ರಾಯರ ಮಠ ಭಕ್ತರಿಗೆ ಶಕ್ತಿ ಕೊಡುವ ಕೇಂದ್ರ: ಶ್ರೀ ಸುಬ್ರಹ್ಮಣ್ಯ ಸ್ವಾಮೀಜಿ
ಉಪ್ಪಿನಂಗಡಿ: ಮನಸಾರೆ ನೆನೆದಾಗ ನಾವಿದ್ದಲ್ಲಿಗೆ ಬಂದು ಶಕ್ತಿ ಕೊಡುವವರು ಶ್ರೀ ರಾಘವೇಂದ್ರ ಗುರುಗಳು. ನೆಕ್ಕಿಲಾಡಿಯಲ್ಲಿ ಶ್ರೀ ಗುರುರಾಘವೇಂದ್ರ ಗುರುಗಳ ಬೃಂದಾವನ ಪುನರ್ ನಿರ್ಮಾಣಗೊಂಡಿದ್ದು, ಇದು ಭಕುತರಿಗೆ ಶಕ್ತಿ ಕೊಡುವ ಕೇಂದ್ರವಾಗಿದೆ. ಶ್ರೀ ಮಠಕ್ಕೆ ಬರುವುದರಿಂದ ಸಾನಿಧ್ಯ ವೃದ್ಧಿಯಾಗುವುದಲ್ಲದೆ, ಗುರುಗಳ ಅನುಗ್ರಹವೂ ಸಿಗಲಿದೆ ಎಂದು ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.
ಇಲ್ಲಿನ 34ನೆಕ್ಕಿಲಾಡಿಯಲ್ಲಿ ಪುನರ್ ನಿರ್ಮಾಣಗೊಂಡ ಶ್ರೀ ಗುರುರಾಘವೇಂದ್ರರ ಮಠದಲ್ಲಿ ನಡೆಯುತ್ತಿರುವ ಲಕ್ಷ್ಮಣ ಸಹಿತ ಸೀತಾರಾಮ ದೇವರು, ಮುಖ್ಯಪ್ರಾಣ ದೇವರು, ಮತ್ತು ಶ್ರೀ ಗುರುರಾಘವೇಂದ್ರ ಸಾರ್ವಭೌಮರ ಬೃಂದಾವನದ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕ ಮಹೋತ್ಸವದಲ್ಲಿ ಎ.1ರಂದು ನಡೆದ ಧಾರ್ಮಿಕ ಸಭೆಯಲ್ಲಿ ಅವರು ದಿವ್ಯ ಸಾನಿಧ್ಯ ವಹಿಸಿ, ಆಶೀರ್ವಚನ ನೀಡಿದರು.
ದಿವ್ಯ ಸಾನಿಧ್ಯ ವಹಿಸಿ, ಆಶೀರ್ವಚನ ನೀಡಿದ ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಸ್ವಾಮೀಜಿಯವರು, ಭಜನೆಯ ಮೂಲಕ ಭಗವಂತನನ್ನು ಒಲಿಸಿಕೊಳ್ಳುವ ಕಾರ್ಯವಾಗಬೇಕು. ಪ್ರತಿ ಮನೆ- ಮನೆಯಲ್ಲಿ ಭಜನೆಯ ನಿನಾದ ಕೇಳಿಬಂದರೆ ಅಲ್ಲಿ ದೇವರ ಅನುಗ್ರಹವೂ ಇರುತ್ತದೆ. ದೇವರ ಆರಾಧನೆಯಿಂದ ರಕ್ಷಣೆ, ಉತ್ತಮ ಬದುಕು ನಮ್ಮದಾಗಲಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಮಾತನಾಡಿ, ಮಕ್ಕಳಿಗೆ ಧಾರ್ಮಿಕ ಶಿಕ್ಷಣವನ್ನು ನೀಡುವತ್ತ ಗಮನ ಕೊಡಬೇಕಾಗಿದೆ. ಕಣ್ಣಿಗೆ ಕಾಣದ ದೇವರ ಅನುಗ್ರಹ ಪಡೆಯಬೇಕಾದರೆ ಮೊದಲು ನಮ್ಮ ಕಣ್ಣಿಗೆ ಕಾಣುವ ದೇವರಾದ ತಂದೆ- ತಾಯಿಯ ಆಶೀರ್ವಾದ ನಮ್ಮದಾಗಬೇಕು. ಅದನ್ನು ಪಡೆಯಲು ನಾವು ಅರ್ಹರಲ್ಲ ಅಂತಾದರೆ ನಮಗೆ ಯಾವ ದೇವರ ಅನುಗ್ರಹವೂ ಸಿಗಲು ಸಾಧ್ಯವಿಲ್ಲ. ಆದ್ದರಿಂದ ತಂದೆ- ತಾಯಿಯನ್ನು ಪ್ರೀತಿಸುವುದರೊಂದಿಗೆ ಭಜನೆಯ ಮೂಲಕವೂ ದೇವರ ಸೇವೆ ಮಾಡೋಣ. ಭಜನೆಯೆಂಬುದು ಭಗವಂತನನ್ನು ನೇರವಾಗಿ ತಲುಪುವ ದಾರಿಯಾಗಿದೆ ಎಂದರು.
ಜಿ.ಎಲ್. ಆಚಾರ್ಯ ಜ್ಯುವೆಲ್ಲರ‍್ಸ್‌ನ ಬಲರಾಮ ಆಚಾರ್ಯ ಮಾತನಾಡಿ, ಇದರ ಭೂಮಿ ಪೂಜೆಗೆ ನಾನು ಬಂದಿದ್ದೆ. ಭಕ್ತರು ಸ್ವಯಂ ಪ್ರೇರಿತವಾಗಿ ಶ್ರೀ ಮಠದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಸುಂದರವಾದ ಶ್ರೀ ಮಠ ಅತ್ಯಲ್ಪ ಅವಧಿಯಲ್ಲಿ ನಿರ್ಮಾಣವಾಗಿ ಬ್ರಹ್ಮಕಲಶಾಭಿಷೇಕದ ಯೋಗ ಭಾಗ್ಯ ಕೂಡಿ ಬಂದಿದ್ದು, ಎಲ್ಲರಿಗೂ ಗುರುಗಳ ಆಶೀರ್ವಾದ ಸಿಗಲಿದೆ ಎಂದರು.
ಧಾರ್ಮಿಕ ಉಪನ್ಯಾಸ ನೀಡಿದ ಉಪನ್ಯಾಸಕಿ ಅರ್ಪಿತಾ ಪ್ರಶಾಂತ್ ಶೆಟ್ಟಿ ಕಟಪಾಡಿ, ದೈಹಿಕ ಮತ್ತು ಭೌತಿಕವಾಗಿ ಬಾಳಿ ಬದುಕಿದ ಶ್ರೀ ಗುರುರಾಘವೇಂದ್ರ ರಾಯರು ಜಾತಿ, ಧರ್ಮ ಮೀರಿ ಎಲ್ಲಾ ಭಕ್ತರಿಗೂ ಒಲಿದವರು. ಶ್ರೀ ಗುರು ರಾಘವೇಂದ್ರರ ಸ್ತೋತ್ರ ಪಠಿಸುವುದರಿಂದ ಎನಿಸಿದ ಕೆಲಸ ಈಡೇರಲಿದೆ. ಆದ್ದರಿಂದ ಈ ಸ್ತೋತ್ರ ನಮ್ಮ ಬದುಕಿನ ದಾರಿ ದೀಪವಾಗಬೇಕು. ದೇವರ ಮುಂದೆ ಶರಣಾಗತಿಯ ಹಾಗೂ ಸಮರ್ಪಣಾ ಭಾವದ ಸೇವೆಯೇ ಮುಖ್ಯ ಎಂದರು.
ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಮೊಕ್ತೇಸರರು, ಅರ್ಚಕರಾದ ವೆ.ಮೂ. ದೇವಿಪ್ರಸಾದ ಅಸ್ರಣ್ಣರು, ಬೆಂಗಳೂರಿನ ಜ್ಯೋತಿಷಿ ಹಾಗೂ ವಾಸ್ತು ತಜ್ಞರಾದ ಸಾಗರ್ ಸೆಂಥಿಲ್ ಕುಮಾರ್, ಉಪ್ಪಿನಂಗಡಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದ ಆಡಳಿತ ಮೊಕ್ತೇಸರರಾದ ಬಿ. ಗಣೇಶ ಶೆಣೈ, ದಂತ ವೈದ್ಯ ಡಾ. ರಾಜಾರಾಮ್ ಕೆ.ಬಿ., ಉದ್ಯಮಿ ಕೃಷ್ಣರಾಜ್ ಮಾತನಾಡಿದರು.
ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಟಿ. ಶ್ಯಾಮ್ ಭಟ್ ಐ.ಎ.ಎಸ್., ಉದ್ಯಮಿ ವಿದ್ಯಾಧರ ಜೈನ್, 34 ನೆಕ್ಕಿಲಾಡಿ ಶ್ರೀ ಕೃಷ್ಣ ಮೊಸರು ಕುಡಿಕೆ ಉತ್ಸವ ಸಮಿತಿಯ ಅಧ್ಯಕ್ಷ ಸ್ವರ್ಣೇಶ್ ಗಾಣಿಗ, ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಭಜನಾ ಮಂಡಳಿ ಅಧ್ಯಕ್ಷ ಶರತ್ ಕೋಟೆ ಉಪಸ್ಥಿತರಿದ್ದರು.
ಶ್ರೀ ಮಠದಲ್ಲಿ ಸೇವೆ ಸಲ್ಲಿಸಿದ ಸುಧಾಕರ ಶೆಟ್ಟಿ ಕೋಟೆ, ಗುಣಕರ ಅಗ್ನಾಡಿ, ಕೀರ್ತನ್, ಗಣೇಶ್ ಆಚಾರ್ಯ, ಸುಂದರ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ನ್ಯಾಯವಾದಿ ಮಹೇಶ್ ಕಜೆ, ಪ್ರಮುಖರಾದ ಪ್ರೊ. ವಸಂತ ಕುಮಾರ್ ತಾಳ್ತಜೆ, ನಾರಾಯಣ ಭಟ್ ರಾಮಕುಂಜ, ಗೋವಿಂದ ಪ್ರಸಾದ್ ಕಜೆ, ಚಂದ್ರಪ್ಪ ಮೂಲ್ಯ, ರವೀಂದ್ರ ದರ್ಬೆ, ಬಿಪಿನ್, ಬ್ರಹ್ಮಕಲಶಾಭಿಷೇಕ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಕೆ. ರಾಧಾಕೃಷ್ಣ ನಾಯಕ್, ಕೆ. ಹರೀಶ ಉಪಾಧ್ಯಾಯ, ಶ್ರೀ ರಾಘವೇಂದ್ರ ಮಠದ ಅಧ್ಯಕ್ಷ, ಬ್ರಹ್ಮಕಲಶಾಭಿಷೇಕ ಮಹೋತ್ಸವ ಸಮಿತಿ ಕೋಶಾಧಿಕಾರಿ ಕೆ. ಉದಯ ಕುಮಾರ್, ಬ್ರಹ್ಮಕಲಶಾಭಿಷೇಕ ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್. ಗೋಪಾಲ ಹೆಗ್ಡೆ, ಉಪಾಧ್ಯಕ್ಷರುಗಳಾದ ಕೆ. ಸದಾನಂದ, ಪ್ರಶಾಂತ್ ಎನ್. ಶಿವಾಜಿನಗರ, ಕಾರ್ಯದರ್ಶಿಗಳಾದ ಪ್ರಶಾಂತ್ ನೆಕ್ಕಿಲಾಡಿ, ಶ್ರೀನಿಧಿ ಉಪಾಧ್ಯಾಯ, ಶ್ರೀ ರಾಘವೇಂದ್ರ ಮಠದ ಪ್ರಧಾನ ಅರ್ಚಕ ಶ್ರೀ ರಾಘವೇಂದ್ರ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಬ್ರಹ್ಮಕಲಶಾಭಿಷೇಕ ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್. ಗೋಪಾಲ ಹೆಗ್ಡೆ ಸ್ವಾಗತಿಸಿದರು. ಸಮಿತಿಯ ಪ್ರಜ್ಞಾ ಭಂಡಾರಿ ವಂದಿಸಿದರು. ಜಯಪ್ರಕಾಶ್ ಶೆಟ್ಟಿ ಶ್ರೀನಿಧಿ ಕಾರ್ಯಕ್ರಮ ನಿರೂಪಿಸಿದರು.