ಬೆಳ್ಳಿಹಬ್ಬದ ಸಂಭ್ರಮದಲ್ಲಿ ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್ – ಎ.1ರಂದು ಸಂಭ್ರಮದ ದಿವ್ಯ ಬಲಿಪೂಜೆ, ಸಭಾ ಕಾರ್ಯಕ್ರಮ

0

ಪುತ್ತೂರು: ಬೆಳೆಯುತ್ತಿರುವ ಕಟ್ಟಡಗಳು, ವಾಹನಗಳ ದಟ್ಟಣೆ, ಜನರ ಗಿಜಿಗಿಜಿ ಓಡಾಟದ ನಡುವೆ ಜಿಲ್ಲಾ ಕೇಂದ್ರವಾಗಲು ದಾಪುಗಾಲಿಡುತ್ತಿರುವ ಮುತ್ತಿನನಗರಿ ಪುತ್ತೂರು ಜನಜಂಗುಳಿಯಿಂದ ಹಾಗೂ ವಾಹನಗಳ ದಟ್ಟಣೆಯಿಂದ ದೂರ ಸರಿದ ಪ್ರಶಾಂತ ವಾತಾವರಣದ ಪುತ್ತೂರಿನ ಹೊರ ವಲಯದ ಬೆದ್ರಾಳ-ಮರೀಲು ಎಂಬ ಪುಟ್ಟ ಊರಿನಲ್ಲಿ ಕಾಣ ಸಿಗುವುದೇ ಸೆಕ್ರೇಡ್ ಹಾರ್ಟ್ ಆಫ್ ಜೀಸಸ್ ಚರ್ಚ್.

ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯಗೊಳಪಟ್ಟ ಚರ್ಚ್ ಇದೀಗ ಹೊಸತನದೊಂದಿಗೆ ಬೆಳ್ಳಿಹಬ್ಬದ ಸಂಭ್ರಮವನ್ನು ಕಾಣುತ್ತಿದೆ. ಈ ಬೆಳ್ಳಿಹಬ್ಬದ ಸಂಭ್ರಮದ ಪ್ರಯುಕ್ತ ಎ.1ರಂದು ಸಂಜೆ ದಿವ್ಯ ಬಲಿಪೂಜೆ ಜರಗಲಿದ್ದು ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ.ವಂ.ಡಾ|ಪೀಟರ್ ಪಾವ್ಲ್ ಸಲ್ದಾನ್ಹಾರವರು ಪ್ರಧಾನ ದಿವ್ಯ ಬಲಿಪೂಜೆಯನ್ನು ನಡೆಸಿಕೊಡಲಿರುವರು. ಜೊತೆಗೆ ಪುತ್ತೂರು ಮಲಂಕರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ.ವಂ.ಡಾ|ಗೀವರ್ಗೀಸ್ ಮಾರ್ ಮಕಾರಿಯೋಸ್, ಪುತ್ತೂರು ವಲಯದ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರೊಂದಿಗೆ ಹಲವಾರು ಧರ್ಮಗುರುಗಳು ಭಾಗವಹಿಸಲಿದ್ದಾರೆ. ದಿವ್ಯ ಬಲಿಪೂಜೆ ಬಳಿಕ ಸಭಾ ಕಾರ್ಯಕ್ರಮ, ಕಾಮಿಡಿ ಕಂಪೆನಿ ಗ್ರೂಪ್‌ನ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ ಎಂದು ಚರ್ಚ್ ಧರ್ಮಗುರು ವಂ|ಡೊನಾಲ್ಡ್ ನೀಲೇಶ್ ಕ್ರಾಸ್ತಾ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೋನ್ ಮಸ್ಕರೇನ್ಹಸ್, ಕಾರ್ಯದರ್ಶಿ ಡಾ|ಎಡ್ವಿನ್ ಸಂತಾನ್ ಡಿ’ಸೋಜ, ಚರ್ಚ್ ಪಾಲನಾ ಸಮಿತಿ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಸೆಕ್ರೇಡ್ ಹಾರ್ಟ್ ಆಫ್ ಜೀಸಸ್ ಚರ್ಚ್ 1997 ಡಿಸೆಂಬರ್ 21ರಂದು ದೆಹಲಿಯ ಆರ್ಚ್ ಬಿಷಪರಾದ ಅತೀ ವಂ.ಡಾ||ವಿನ್ಸೆಂಟ್ ಕೊನ್ಸೆಸೊರವರಿಂದ ಶಿಲಾನ್ಯಾಸ ಮತ್ತು ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷರಾದ ಅತಿ.ವಂ|ಡಾ|ಅಲೋಶಿಯಸ್ ಪಾವ್ಲ್ ಡಿ’ಸೋಜರವರಿಂದ ಆಶೀರ್ವದಿಸಲ್ಪಟ್ಟಿತ್ತು. 1998ರಲ್ಲಿ ಚರ್ಚ್ ಸ್ಥಾಪನೆಯಾಗಿದ್ದು 1999, ಮೇ 6ರಂದು ಚರ್ಚಿಗೆ ಅಧಿಕೃತ ಡಿಕ್ರಿ ಲಭಿಸಿತು. ವಂ|ರೊನಾಲ್ಡ್ ಡಿ’ಸೋಜರವರು ಚರ್ಚಿನ ಸ್ಥಾಪಕ ಗುರುಗಳಾಗಿ ಬಳಿಕ ವಂ|ಪೌಲ್ ಡಿ’ಸೋಜ, ವಂ|ಡಾ|ಆ್ಯಂಟನಿ ಪ್ರಕಾಶ್ ಮೊಂತೇರೊ, ವಂ|ಫ್ರಾನ್ಸಿಸ್ ಅಸ್ಸಿಸಿ ಡಿ’ಅಲ್ಮೇಡ, ವಂ|ವಲೇರಿಯನ್ ಫ್ರ್ಯಾಂಕ್ ಪ್ರಸ್ತುತ್ನ 2023, ಅಕ್ಟೋಬರ್ 7ರಿಂದ ವಂ|ಡೊನಾಲ್ಡ್ ನೀಲೇಶ್ ಕ್ರಾಸ್ತಾರವರು ಮುನ್ನೆಡೆಸುತ್ತಿದ್ದಾರೆ. ಚರ್ಚ್ ಪರಿಮಿತಿಯಲ್ಲಿ ಸುಮಾರು 272 ಕುಟುಂಬಗಳಿದ್ದು 11 ವಾಳೆಗಳಾಗಿ ವಿಂಗಡಿಸಲಾಗಿದೆ.

LEAVE A REPLY

Please enter your comment!
Please enter your name here