ಪುತ್ತೂರು: ದ.ಕ.ಲೋಕಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಬಿಜೆಪಿ 2.75 ಲಕ್ಷ ಮತಗಳ ಅಂತರದಿಂದ ಗೆದ್ದಿದೆ. ಈ ಭಾರಿ 3.50 ಲಕ್ಷ ಮತಗಳ ಅಂತರದಿಂದ ಗೆದ್ದು ಇತಿಹಾಸ ನಿರ್ಮಾಣ ಮಾಡಬೇಕು. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಭಾರಿ 30 ಸಾವಿರ ಮತಗಳ ಲೀಡ್ ಇತ್ತು. ಈ ಭಾರಿ 50ಸಾವಿರಕ್ಕೂ ಹೆಚ್ಚು ಮತಗಳ ಲೀಡ್ ಪಡೆಯಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ಎ.1ರಂದು ಲೋಕಸಭಾ ಚುನಾವಣೆಗೆ ಸಂಬಂಧಿಸಿ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಾಲಯವನ್ನು ಪುತ್ತೂರು ಬಿಜೆಪಿ ಕಚೇರಿಯ ಬಳಿ ಉದ್ಘಾಟಿಸಿ ಮಾತನಾಡಿದರು. 2024ರ ರಣರಂಗ ಸಿದ್ದವಾಗಿದೆ. ಬಿಜೆಪಿ ದಕ್ಷಿಣ ಕನ್ನಡ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಸಮರ್ಥ ನಾಯಕ, ಹತ್ತಾರು ವರ್ಷ ಸೇನೆಯಲ್ಲಿ ಸೇವೆ ಮಾಡಿರುವ ಕ್ಯಾ| ಬ್ರಿಜೇಶ್ ಚೌಟ ಅವರನ್ನು ಕಣಕ್ಕಿಳಿಸಿದೆ. ಈ ಭಾರಿ ಅತೀ ಹೆಚ್ಚು ಅಂತರದಿಂದ ಬ್ರಿಜೇಶ್ ಚೌಟರಿಗೆ ಗೆಲುವು ಸಿಗಬೇಕೆಂದು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತಿದ್ದೇನೆ. ಇದಕ್ಕೆ ಈ ಕಾರ್ಯಾಲಯ ಪ್ರೇರಣೆಯಾಗಲಿ ಎಂದರು. ಈ ಚುನಾವಣೆ ಪಂಚಾಯತ್, ವಿಧಾನಸಭೆಯ ಚುನಾವಣೆಯಂತೆ ಅಲ್ಲ. ದೇಶದ ಭವಿಷ್ಯ ನಿರ್ಮಾಣ ಮಾಡುವ ಜಗತ್ವಂಧ್ಯ ಭಾರತ ಸಂಕಲ್ಪವನ್ನು ಈಡೇರಿಸುವ ಚುನಾವಣೆಯಾಗಿದೆ. ಹಾಗಾಗಿ ಈ ಚುನಾವಣೆಯ ಫಲಿತಾಂಶದಲ್ಲಿ ಎನ್ಡಿಎ 400 ಸ್ಥಾನ ಪಡೆಯುವ ಮೂಲಕ ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗುವುದು ನಿಶ್ಚಿತ. ದಕ್ಷಿಣ ಕನ್ನಡದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ನರೇಂದ್ರ ಮೋದಿಯವರಿಗೆ ಕೊಡುಗೆ ನೀಡಬೇಕು. ನಿರಂತರವಾಗಿ ೩೪ ವರ್ಷಗಳಿಂದ ಈ ಲೋಕಸಭಾ ಕ್ಷೇತ್ರ ಬಿಜೆಪಿ ಕೈಯಲ್ಲಿ ಇದೆ. ಇದನ್ನು ಉಳಿಸಿಕೊಳ್ಳಬೇಕೆಂದು ನಳಿನ್ಕುಮಾರ್ ಕಟೀಲ್ ಹೇಳಿದರು.
ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷರಾದ ಮುಗೆರೋಡಿ ಬಾಲಕೃಷ್ಣ ರೈ, ನನ್ಯ ಅಚ್ಚುತ ಮೂಡೆತ್ತಾಯ, ಎಸ್ ಅಪ್ಪಯ್ಯ ಮಣಿಯಾಣಿ, ದಕ್ಷಿಣ ಕನ್ನಡ ಜಿಲ್ಲಾ ಚುನಾವಣಾ ಪ್ರಭಾರಿ ಸುಲೋಚನಾ ಭಟ್, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿರುವ ಪ್ರಭಾರಿ ಸುನಿಲ್ ಆಳ್ವ, ಮಾಜಿ ಶಾಸಕರಾದ ಸಂಜೀವ ಮಠಂದೂರು, ಮಲ್ಲಿಕಾ ಪ್ರಸಾದ್, ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಯುವರಾಜ್ ಪೆರಿಯತ್ತೋಡಿ, ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಕುಮಾರ್ ಶಾಂತಿವನ, ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ಜಯಶ್ರೀ ಎಸ್ ಶೆಟ್ಟಿ, ಹಿರಿಯರಾದ ವಿಶ್ವೇಶ್ವರ ಭಟ್ ಬಂಗಾರಡ್ಕ, ಚುನಾವಣಾ ನಿರ್ವಹಣಾ ಸಮಿತಿ ಸಹ ಸಂಚಾಲಕ ಉಮೇಶ್ ಕೋಡಿಬೈಲು ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ಚನಿಲ ತಿಮ್ಮಪ್ಪ ಶೆಟ್ಟಿ ಸ್ವಾಗತಿಸಿ, ಬಿಜೆಪಿ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ವಂದಿಸಿದರು. ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.
ಮತಗಟ್ಟೆಯ ಗೆಲುವು ದೇಶದ ಗೆಲುವು
ಕಳೆದ 15 ವರ್ಷಗಳಿಂದ ನಾನು ಸಂಸದನಾಗಿದ್ದೆ. ಯುಪಿಎ ಸರಕಾರದ ಅವಧಿಯಲ್ಲಿ 5 ವರ್ಷ ಸಂಸದನಾಗಿದ್ದೆ. 10 ವರ್ಷ ನರೇಂದ್ರ ಮೋದಿಯವರ ಕಾಲಘಟ್ಟದಲ್ಲಿ ಸಂಸದನಾಗಿದ್ದೆ. ಯುಪಿಎ ಸರಕಾರದಿಂದ ದ.ಕ.ಜಿಲ್ಲೆಗೆ ಬಂದದ್ದು ರೂ.4,500ಕೋಟಿ ಅನುದಾನ ಮಾತ್ರ. ಆದರೆ ಕಳೆದ 10 ವರ್ಷ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದಿಂದ ಜಿಲ್ಲೆಗೆ 1.13ಲಕ್ಷ ಕೋಟಿ ರೂ.ಅನುದಾನ ಬಂದಿದೆ. ಈ ಕುರಿತ ಎಲ್ಲಾ ಅಂಕಿ ಅಂಶ, ದಾಖಲೆಗಳು ಇವೆ. ನರೇಂದ್ರ ಮೋದಿಯವರು ಈ ಜಿಲ್ಲೆಗೆ ಅನುದಾನ ಸಹಿತ ಬಹಳಷ್ಟು ಯೋಜನೆ ಕೊಟ್ಟಿದ್ದಾರೆ. ಅವರು ಜಿಲ್ಲೆಗೆ ನೀಡಿದ ಕೊಡುಗೆಗೆ ನಾವು ಜಿಲ್ಲೆಯಿಂದ ಅತೀ ಹೆಚ್ಚಿನ ಅಂತರದಿಂದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ಮತಗಟ್ಟೆಯನ್ನು ಗೆದ್ದು ದೇಶವನ್ನು ಗೆಲ್ಲಬೇಕೆಂಬುದು ಪ್ರಧಾನಿ ನರೇಂದ್ರ ಮೋದಿಯವರ ಆಶಯ. ಅದರಂತೆ ತಮ್ಮ ಮತಗಟ್ಟೆಯಲ್ಲಿ ಅತೀ ಹೆಚ್ಚು ಮತ ಬಿಜೆಪಿಗೆ ಬರುವಂತೆ ಪ್ರಯತ್ನ ಮಾಡಿ.
-ನಳಿನ್ ಕುಮಾರ್ ಕಟೀಲ್