ಕುಂಬ್ರ ಮೆಸ್ಕಾಂ ಕಛೇರಿಯಲ್ಲಿದ್ದ ವಿದ್ಯುತ್ ಬಿಲ್ ಪಾವತಿ ಯಂತ್ರ ಬಂದ್…!-ಗ್ರಾಹಕರಿಗೆ ತೊಂದರೆ, ವರ್ತಕರ ಸಂಘದಿಂದ ಮನವಿ, ಹೋರಾಟದ ಎಚ್ಚರಿಕೆ

0

ಪುತ್ತೂರು: ಕುಂಬ್ರ ಮೆಸ್ಕಾಂ ಕಛೇರಿಯಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಇರಿಸಲಾಗಿದ್ದ ವಿದ್ಯುತ್ ಬಿಲ್ ಪಾವತಿ ಯಂತ್ರ( ಎಟಿಪಿ ಮೆಷಿನ್)ವನ್ನು ಬಂದ್ ಮಾಡಲಾಗಿದ್ದು ಇದರಿಂದಾಗಿ ಗ್ರಾಹಕರಿಗೆ ಯಾವುದೇ ಸಮಯದಲ್ಲಿ ವಿದ್ಯುತ್ ಬಿಲ್ ಪಾವತಿ ಮಾಡಲು ತೊಂದರೆಯಾಗಿದ್ದು ಇದನ್ನು ಮನಗಂಡ ಕುಂಬ್ರ ವರ್ತಕರ ಸಂಘವು ಯಂತ್ರವನ್ನು ಮತ್ತೆ ಚಾಲನೆ ಮಾಡಬೇಕು ಎಂದು ಆಗ್ರಹಿಸಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಿ.ಹೆಚ್ ಶಿವಶಂಕರ್‌ರವರಿಗೆ ಏ.2 ರಂದು ಮನವಿ ಸಲ್ಲಿಸಿತು.

ಸಂಘದ ಅಧ್ಯಕ್ಷ ರಫೀಕ್ ಅಲ್‌ರಾಯರವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮಸುಂದರ ರೈ ಕೊಪ್ಪಳರವರು, ಮೆಸ್ಕಾಂ ಕಛೇರಿಯಲ್ಲಿ ಎನಿಟೈಮ್ ಪೇಮೆಂಟ್ ಮೆಷಿನ್ ಬರಬೇಕು ಎಂದು ವರ್ತಕರ ಸಂಘವು ಬಹಳಷ್ಟು ಹೋರಾಟವನ್ನು ಮಾಡಿತ್ತು ಇದೀಗ ಎನಿಟೈಮ್ ಪೇಮೆಂಟ್ ಮೆಷಿನ್ ಬಂದ್ ಆಗಿದ್ದರಿಂದ ಬಹಳಷ್ಟು ಗ್ರಾಹಕರಿಗೆ ತೊಂದರೆಯಾಗಿದೆ. ಕಛೇರಿಯಲ್ಲಿ ಬಿಲ್ ಪಾವತಿ ಮಾಡಲು ಸಂಜೆ 3.30 ತನಕ ಮಾತ್ರ ಅವಕಾಶವಿದೆ. ಆದರೆ ಮೆಷಿನ್ ಇದ್ದರೆ ಸಂಜೆ 5 ಗಂಟೆ ತನಕವೂ ಬಿಲ್ ಪಾವತಿ ಮಾಡಬಹುದಾಗಿತ್ತು ಆದ್ದರಿಂದ ಮೆಷಿನ್ ಅನ್ನು ಮತ್ತೆ ಆರಂಭ ಮಾಡಬೇಕು ಇಲ್ಲದಿದ್ದಲ್ಲಿ ವರ್ತಕರ ಸಂಘವು ಹೋರಾಟವನ್ನು ಮಾಡುತ್ತದೆ ಎಂದು ಎಚ್ಚರಿಕೆ ನೀಡಿದರು.

ನಮ್ಮದು ರಾಜಕೀಯ ರಹಿತ ಸಂಘಟನೆ ಆಗಿದ್ದು ಜನರಿಗೆ ಎಲ್ಲಿ ತೊಂದರೆಯಾಗುತ್ತದೆ ಅಲ್ಲಿ ನಮ್ಮ ಸಂಘ ಜನರಿಗೆ ಬೆಂಬಲವಾಗಿ ಇದ್ದೇ ಇರುತ್ತದೆ ಎಂದು ಹೇಳಿದರು.
ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಿ.ಹೆಚ್ ಶಿವಶಂಕರ್‌ರವರು ಮಾತನಾಡಿ, ವಿದ್ಯುತ್ ಬಿಲ್ ಪಾವತಿ ಮಾಡುವ ಗ್ರಾಹಕರಿಗೆ ಯಾವುದೇ ತೊಂದರೆಯಾಗದಂತೆ ಕಛೇರಿಯಲ್ಲಿ ಸಂಜೆ 3.30 ರ ತನಕ ವಿದ್ಯುತ್ ಬಿಲ್ ಪಾವತಿಸುವ ವ್ಯವಸ್ಥೆ ಇದೆ. ಇನ್ನು ಎಟಿಪಿ ಮೆಷಿನ್ ವ್ಯವಸ್ಥೆಯು ಬೆಂಗಳೂರಿನ ಖಾಸಗಿ ಸಂಸ್ಥೆಯವರು ನಡೆಸುತ್ತಿದ್ದು ಅವರಿಗೆ ತಿಂಗಳಿಗೆ ಸುಮಾರು 2 ಸಾವಿರ ರಶೀದಿಯ ಅವಶ್ಯಕತೆ ಇದೆ. ನಮ್ಮದು ಗ್ರಾಮೀಣ ಪ್ರದೇಶವಾಗಿರುವುದರಿಂದ ಅಲ್ಲದೆ ಸರಕಾರದ ಗೃಹಜ್ಯೋತಿ ಯೋಜನೆ ಬಂದಿರುವುದರಿಂದ ಬಿಲ್ ಪಾವತಿದಾರರ ಸಂಖ್ಯೆ ಕಡಿಮೆ ಆಗಿದ್ದು ಇದರಿಂದ ಸಂಸ್ಥೆಯವರು ಮೆಷಿನ್ ಬಂದ್ ಮಾಡಿದ್ದಾರೆ. ವರ್ತಕರ ಸಂಘದ ಮನವಿಯನ್ನು ನಾವು ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮೆಸ್ಕಾಂ ಜೆಇ ರವೀಂದ್ರ, ವರ್ತಕರ ಸಂಘದ ಕಾರ್ಯದರ್ಶಿ ಭವ್ಯ ರೈ, ಮಾಜಿ ಅಧ್ಯಕ್ಷ ದಿವಾಕರ ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here