ಪುತ್ತೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಸಮ್ಮತ, ಮುಕ್ತ ಹಾಗೂ ಪಾರದರ್ಶಕವಾಗಿ ಚುನಾವಣೆ ನಡೆಯುವಲ್ಲಿ ಸಾರ್ವಜನಿಕರ ಪಾತ್ರ ಬಹುಮುಖ್ಯವಾಗಿದೆ. ಅದಕ್ಕಾಗಿ ಚುನಾವಣಾ ಅಕ್ರಮಗಳನ್ನು ತಡೆಯಲು ಮಾದರಿ ನೀತಿ ಸಂಹಿತೆ ಅನುಷ್ಠಾನ ತಂಡಗಳ ಜೊತೆಗೆ ಚುನಾವಣಾ ಆಯೋಗ ಸಿ-ವಿಜಿಲ್ (ಸಿಟಿಜನ್-ವಿಜಿಲಿಯನ್ಸ್ )ಎಂಬ ಆಪ್ ರೂಪಿಸಿದೆ.
ಚುನಾವಣೆಗೆ ಸಂಬಂಧಿಸಿ ಯಾವುದೇ ದೂರುಗಳನ್ನು ಈ ಸಿ-ವಿಜಿಲ್ ಮೂಲಕ ಸಲ್ಲಿಸಿದಲ್ಲಿ ತಕ್ಷಣವೇ ಚುನಾವಣಾ ಅಧಿಕಾರಿಗಳು ಕ್ರಮ ಜರುಗಿಸುತ್ತಾರೆ. ಅಭ್ಯರ್ಥಿ ಅಥವಾ ಪಕ್ಷ ಅಥವಾ ಅವರ ಪರವಾಗಿ ಮತದಾರರನ್ನು ಸೆಳೆಯಲು ಹಣ, ಮದ್ಯ, ಉಡುಗೊರೆಗಳನ್ನು ಹಂಚುವುದು ಇತ್ಯಾದಿ ದೂರುಗಳನ್ನು ಯಾರಿಗೆ ಹೇಗೆ ಸಲ್ಲಿಸಬೇಕು, ನೀತಿ ಸಂಹಿತೆ ಉಲ್ಲಂಘನೆಗಳನ್ನು ಹೇಗೆ ನಿಬಂಧಿಸುವುದು ಎಂಬ ಹಲವು ಪ್ರಶ್ನೆಗಳಿಗೆ ಸಿ-ವಿಜಿಲ್ ಆಪ್ ಉತ್ತರ ನೀಡಿದೆ.
ಸಿ-ವಿಜಿಲ್ ಆಪನ್ನು ಗೂಗಲ್ ಪ್ಲೇಸ್ಟೋರ್ ಅಥವಾ ಆಪಲ್ ಸ್ಪೋರ್‌ನಿಂದ ಆಪ್ ಡೌನ್‌ಲೋಡ್ ಮಾಡಿಕೊಂಡು ನೀತಿಸಂಹಿತೆ ಉಲ್ಲಂಘನೆಗಳ ಫೋಟೋಗಳು ಅಥವಾ ವೀಡಿಯೊಗಳನ್ನು ಸೆರೆ ಹಿಡಿದು ಅಪ್‌ಲೋಡ್ ಮಾಡಬೇಕು. ಅಗತ್ಯವಿದ್ದಲ್ಲಿ ಘಟನೆ ಮತ್ತು ಸ್ಥಳದ ವಿವರಗಳನ್ನು ಒದಗಿಸಬಹುದು. ಈ ಮಾಹಿತಿ ಅಧಿಕಾರಿಗಳಿಗೆ ತ್ವರಿತವಾಗಿ ರವಾನೆಯಾಗುತ್ತದೆ.
100 ನಿಮಿಷಗಳ ಒಳಗೆ ಕ್ರಮ:
ಈ ಆಪ್‌ನಲ್ಲಿ ದಾಖಲಿಸುವ ದೂರುಗಳ ಬಗ್ಗೆ ಜಿಲ್ಲಾಮಟ್ಟದ ಸಿ-ವಿಜಿಲ್ ನೋಡೆಲ್ ಅಧಿಕಾರಿಗಳು ಸಂಬಂಧಪಟ್ಟ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಫ್.ಎಸ್.ಟಿ. ತಂಡದವರಿಗೆ ಕಳುಹಿಸುತ್ತಾರೆ. ಅವರು ಸಾರ್ವಜನಿಕರ ದೂರುಗಳಿಗೆ 100 ನಿಮಿಷಗಳ ಒಳಗಾಗಿ ಕ್ರಮ ಕೈಗೊಳ್ಳುತ್ತಾರೆ. ಇದರಿಂದ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರ ಆಮಿಷಗಳು ಸಾಕ್ಷಿ ಸಮೇತ ದಾಖಲಾಗಲಿವೆ. ದೂರಿನೊಂದಿಗೆ ದಾಖಲಾದ ಜಿಪಿಎಸ್ ಮಾಹಿತಿಯು ಅದನ್ನು ಸಂಬಂಧಪಟ್ಟ ಜಿಲ್ಲಾ ನಿಯಂತ್ರಣ ಕೊಠಡಿಗೆ ಸ್ವಯಂಚಾಲಿತವಾಗಿ ಪ್ಲಾಗ್ ಮಾಡುತ್ತದೆ. ಇದರಿಂದ ಫೈಯಿಂಗ್ ಸ್ಕ್ಯಾಡ್ ತಂಡಗಳು ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಲು ಸಾಧ್ಯವಾಗುತ್ತದೆ.
ಏನೆಲ್ಲಾ ದೂರು ನೀಡಬಹುದು?:
ಮತಗಳನ್ನು ಸೆಳೆಯಲು ಹಣ, ಉಡುಗೊರೆ, ಮದ್ಯ ಹಂಚಿಕೆ, ಅನುಮತಿ ಪಡೆಯದೇ ಬ್ಯಾನರ್ ಅಥವಾ ಪೋಸ್ಟರ್ ಅಳವಡಿಕೆ, ಬೆದರಿಕೆ ಹಾಕುವುದು, ಬಂದೂಕು ಪ್ರದರ್ಶನ, ಧಾರ್ಮಿಕ ಅಥವಾ ಕೋಮು ಕುರಿತು ಪ್ರಚೋದಾರಿತ ಭಾಷಣ, ಮತಗಟ್ಟೆಯ 200 ಮೀಟರ್ ಪ್ರದೇಶದಲ್ಲಿ ನಿಷೇಧದ ಅವಽಯಲ್ಲೂ ಪ್ರಚಾರ, ಮತಗಟ್ಟೆಗೆ ಮತದಾರರನ್ನು ಸಾಗಿಸುವುದು ಮುಂತಾದ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳು ಕಂಡು ಬಂದಲ್ಲಿ ಈ ಆಪ್‌ನಲ್ಲಿ ದೂರು ಕೊಡಬಹುದು.