





ಸಾಮಾನ್ಯ ಜನರೂ ಕಗ್ಗದ ಆಶಯವನ್ನು ಅರ್ಥ ಮಾಡಿಕೊಳ್ಳುವ ಕೃತಿ – ಪ್ರೊ. ವಿ.ಬಿ.ಅರ್ತಿಕಜೆ


ಪುತ್ತೂರು: ಪುತ್ತೂರಿನ ಸುದಾನ ವಸತಿ ಶಾಲೆಯ ಅಂಗ ಸಂಸ್ಥೆಯಾದ ಸುದಾನ ಕಿಟ್ಟೆಲ್ ಸೆಂಟರ್ ಫಾರ್ ಡೆವಲಪ್ಮೆಂಟ್ ಸಂಸ್ಥೆಯ ಆಶ್ರಯದಲ್ಲಿ ಶಾಲೆಯ ಕನ್ನಡ ಶಿಕ್ಷಕಿ ಕವಿತಾ ಅಡೂರು ಅವರು ಮಂಕು ತಿಮ್ಮನ ಕಗ್ಗದ ವ್ಯಾಖ್ಯಾನವುಳ್ಳ ಕಗ್ಗದ ಬೆಳಕು ಅಂಕಣ ಬರಹಗಳ ಸಂಗ್ರಹ ’ಎಲ್ಲರೊಳಗೊಂದಾಗು’ ಎಂಬ ಕೃತಿಯ ಲೋಕಾರ್ಪಣಾ ಕಾರ್ಯಕ್ರಮವು ಮಾ.23 ರಂದು ಸಂಸ್ಥೆಯ ಅಡ್ವರ್ಡ್ ಹಾಲ್ನಲ್ಲಿ ನಡೆಯಿತು.





ಕೃತಿ ಬಿಡುಗಡೆ ಮಾಡಿದ ಹಿರಿಯ ಸಾಹಿತಿ ಫ್ರೊ ವಿ ಬಿ ಅರ್ತಿಕಜೆಯವರು ಮಾತನಾಡಿ ” ಈ ಪುಸ್ತಕದಲ್ಲಿ ಮಂಕುತಿಮ್ಮನ ಕಗ್ಗದ ಚೌಪದಿಗಳ ಧ್ವನ್ಯಾರ್ಥವನ್ನು ಗದ್ಯ ರೂಪದಲ್ಲಿ ಬರೆದಿರುವುದರಿಂದ ಸಾಮಾನ್ಯ ಜನರೂ ಕಗ್ಗದ ಆಶಯವನ್ನು ಅರ್ಥ ಮಾಡಿಕೊಳ್ಳುವ ಹಾಗಾಗಿದೆ. ಶ್ಲಾಘನೀಯ ಕಾರ್ಯ ಇದು ” ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ನಿರ್ದೇಶಕ ಡಾ ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ “ಬದುಕಿನ ನೋವು-ನಲಿವು ಸಮಸ್ಯೆಗಳಲ್ಲಿ ಅದನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನು ತಿಳಿಸುತ್ತಾ ನಮ್ಮೊಳ ಹೊಕ್ಕು ಪರಿಶೀಲಿಸಿಕೊಳ್ಳುವುದಕ್ಕೆ ಕಗ್ಗದ ಓದು ಸಹಕಾರಿಯಾಗುತ್ತದೆ’ ಎಂದು ಅಭಿಪ್ರಾಯ ಪಟ್ಟರು.
ಕೃತಿಕಾರರಾದ ಕವಿತಾ ಅಡೂರು ಅವರು ಮಾತನಾಡಿ ” ಮಂಕುತಿಮ್ಮನ ಕಗ್ಗವು ನೊಂದವರ ಬದುಕಿಗೆ ನೆಮ್ಮದಿಯನ್ನು ನೀಡಲಿ ಎಂಬ ಡಿವಿಜಿಯವರ ಆಶಯವು ಸಾಕಾರಗೊಳ್ಳಲಿ.” ಎಂದು ಹಾರೈಸಿದರು.
ಕೃತಿ ಸಮೀಕ್ಷೆಯನ್ನು ಮಾಡಿದ ಮಡಿಕೇರಿ ಆಕಾಶವಾಣಿಯ ಉದ್ಘೋಷಕ ಸುಬ್ರಾಯ ಸಂಪಾಜೆಯವರು ಮಾತನಾಡಿ ” ಎಲ್ಲರೊಳಗೊಂದಾಗು ಎಂಬ ಈ ಪುಸ್ತಕದಲ್ಲಿ ಸಾಹಿತ್ಯ, ವಿಜ್ಞಾನ,ಸಾಮಾಜಿಕ ಬದುಕಿನ ಚಿತ್ರಣ,ವೇದಾಂತ ಮುಂತಾದವುಗಳಿವೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ನೊಂದ ಮನಸ್ಸಿಗೆ ಸಾಂತ್ವನವಿದೆ, ಸಮಸ್ಯೆಗಳಿಗೆ ಪರಿಹಾರ ಇದೆ.” ಎಂದು ನುಡಿದರು.
ಮುಖ್ಯ ಅಭ್ಯಾಗತರಾಗಿ ಆಗಮಿಸಿದ್ದ ಹಿರಿಯ ವಿದ್ವಾಂಸ ಮಂಜುಳಗಿರಿ ವೆಂಕಟರಮಣ ಭಟ್ ರವರು ಮಾತನಾಡಿ “ತಮ್ಮ ಆಶ್ರಯದಲ್ಲಿರುವ ಉದ್ಯೋಗಿಯೊಬ್ಬರ ಪ್ರತಿಭೆಯನ್ನು ಗುರುತಿಸಿ ಪೋಷಿಸುವ, ಪ್ರೋತ್ಸಾಹಿಸುವ ಸುದಾನ ಸಂಸ್ಥೆಯ ಉದಾತ್ತ ಗುಣವು ಶ್ಲಾಘನೀಯ” ಎಂದು ನುಡಿದರು.
ಸುದಾನ ವಸತಿಯುತ ಶಾಲೆಯ ಸಂಚಾಲಕ ರೇ ವಿಜಯ ಹಾರ್ವಿನ್ ರವರು ಮಾತನಾಡಿ “ಶಿಕ್ಷಕರು ಮಕ್ಕಳಿಗೆ ಆದರ್ಶವಾಗಬೇಕು, ಪಠ್ಯೇತರ ಚಟುವಟಿಕೆಗಳು ಮಕ್ಕಳ ಮನೋವಿಕಾಸಕ್ಕೆ ಅತ್ಯಗತ್ಯ” ಎಂದು ನುಡಿದರು. ಶಾಲಾ ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಹಶಿಕ್ಷಕಿ ಅನಿತಾ ಕೃತಿಕಾರರನ್ನು ಪರಿಚಯಿಸಿದರು. ಸಹಶಿಕ್ಷಕಿ ಅಮೃತವಾಣಿ ವಂದಿಸಿದರು. ಶಾಲಾ ವಿದ್ಯಾರ್ಥಿಗಳಾದ ಅಕ್ಷರ ಕೆ ಸಿ, ಮಾನ್ವಿ ವಿಶ್ವನಾಥ,ಗ್ರೀಷ್ಮಾ ಡಿವಿಜಿ ರಚನೆಯ ವನಸುಮದೊಲೆನ್ನ ಪದ್ಯದ ಮೂಲಕ ಪ್ರಾರ್ಥನೆಯನ್ನು ನೆರವೇರಿಸಿದರು.









