಲಿ ಇನ್ನಷ್ಟು ಕೆಲಸಗಳು, ಕೊಡುಗೆಗಳನ್ನು ನೀಡುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಹೇಳಿದರು.

ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ಕೆ.ಟಿ ಗೋಪಾಲ, ತುಡರ್ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುಬ್ರಾಯ ಬಲ್ಯಾಯರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.



ಮನರಂಜಿಸಿದ ಬುಡೆದಿ ತುಳುನಾಟಕ:
ಶರತ್ ಉಚ್ಚಿಲ ನಿರ್ದೇಶನದಲ್ಲಿ ಬಲೆ ತೆಲಿಪಾಲೆ ಖ್ಯಾತಿಯ ಪ್ರಶಂಸಾ ಕಾಪು ತಂಡದ ಸಂದೀಪ್ ಶೆಟ್ಟಿ ಮಾಣಿಬೆಟ್ಟು ಮತ್ತು ಪ್ರಸನ್ನ ಶೆಟ್ಟಿ ಬೈಲೂರು ಅಭಿನಯದಲ್ಲಿ ಕಾಪು ರಂಗತರಂಗ ಕಲಾವಿದರಿಂದ ಬುಡೆದಿ ಎಂಬ ತುಳು ತೆಲಿಕೆದ ಸಾಂಸಾರಿಕ ನಾಟಕ ಮನರಂಜಿಸಿತು.

ತುಡರ್ ಸುಜ್ಞಾನ ಭಜನಾ ಸಂಘದ ಸದಸ್ಯೆ ಪ್ರೀತಿಕಾ ಚಾಕೋಟೆ ಮತ್ತು ಬಳಗದವರು ಪ್ರಾರ್ಥಿಸಿದರು. ತುಡರ್ ಯುವಕ ಮಂಡಲದ ಅಧ್ಯಕ್ಷ ಜಗದೀಶ್ ನಾಯ್ಕ ಆಚಾರಿಮೂಲೆಯವರು ವಂದಿಸಿದರು. ಮಾಜಿ ಅಧ್ಯಕ್ಷ ಸುನೀಲ್ ನಿಧಿಮುಂಡ ಕಾರ್ಯಕ್ರಮ ನಿರ್ವಹಿಸಿದರು. ಯುವಕ ಮಂಡಲದ ಪದಾಧಿಕಾರಿಗಳಾದ ರಾಮಣ್ಣ ನಾಯ್ಕ ಆಚಾರಿಮೂಲೆ, ಸಂಕಪ್ಪ ಪೂಜಾರಿ ಚಾಕೋಟೆ, ಪುರುಷೋತ್ತಮ ಆಚಾರ್ಯ ನನ್ಯ, ಶ್ರೀಕುಮಾರ್ ಬಲ್ಯಾಯ, ಹರೀಶ್ ಕೆರೆಮೂಲೆ, ತಿರುಮಲೇಶ ಮಿನೋಜಿಕಲ್ಲು, ಶಶಿಕುಮಾರ್ ಪಟ್ಟುಮೂಲೆ, ನಿರಂಜನ ರಾವ್, ಹರ್ಷಿತ್ ಎ.ಆರ್‌ರವರು ಅತಿಥಿಗಳಿಗೆ ಶಾಲು ಹಾಕಿ ಗೌರವಿಸಿದರು. ಯುವಕ ಮಂಡಲದ ಸದಸ್ಯರುಗಳು ಸಹಕರಿಸಿದರು.

ಸನ್ಮಾನ:
ವಾಸ್ತು ಸಲಹೆಗಾರ ಮತ್ತು ಜಲ ಸಂಶೋಧಕರೂ ಆಗಿರುವ ನನ್ಯಪಟ್ಟಾಜೆ ನಿವಾಸಿ ನಾರಾಯಣ ಮೂಲ್ಯರವರಿಗೆ ತುಡರ್ ಯುವಕ ಮಂಡಲದಿಂದ ಈ ಬಾರಿಯ ಸನ್ಮಾನ ನೀಡಲಾಯಿತು. ನನ್ಯ ಅಚ್ಚುತ ಮೂಡೆತ್ತಾಯರವರು ಸನ್ಮಾನಿತರಿಗೆ ಶಾಲು ಹೊದಿಸಿ, ಪೇಟ ಇಟ್ಟು, ಏಲಕ್ಕಿ ಹಾರ ಹಾಕಿ, ಫಲಪುಷ್ಫ ಕಾಣಿಕೆ, ಸನ್ಮಾನ ಪತ್ರ ನೀಡಿ ಗೌರವಿಸಿದರು. ಯುವಕ ಮಂಡಲದ ಸದಸ್ಯ ಯತೀಶ್ ರೈ ಮದ್ಲ ಸನ್ಮಾನಪತ್ರ ವಾಚಿಸಿದರು.

LEAVE A REPLY

Please enter your comment!
Please enter your name here