ಪುತ್ತೂರು: ಯೇಸುಕ್ರಿಸ್ತರನ್ನು ಶಿಲುಬೆಗೇರಿಸಿದ ದಿನವಾದ ‘ಗುಡ್ ಫ್ರೈಡೇ’ ಶುಭ ಶುಕ್ರವಾರ ದಿನವನ್ನು ಮಾ.29 ರಂದು ತಾಲೂಕಿನೆಲ್ಲೆಡೆ ಕ್ರೈಸ್ತ ಬಾಂಧವರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ಶುಭ ಶುಕ್ರವಾರ ಎಂದರೆ:
ಬೆತ್ಲೆಹೇಮಿನ ದನದ ಕೊಟ್ಟಿಗೆಯಲ್ಲಿ ಕ್ರಿಸ್ತ ಜನಿಸಿದಾಗ ವ್ಯಕ್ತವಾದ ಪ್ರೀತಿ ಒಂದು ಮಳೆಯ ಹನಿಯಂತೆ, ಆದರೆ ಕಲ್ವಾರಿ ಶಿಲುಬೆಯ ಮೇಲೆ ಅರೆ ಬೆತ್ತಲೆಯಾಗಿ ಪ್ರಾಣಾರ್ಪಣೆ ಮೂಲಕ ಪ್ರಭು ಕ್ರಿಸ್ತರ ಪ್ರೀತಿ ಭೋರ್ಗರೆಯುವ ಜಲಪಾತದಂತೆ ಹರಿದು ಬಂದು ನಮ್ಮನ್ನು ಸಂಪೂರ್ಣ ತೊಯ್ದು ಬಿಡುತ್ತದೆ. ಪ್ರಭು ಕ್ರಿಸ್ತರು ತಂದೆಯ ಚಿತ್ತದಂತೆ ನವ ಸಮಾಜದ ಮೌಲ್ಯಗಳಾದ ವಿಶ್ವಾಸ, ಕರುಣೆ, ಸೇವೆ, ಬದ್ಧತೆಗಳನ್ನು ಪಾಲಿಸಿದವರು. ಪ್ರಭು ಕ್ರಿಸ್ತರ ಮರಣವನ್ನು ಅವರ ಜೀವನದ ಗುರಿಯ ಹಿನ್ನೆಲೆಯಲ್ಲಿ ನೋಡಬೇಕು. ಏಸು ಸ್ವಾಮಿಯ ಬದುಕಿನ ಉದ್ದೇಶ ಮನುಕುಲದ ಉದ್ಧಾರ ಮಾಡುವುದಾಗಿತ್ತು. ಶಾಂತಿ, ಪ್ರೀತಿ, ತ್ಯಾಗ, ಸೇವೆ, ವಿಶ್ವಾಸ, ಕ್ಷಮೆ ಹಾಗೂ ಭರವಸೆಗಳಿಂದ ಕೂಡಿದ ದೇವರ ರಾಜ್ಯದತ್ತ ನಡೆಸುವುದಾಗಿತ್ತು. ಕ್ರಿಸ್ತ ತನ್ನ ಪ್ರಾಣವನ್ನು ಧಾರೆ ಎರೆದದ್ದು ಅಂತಹ ಮೌಲ್ಯಗಳನ್ನೊಳಗೊಂಡ ನವ ಸಮಾಜವನ್ನು ನಿರ್ಮಿಸುವ ಉದ್ದೇಶದಿಂದ ಎನ್ನುವುದು ಕ್ರೈಸ್ತ ಬಾಂಧವರ ನಂಬಿಕೆಯಾಗಿದೆ.
ಮಾಯಿದೆ ದೇವುಸ್ ಚರ್ಚ್‌ನಲ್ಲಿ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್, ಸಹಾಯಕ ಧರ್ಮಗುರು ವಂ|ಲೋಹಿತ್ ಅಜಯ್ ಮಸ್ಕರೇನ್ಹಸ್, ಧರ್ಮಗುರುಗಳಾದ ವಂ|ಸ್ಟ್ಯಾನಿ ಪಿಂಟೋ, ವಂ|ಅಶೋಕ್ ರಾಯನ್ ಕ್ರಾಸ್ತಾ, ವಂ|ರೂಪೇಶ್ ತಾವ್ರೋ, ಬನ್ನೂರು ಸಂತ ಅಂತೋನಿ ಚರ್ಚ್‌ನಲ್ಲಿ ಪ್ರಧಾನ ಧರ್ಮಗುರು ವಂ|ಬಾಲ್ತಜಾರ್ ಪಿಂಟೋ, ವಂ|ಡೆನ್ಸಿ ಮಾರ್ಟಿಸ್, ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್‌ನ ಪ್ರಧಾನ ಧರ್ಮಗುರು ವಂ|ನೀಲೇಶ್ ಡೊನಾಲ್ಡ್ ಕ್ರಾಸ್ತಾ, ಧರ್ಮಗುರುಗಳು, ಧರ್ಮಭಗಿನಿಯರು, ಆಯಾ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷರು, ಕಾರ್ಯದರ್ಶಿ, ವಾಳೆ ಗುರಿಕಾರರು, ವೇದಿ ಸೇವಕರು, ಭಕ್ತ ಬಾಂಧವರು ಆಯಾ ಚರ್ಚ್‌ಗಳಲ್ಲಿ ಧಾರ್ಮಿಕ ವಿಽವಿಧಾನದಲ್ಲಿ ಪಾಲ್ಗೊಂಡರು.
ಶ್ರದ್ಧಾಭಕ್ತಿಯ ಶಿಲುಬೆಯ ಹಾದಿ…
ಮಾಯಿದೆ ದೇವುಸ್ ಚರ್ಚ್, ಬನ್ನೂರು ಚರ್ಚ್, ಮರೀಲ್ ಚರ್ಚ್, ಉಪ್ಪಿನಂಗಡಿ ಚರ್ಚ್ ಸೇರಿದಂತೆ ಆಯಾ ಚರ್ಚ್‌ಗಳಲ್ಲಿ ಕ್ರೈಸ್ತ ಬಾಂಧವರು ಯೇಸುಕ್ರಿಸ್ತರ ಶಿಲುಬೆಯ ಹಾದಿಯ 14 ಸ್ಥಳಗಳನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಮಾಯಿದೆ ದೇವುಸ್ ಚರ್ಚ್‌ನಲ್ಲಿ ಪ್ರಭು ಯೇಸುವಿನ ಪೂಜ್ಯ ಶರೀರದ ಸ್ಮರಣಾ ಮೆರವಣಿಗೆಯು ಚರ್ಚ್‌ನಿಂದ ಹೊರಟು ಎಂ.ಟಿ ರಸ್ತೆಯಿಂದ ಸಾಗಿ, ಕೋರ್ಟು ರಸ್ತೆಯ ಮೂಲಕ ಮರಳಿ ಚರ್ಚ್‌ಗೆ ಆಗಮಿಸಿತು. ಬಳಿಕ ಯೇಸುಕ್ರಿಸ್ತರ ಪೂಜ್ಯ ಶರೀರವನ್ನು ಮತ್ತು ಮರಿಯಮ್ಮನ ಪಾದವನ್ನು ಭಕ್ತರು ಮುಟ್ಟಿ ಆಶೀರ್ವಾದ ಪಡೆದರು.
ಬಲಿಪೂಜೆಗಳಿಲ್ಲ.
ಕಲ್ವಾರಿ ಬೆಟ್ಟದ ಮೇಲೆ ಪ್ರಭು ಕ್ರಿಸ್ತರು ಮನುಕುಲದ ರಕ್ಷಣೆಗಾಗಿ ಪ್ರಾಣಾರ್ಪಣೆ ಮಾಡಿದ ದಿನವನ್ನು ‘ಶುಭ ಶುಕ್ರವಾರ’ವನ್ನಾಗಿ ಆಚರಿಸಲಾಗುತ್ತದೆ. ಆ ದಿನದಂದು ಜಗತ್ತಿನಾದ್ಯಂತ ಕ್ರೈಸ್ತ ದೇವಾಲಯಗಳಲ್ಲಿ ಬಲಿಪೂಜೆಗಳು ಇರುವುದಿಲ್ಲ. ಆದರೆ ಅರ್ಥವತ್ತಾದ ಆರಾಧನೆ ಮತ್ತು ಪ್ರಾರ್ಥನೆಗಳು ಶುಕ್ರವಾರ ಬೆಳಿಗ್ಗೆಯಿಂದಲೇ ಆಯಾ ಚರ್ಚ್‌ಗಳಲ್ಲಿ ನಡೆಯುತ್ತದೆ. ಏಸು ಕ್ರಿಸ್ತರನ್ನು ಶಿಲುಬೆಗೆ ಏರಿಸುವ ಮುನ್ನ ಶಿಲುಬೆಯನ್ನು ಹೊತ್ತು ಸಾಗಿದ ಘಟನಾವಳಿಯನ್ನು ಸ್ಮರಿಸುವ ‘ವೇ ಆಫ್ ದಿ ಕ್ರಾಸ್’ (ಶಿಲುಬೆಯ ಹಾದಿ)ವನ್ನಾಗಿ ಆಚರಿಸಲಾಗುತ್ತದೆ.