ದೃಢ ನಂಬಿಕೆಯಿದ್ದಾಗ ಧರ್ಮ ಗಟ್ಟಿಯಾಗಲು ಸಾಧ್ಯ: ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ

0

ಉಪ್ಪಿನಂಗಡಿ: ಆಚಾರದಲ್ಲಿ ಬೇಧವಿದ್ದರೂ, ವಿಚಾರದಲ್ಲಿ, ಸಿದ್ಧಾಂತದಲ್ಲಿ ನಾವೆಲ್ಲಾ ಸನಾತನಿಗಳಾಗಿದ್ದೇವೆ. ನಮ್ಮ ನಂಬಿಕೆ ದೃಢವಾಗಿದ್ದಾಗ ಮಾತ್ರ ಧರ್ಮ ಗಟ್ಟಿಯಾಗಲು ಸಾಧ್ಯ ಎಂದು ಎಡನೀರು ಮಠದ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನದ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ಹೇಳಿದರು.
ಇಲ್ಲಿನ 34 ನೆಕ್ಕಿಲಾಡಿಯಲ್ಲಿ ಪುನರ್ ನಿರ್ಮಾಣಗೊಂಡ ಶ್ರೀ ಗುರುರಾಘವೇಂದ್ರರ ಮಠದಲ್ಲಿ ನಡೆಯುತ್ತಿರುವ ಲಕ್ಷ್ಮಣ ಸಹಿತ ಸೀತಾರಾಮ ದೇವರು, ಮುಖ್ಯಪ್ರಾಣ ದೇವರು, ಮತ್ತು ಶ್ರೀ ಗುರುರಾಘವೇಂದ್ರ ಸಾರ್ವಭೌಮರ ಬೃಂದಾವನದ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕ ಮಹೋತ್ಸವದಲ್ಲಿ ಎ.2ರಂದು ನಡೆದ ಧಾರ್ಮಿಕ ಸಭೆಯಲ್ಲಿ ಅವರು ದಿವ್ಯ ಸಾನಿಧ್ಯ ವಹಿಸಿ, ಆಶೀರ್ವಚನ ನೀಡಿದರು.
ರಾಘವೇಂದ್ರರು ನಂಬಿದವರಿಗೆಲ್ಲಾ ಕಲ್ಪವೃಕ್ಷವಾಗಿ, ಕಾಮಧೇನುವಾಗಿ ಒಲಿದು ಬಂದು ಅವರ ಕಷ್ಟವನ್ನು ಈಡೇರಿಸುವವರು. ಧರ್ಮದ ಬಗ್ಗೆ ಅರಿಯುವ ಕೆಲಸ ನಮ್ಮದಾಗಬೇಕು. ಧಾರ್ಮಿಕ ಕೇಂದ್ರಗಳ ಸಂಪರ್ಕ ನಮಗಿದ್ದರೆ ಉತ್ತಮ ಬದುಕು ನಮ್ಮದಾಗಲು ಸಾಧ್ಯ ಎಂದರು.
ಶ್ರೀ ಕ್ಷೇತ್ರ ಹೊರನಾಡಿನ ಧರ್ಮಕರ್ತರಾದ ಡಾ. ಜಿ. ಭೀಮೇಶ್ವರ ಜೋಶಿ ಮಾತನಾಡಿ, ಈ ಸೃಷ್ಟಿಯಲ್ಲಿ ಯಾವ ದೇವರೂ ಮೇಲಲ್ಲ. ಯಾವ ದೇವರೂ ಕೀಳಲ್ಲ. ಯಾವುದೇ ಧರ್ಮವು ಇನ್ನೊಂದು ಧರ್ಮವನ್ನು ಅವಹೇಳನ ಮಾಡಲು ಹೇಳಿಕೊಟ್ಟಿಲ್ಲ. ನಮ್ಮ ಧರ್ಮವನ್ನು ನಾವು ಪ್ರೀತಿಸಬೇಕು. ಇದರೊಂದಿಗೆ ಬೇರೆ ಧರ್ಮಗಳನ್ನು ಗೌರವಿಸಬೇಕು. ಧರ್ಮವೆನ್ನುವುದು ನಮ್ಮ ಮನೆಯ ನಾಲ್ಕು ಗೋಡೆಗಳ ಮಧ್ಯೆ ಇರಬೇಕು ಎಂದರಲ್ಲದೆ, ಮಠವೆನ್ನುವುದು ಮರವಿದ್ದ ಹಾಗೆ. ಅದರ ಕೆಳಗೆ ಬರುವವರಿಗೆ ನೆರಳು, ಸಾಂತ್ವಾನ , ಆಸರೆಯನ್ನು ಒದಗಿಸುವ ಕೆಲವನ್ನು ಮಾಡುತ್ತವೆ. ಆದ್ದರಿಂದ ಚಟಕ್ಕೆ ಬಲಿಯಾಗಿ ನಾವು ನಮ್ಮ ಜೀವನವನ್ನು ಹಾಳು ಮಾಡುವ ಬದಲು ಬದುಕನ್ನು ಮಠಕ್ಕೆ ಸಮರ್ಪಿಸಿಕೊಳ್ಳುವುದರಿಂದ ಉತ್ತಮ ಜೀವನ ನಮ್ಮದಾಗಲು ಸಾಧ್ಯ ಎಂದರು.
ಧಾರ್ಮಿಕ ಉಪನ್ಯಾಸ ನೀಡಿದ ಶ್ರೀವತ್ಸ ಕೆದಿಲಾಯ ಶಬರೂರು, ಧಾರ್ಮಿಕ ನಂಬಿಕೆ ನಮಗೆ ಮುಖ್ಯವಾಗಿದ್ದು, ನಿಷ್ಕಲ್ಮಶ ಭಕ್ತಿಗೆ ಮಾತ್ರ ಭಗವಂತ ಒಲಿಯಲು ಸಾಧ್ಯ. ದೇವರ ಮೇಲೆ ನಂಬಿಕೆ ಇದ್ದರೆ ಜೀವನದಲ್ಲಿ ಸೋಲು ಇಲ್ಲ ಎಂದರು.
ಧಾರ್ಮಿಕ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಹಿಂದುತ್ವ ಉಳಿದಾಗ ಮಾತ್ರ ನಮಗೆ ಬದುಕು ಮತ್ತು ಮುಂದಿನ ಪೀಳಿಗೆಗೆ ಬೆಳಕು ಸಾಧ್ಯವಾಗಿದೆ. ಧರ್ಮಕ್ಕೆ ನೋವಾದಾಗ ಸಹಿಸಲು ಸಾಧ್ಯವಿಲ್ಲ. ಧರ್ಮದ ಉಳಿವಿಗಾಗಿ ಪರಸ್ಪರ ಪ್ರೀತಿ- ವಿಶ್ವಾಸದೊಂದಿಗೆ ನಾವು ಜೊತೆಯಾಗಿ ಹೆಜ್ಜೆ ಹಾಕಬೇಕಿದೆ ಎಂದರು.
ವೇದಿಕೆಯಲ್ಲಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವಾಧ್ಯಕ್ಷ ಕರುಣಾಕರ ಸುವರ್ಣ, ಯುವ ಉದ್ಯಮಿ ನಟೇಶ್ ಪೂಜಾರಿ, ವೈದ್ಯ ಡಾ. ನಿರಂಜನ್ ರೈ, ಬಿಎಸ್ಸೆಫ್‌ನ ವಿಶ್ರಾಂತ ಡೆಪ್ಯೂಟಿ ಕಮಾಂಡೆಂಟ್ ಚಂದಪ್ಪ ಮೂಲ್ಯ, ಶ್ರೀ ರಾಘವೇಂದ್ರ ಮಠದ ಟ್ರಸ್ಟಿ ದಮಯಂತಿ ಆರ್. ಶೆಟ್ಟಿ, ಶಾಂತಿನಗರ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ರಾಜೇಶ್ ಮುಖಾರಿ, ಉಪ್ಪಿನಂಗಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಅಶೋಕ್ ರೈ ಅರ್ಪಿಣಿಗುತ್ತು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನ್ಯಾಯವಾದಿ ಮಹೇಶ್ ಕಜೆ, ಪ್ರಮುಖರಾದ ಡಾ. ಗೋವಿಂದ ಪ್ರಸಾದ್ ಕಜೆ, ಬ್ರಹ್ಮಕಲಶಾಭಿಷೇಕ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಕೆ. ರಾಧಾಕೃಷ್ಣ ನಾಕ್, ಕೆ. ಹರೀಶ ಉಪಾಧ್ಯಾಯ, ಶ್ರೀ ರಾಘವೇಂದ್ರ ಮಠದ ಅಧ್ಯಕ್ಷ, ಬ್ರಹ್ಮಕಲಶಾಭಿಷೇಕ ಮಹೋತ್ಸವ ಸಮಿತಿ ಕೋಶಾಧಿಕಾರಿ ಕೆ. ಉದಯ ಕುಮಾರ್, ಬ್ರಹ್ಮಕಲಶಾಭಿಷೇಕ ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್. ಗೋಪಾಲ ಹೆಗ್ಡೆ, ಉಪಾಧ್ಯಕ್ಷರುಗಳಾದ ಕೆ. ಸದಾನಂದ, ಪ್ರಶಾಂತ್ ಎನ್. ಶಿವಾಜಿನಗರ, ಕಾರ್ಯದರ್ಶಿಗಳಾದ ಪ್ರಶಾಂತ್ ನೆಕ್ಕಿಲಾಡಿ, ಶ್ರೀನಿಧಿ ಉಪಾಧ್ಯಾಯ, ಶ್ರೀ ರಾಘವೇಂದ್ರ ಮಠದ ಪ್ರಧಾನ ಅರ್ಚಕ ಶ್ರೀ ರಾಘವೇಂದ್ರ ಭಟ್, ಪಧಾಧಿಕಾರಿಗಳಾದ ಜಯಪ್ರಕಾಶ್ ಶ್ರೀನಿಧಿ, ವಿದ್ಯಾಧರ ಜೈನ್, ಸ್ವರ್ಣೇಶ್ ಗಾಣಿಗ ಮತ್ತಿತರರು ಉಪಸ್ಥಿತರಿದ್ದರು.
ಸಮಿತಿಯ ವಿನೀತ್ ಶಗ್ರಿತ್ತಾಯ ಸ್ವಾಗತಿಸಿದರು. ಶಿವಕುಮಾರ್ ಬಾರಿತ್ತಾಯ ವಂದಿಸಿದರು. ರವೀಂದ್ರ ದರ್ಬೆ ಕಾರ್ಯಕ್ರಮ ನಿರೂಪಸಿದರು.

LEAVE A REPLY

Please enter your comment!
Please enter your name here