ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ಮುಂಭಾಗದಲ್ಲಿ ನೀರಿಗಾಗಿ ಪ್ರತಿಭಟನೆ

0

ವಿಟ್ಲ: ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ 3ನೇ ವಾರ್ಡ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ನಾವು ನೀಡಿದ ಮನವಿಗಳಿಗೆ ಜನಪ್ರತಿಧನಿಗಳು ಹಾಗೂ ಗ್ರಾಮ ಪಂಚಾಯತ್ ಯಾವುದೇ ಸ್ಪಂದನೆ ನೀಡುತ್ತಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಕೊಡ ಹಾಗೂ ಬಕೆಟ್ ಹಿಡಿದು ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಘಟನೆ ಏ.3ರಂದು ನಡೆದಿದೆ.


ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ರಮೇಶ್ ನಾಯಕ್‌ರವರು ಮಾತನಾಡಿ ಇಲ್ಲಿಯ ನೀರಿನ ಸಮಸ್ಯೆಗಳ ಬಗ್ಗೆ ಅಭಿವೃದ್ಧಿ ಅಽಕಾರಿಯವರ ಗಮನಕ್ಕೆ ತಂದಿದ್ದು, ಬಳಿಕ ಅವರು ನೀರಿನ ಒರತೆ ಇಲ್ಲದ ಜಾಗದಲ್ಲಿ ಕೊಳವೆ ಬಾವಿ ಕೊರೆಸಿದ್ದಾರೆ. ಅಲ್ಲಿ ನೀರು ಸಿಗುತ್ತಿಲ್ಲ. ಇಲ್ಲಿ ನೀರಿನ ಒರತೆ ಇಲ್ಲ. ಇಲ್ಲಿ ಕೊಳವೆ ಬಾವಿ ಕೊರೆಯಬೇಡಿ ಎಂದರೂ ಕೊರೆಸಿದ್ದಾರೆ. ನಮ್ಮ ಮಾತಿಗೆ ಬೆಲೆ ಇಲ್ಲದಂತಾಗಿದೆ. ಇದೀಗ ನೀರಿಗಾಗಿ ನಾವು ಪರದಾಟ ನಡೆಸುತ್ತಿದ್ದೇವೆ. ತಕ್ಷಣವೇ ನಮಗೆ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.


ಗ್ರಾಮಸ್ಥರಾದ ನಳಿನಿ ರವರು ಮಾತನಾಡಿ ಕೆಮನಾಜೆ, ಶಾಂತಿಯಡ್ಕ, ಹಲಸಿನಕಟ್ಟೆ, ಬೇರಿಕೆ ಮತ್ತು ಪಿಲಿಂಜ ಭಾಗದಲ್ಲಿ ನೀರಿಲ್ಲದೇ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಸುತ್ತಮುತ್ತಲಿನಲ್ಲಿ ಬಾವಿ ಕೂಡಾ ಇಲ್ಲ. ನೀರಿಗಾಗಿ 2 ಕಿ.ಮೀ ದೂರ ಹೋಗಬೇಕು. ಕೊಳವೆ ಬಾವಿಗೆ ಹಾಕಿದ ಪಂಪ್ ಹಾಳಾಗಿದೆ ಎಂದು ಹೇಳಿದರೂ ಇದಕ್ಕೊಂದು ಪರಿಹಾರ ಕಂಡುಕೊಳ್ಳಲು ಯಾರೂ ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.


ಪ್ರಮುಖರಾದ ಎಲ್ಯಣ್ಣ ಪೂಜಾರಿರವರು ಮಾತನಾಡಿ ಈ ಭಾಗದಲ್ಲಿ ನೀರಿಗಾಗಿ ಬಡಪಾಯಿ ಜನರು ನಿರಂತರ ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಮ ಪಂಚಾಯಿತ್ ನವರು ವಾಹನದಲ್ಲಿ ನೀರು ಸರಬರಾಜು ಮಾಡುತ್ತಿದ್ದರೂ ನಮಗೆ ಸಾಕಾಗುತ್ತಿಲ್ಲ. ಚುನಾವಣೆಯಲ್ಲಿ ಗೆದ್ದ ಕೆಲವು ಸದಸ್ಯರು ಜೀವ ಇಲ್ಲದಂತೆ ವರ್ತಿಸುತ್ತಿದ್ದಾರೆ. ತಕ್ಷಣವೇ ಇಲ್ಲಿಗೆ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.


ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಜಯ್ ಮತ್ತು ಅಧ್ಯಕ್ಷ ಪುನೀತ್ ಮಾಡತ್ತಾರು ಹಾಗೂ ಸದಸ್ಯರಾದ ಪ್ರಕಾಶ್ ನಾಯಕ್ ಅವರು ಪ್ರತಿಭಟನಾಕಾರರ ಜತೆ ಮಾತುಕತೆ ನಡೆಸಿ ಹಾಳಾಗಿರುವ ಪಂಪ್ ಸರಿಪಡಿಸಿ ನೀರಿನ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು. ಈ ಸಂದರ್ಭದಲ್ಲಿ ಪ್ರಮುಖರಾದ ರಾಮಣ್ಣ ಪಿಲಿಂಜ, ಲೋಹಿತ್ ಪೂಜಾರಿ, ನವೀನ್ ಗೌಡ, ಪದ್ಮಾವತಿ , ಶೀನ ಮೂಲ್ಯ, ಸೀತಾ, ಗೀತಾ ರಕ್ಮಯ್ಯ ಗೌಡ, ತಾರಾನಾಥ, ಕೃಷ್ಣಪ್ಪ ಮೊದಲಾದವರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.

ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ
ಇಲ್ಲಿರುವ ನೀರಿನ ಸಮಸ್ಯೆಯನ್ನು ಮನಗಂಡು 9 ಪಿಕಪ್‌ಗಳಲ್ಲಿ ಈ ಭಾಗಕ್ಕೆ ನೀರು ಸರಬರಾಜು ಮಾಡಲಾಗುತ್ತಿದ್ದು, 18 ಸಾವಿರ ಲೀಟರ್ ನೀರು ಕೊಡಲಾಗುತ್ತಿದೆ. ಕೊಳವೆ ಬಾವಿ ಕೊರೆದರೂ ನೀರು ಸಿಗುತ್ತಿಲ್ಲ. ಆದರೆ ಜನರಿಗೆ ನೀರಿಗೆ ಸಮಸ್ಯೆ ಬಾರದ ರೀತಿಯಲ್ಲಿ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಅವರ ಸಮಸ್ಯೆಗಳಿಗೆ ಸಹಕರಿಸುವ ನಿಟ್ಟಿನಲ್ಲಿ ನಮ್ಮಿಂದಾಗುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ.
ಸುಜಯ , ಅಭಿವೃದ್ಧಿ ಅಧಿಕಾರಿ
ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್

LEAVE A REPLY

Please enter your comment!
Please enter your name here