ಪುತ್ತೂರು: ಅಡಿಕೆ ಕೃಷಿಯೊಂದಿಗೆ ಮಿಶ್ರಬೆಳೆಯಾಗಿ ಗುರುತಿಸಿಕೊಂಡಿದ್ದ ಕೊಕ್ಕೋ ಬೆಳೆ ಧಾರಣೆ 200 ಗಡಿ ದಾಟಿದೆ. ಮಾ.25ರಂದು ಮಾರುಕಟ್ಟೆಯಲ್ಲಿ ರೂ.205ರ ವರೆಗೆ ಮಾರಾಟ ಕಂಡಿದೆ. ಮಾರ್ಚ್ ಮೊದಲ ವಾರದಲ್ಲಿ ಕೊಕ್ಕೋ ಧಾರಣೆ ಏರಿಕೆಯ ಹಾದಿಯಲ್ಲಿತ್ತು. ಬಳಿಕ ಧಾರಣೆಯಲ್ಲಿ ಏರಿಕೆಯಾಗುತ್ತಲೇ ಇದ್ದು ಇದೀಗ ಹೊರ ಮಾರುಕಟ್ಟೆಯಲ್ಲಿ ಹಸಿ ಕೊಕ್ಕೊ ಕೆ.ಜಿ.ಗೆ 205ರವರೆಗೂ ಖರೀದಿಯಾಗಿದೆ.
ಕೊಕ್ಕೋ ಬೆಳೆಯನ್ನು ಕಡೆಗಣಿಸಿ ಅಡಿಕೆ ಬೆಳೆಗೆ ಮಹತ್ವ ನೀಡಿದುದೇ ಧಾರಣೆ ಏರಿಕೆ ಕಾರಣ ಎಂದು ಅಭಿಪ್ರಾಯ ಕೇಳಿಬಂದಿದೆ. ಕೃಷಿಕರು ಅಡಿಕೆ ತೋಟದಲ್ಲಿ ಕೊಕ್ಕೋ ಬೆಳೆಯನ್ನು ಮಿಶ್ರಬೆಳೆಯಾಗಿ ಬೆಳೆಸುತ್ತಿದ್ದರು. ಕೆಲವು ವರ್ಷದ ಹಿಂದೆ ಅಡಿಕೆಗೆ ರೂ.500ಕ್ಕಿಂತಲೂ ಹೆಚ್ಚು ಧಾರಣೆ ಏರಿಕೆಯಾದ ಕೂಡಲೇ ಕೃಷಿಕರು ಮಿಶ್ರಬೆಳೆಯನ್ನು ಕೈಬಿಟ್ಟು ಅಡಿಕೆ ಬೆಳೆಗೆ ಹೆಚ್ಚಿನ ಗಮನ ಕೊಟ್ಟರು. ಅಡಿಕೆ ತೋಟದಲ್ಲಿದ್ದ ಕೊಕ್ಕೋ ಗಿಡಗಳನ್ನು ಕಡಿಯುವುದರ ಮೂಲಕ ಕೊಕ್ಕೋ ಬೆಳೆಯಮ್ಮು ನಾಶ ಮಾಡಿದರು. ಪರಿಣಾಮ ಕೊಕ್ಕೋ ಬೆಳೆಗೆ ಬೇಡಿಕೆ ಬಂದು ಧಾರಣೆಯಲ್ಲಿ ಏರಿಕೆ ಕಂಡಿದೆ.