ಬೆಟ್ಟಂಪಾಡಿ: ಇಲ್ಲಿನ ʻದೇವಿಕೃಪಾʼ ಮನೆಯಲ್ಲಿ ಶ್ರೀ ದುರ್ಗಾ ನಮಸ್ಕಾರ ಪೂಜೆ ಮತ್ತು ಕಲ್ಲುರ್ಟಿ ಹಾಗೂ ಮಂತ್ರದೇವತೆ ದೈವಗಳಿಗೆ ನರ್ತನ ಸೇವೆಯು ಏ. 2 ರಂದು ಜರಗಿತು.
ಬೆಳಿಗ್ಗೆ ಗಣಪತಿ ಹೋಮ, ದೈವಗಳಿಗೆ ನವಕಕಲಶ, ನಾಗದೇವರಿಗೆ ಪವಮಾನ ಕಲಶಾಭಿಷೇಕ ಮತ್ತು ತಂಬಿಲ ಸೇವೆ ನಡೆದು ಮಧ್ಯಾಹ್ನ ಆಶ್ಲೇಷ ಬಲಿ ನೆರವೇರಿತು. ಸಾಯಂಕಾಲ ರಕ್ತೇಶ್ವರಿ, ಪಂಜುರ್ಲಿ, ಗುಳಿಗ ಪರಿವಾರ ದೈವಗಳಿಗೆ ತಂಬಿಲ ಸೇವೆ ನಡೆದು ಬಳಿಕ ಶ್ರೀ ದುರ್ಗಾನಮಸ್ಕಾರ ಪೂಜೆ ನಡೆಯಿತು.
ನಂತರ ದೈವಗಳಿಗೆ ತಂಬಿಲ ಸೇವೆ ನಡೆದು ಭಂಡಾರ ತೆಗೆದು ಅನ್ನಸಂತರ್ಪಣೆ ಜರಗಿತು. ಇದೇ ವೇಳೆ ಶ್ರೀ ಸಿದ್ಧಿವಿನಾಯಕ ಸೇವಾ ಟ್ರಸ್ಟ್ ಕುಂಞಿಮಲೆ ಇವರಿಂದ ಕುಣಿತ ಭಜನೆ ನಡೆಯಿತು. ಬೆಳಿಗ್ಗೆ ಬೆಟ್ಟಂಪಾಡಿ ಪ್ರಿಯದರ್ಶಿನಿ ಆಂಗ್ಲಮಾಧ್ಯಮ ಶಾಲೆಯ ಶಿಕ್ಷಕರಿಂದ ಹಾಗೂ ಸಂಜೆ ವಿವೇಕಾನಂದ ಆಂಗ್ಲಮಾಧ್ಯಮ ಶಾಲಾ ಶಿಕ್ಷಕರಿಂದ ಭಜನಾ ಕಾರ್ಯಕ್ರಮ ನಡೆಯಿತು. ರಾತ್ರಿ ಕಲ್ಲುರ್ಟಿ ಹಾಗೂ ಮಂತ್ರದೇವತೆ ದೈವಗಳ ನರ್ತನ ಸೇವೆ ಜರಗಿ ಊರ ಪರವೂರ ಭಕ್ತಾಭಿಮಾನಿಗಳು ದೈವಗಳ ಪ್ರಸಾದ ಸ್ವೀಕರಿಸಿದರು.
ಕಾರ್ಯಕ್ರಮಕ್ಕೆ ಮಾಜಿ ಶಾಸಕ ಸಂಜೀವ ಮಠಂದೂರು, ಅರುಣ್ ಕುಮಾರ್ ಪುತ್ತಿಲ, ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್, ಮೊಕ್ತೇಸರ ವಿನೋದ್ ರೈ ಗುತ್ತು, ರಾಧಾಕೃಷ್ಣ ಬೋರ್ಕರ್, ಆರ್.ಸಿ. ನಾರಾಯಣ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಪಿ.ಜಿ. ಜಗನ್ನೀವಾಸ ರಾವ್ ಸೇರಿದಂತೆ ಹಲವು ಕ್ಷೇತ್ರಗಳ ಗಣ್ಯರು, ಸಂಘ ಸಂಸ್ಥೆಗಳ ಪ್ರಮುಖರು, ಬಂಧುಗಳು, ಕುಟುಂಬಿಕರು ಪಾಲ್ಗೊಂಡರು. ʻದೇವಿಕೃಪಾʼ ಮನೆಯ ಬಿ. ವೆಂಕಟ್ರಾವ್ ಮತ್ತು ಸಹೋದರರು ಹಾಗೂ ಮನೆಯವರು ಸ್ವಾಗತಿಸಿ, ಸತ್ಕರಿಸಿದರು.