ಗೂಂಡಾಕಾಯ್ದೆ, ಗಡಿಪಾರು ಆದೇಶ ನಿಲ್ಲಿಸದಿದ್ದರೆ ಪ್ರತಿಭಟನೆ, ಅಹೋರಾತ್ರಿ ಉಪವಾಸ-ವಿಶ್ವ ಹಿಂದೂ ಪರಿಷತ್ ಎಚ್ಚರಿಕೆ

0

ಪುತ್ತೂರು: ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಬಜರಂಗದಳ ಜಿಲ್ಲಾ ಸಂಯೋಜಕ ಭರತ್ ಕುಮ್ಡೇಲು ಹಾಗೂ ಉಪ್ಪಿನಂಗಡಿಯ ಜಯರಾಮ ಅವರಿಗೆ ಗಡಿಪಾರು ಆದೇಶ, ಮಂಗಳೂರಿನ ಜಯಪ್ರಕಾಶ್ ಎಂಬವರಿಗೆ ಗೂಂಡಾ ಕಾಯಿದೆಯ ಆದೇಶ ಮಾಡಲಾಗಿದೆ. ಇವರ ಮೇಲೆ ಯಾವುದೇ ಗಂಭೀರವಾದ ಪ್ರಕರಣಗಳಿಲ್ಲ. ಹಿಂದೂ ಸಮಾಜಕ್ಕಾಗಿ ಶ್ರಮಿಸುವ ವ್ಯಕ್ತಿಗಳನ್ನು ಸರಕಾರ, ಇಲಾಖೆಯೇ ಗೂಂಡಾಗಳನ್ನಾಗಿ ಮಾಡುವ ಹುನ್ನಾರವಾಗಿದೆ. ಇಂತಹ ಅಸಮಂಜಸ ಕ್ರಮಗಳನ್ನು ನಿಲ್ಲಿಸದಿದ್ದರೆ ರಸ್ತೆಗಳಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತೇವೆ ಮತ್ತು ಪೊಲೀಸ್ ಇಲಾಖೆಯ ಎದುರು ಅಹೋರಾತ್ರಿ ಉಪವಾಸ ಮಾಡುವುದಾಗಿ ವಿಶ್ವ ಹಿಂದೂ ಪರಿಷತ್‌ನ ಪ್ರಾಂತ ಗೋ ರಕ್ಷಾ ಪ್ರಮುಖ್ ಮುರಳೀಕೃಷ್ಣ ಹಸಂತಡ್ಕ ಎಚ್ಚರಿಸಿದ್ದಾರೆ.


ಏ.4ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಅಮಾಯಕ ಹಿಂದೂ ಕಾರ್ಯಕರ್ತರ ಗಡೀಪಾರು ಯತ್ನದ ವಿರುದ್ಧ ನ್ಯಾಯಾಲಯದ ಮೂಲಕ ಪ್ರಶ್ನಿಸಿದ ಸಂದರ್ಭದಲ್ಲಿ ಪೊಲೀಸ್ ಇಲಾಖೆ, ಸರಕಾರಕ್ಕೆ ಮುಖಭಂಗವಾಗಿದೆ. ಈಗ ಮತ್ತೆ ಹಿಂದೂ ವಿರೋಧಿ ಕ್ರಮಕ್ಕೆ ಮುಂದಾಗಿದ್ದು, ಇಬ್ಬರಿಗೆ ಗಡಿಪಾರು ಆದೇಶ ಹಾಗೂ ಇನ್ನೋರ್ವರಿಗೆ ಗೂಂಡಾ ಕಾಯಿದೆ ಹಾಕಿರುವ ಸರಕಾರದ ಕ್ರಮವನ್ನು ಪ್ರಬಲವಾಗಿ ಖಂಡಿಸುತ್ತಿದ್ದು ಹಿಂದೂ ಸಮಾಜದ ಪ್ರತಿರೋಧ ಎದುರಾಗುವ ಮೊದಲು ಎಚ್ಚೆತ್ತುಕೊಳ್ಳಬೇಕು.

ಸಂಘಟನೆಯ ಕಾರ್ಯಕರ್ತರು ರಾಷ್ಟ್ರದ, ಧರ್ಮದ ರಕ್ಷಣೆಗಾಗಿ ಹೋರಾಟ ಮಾಡುತ್ತಾರೆ, ಲವ್ ಜಿಹಾದ್, ಗೋಹತ್ಯೆಗಳನ್ನು ತಡೆಯದಂತೆ ಸರಕಾರ ಇಂತಹ ಪ್ರಯತ್ನದ ಮೂಲಕ ಬೆದರಿಸುವ ಕೆಲಸ ಮಾಡುತ್ತಿದೆ. ಅಲ್ಪಸಂಖ್ಯಾತ ಸಮುದಾಯವನ್ನು ಓಲೈಸುವ ತಂತ್ರವಾಗಿ ಚುನಾವಣಾ ಆಯೋಗದ ಹೆಸರು ಹೇಳಿಕೊಂಡು 4 ತಿಂಗಳ ಹಿಂದೆಯೇ ಈ ಪಟ್ಟಿಯನ್ನು ತಯಾರಿಸಲಾಗಿದೆ ಎಂದು ಆರೋಪಿಸಿದರು. ಹಿಂದೂ ಸಮಾಜಕ್ಕಾಗಿ ಕೆಲಸ ಮಾಡುವ ಸಾವಿರ ಕಾರ್ಯಕರ್ತರ ಪಟ್ಟಿಯನ್ನು ನಾವೇ ಕೊಡುತ್ತೇವೆ. ಸರಕಾರ ಅವರ ಮೇಲೆ ಗಡಿಪಾರು, ಗೂಂಡಾ ಕಾಯಿದೆ ಹಾಕಲಿ ಎಂದು ಸವಾಲು ಹಾಕಿದರು.

ಕಡಬದಲ್ಲಿ ಅಕ್ರಮವಾಗಿ ಗೋಸಾಗಾಟ ಮಾಡುವ ಸಂದರ್ಭ ವ್ಯಕ್ತಿಯೊಬ್ಬರ ಮೇಲೆ ವಾಹನ ಹರಿಸಿದ ಪ್ರಕರಣ ನಡೆದಿದೆ. ಗಾಂಜಾ, ಅಮಲು ಪದಾರ್ಥ ಸೇವಿಸಿ ಗೋಸಾಗಾಟ ಮಾಡುತ್ತಿರುವ ಪ್ರಕರಣಗಳು ಜನರಲ್ಲಿ ಭೀತಿ ಹುಟ್ಟಿಸುವ ಕೆಲಸ ನಿರಂತರ ನಡೆಯುತ್ತಿದೆ. ಕಬಕದಲ್ಲಿ ಗೋವನ್ನು ಹಿಂಸಾತ್ಮಕವಾಗಿ ಕಾರಲ್ಲಿ ಸಾಗಾಟ ಮಾಡಿದ ಪ್ರಕರಣವನ್ನು ಕಾರ್ಯಕರ್ತರು ಭೇದಿಸಿದರೂ ಪೊಲೀಸರು ಯಾವುದೇ ಆರೋಪಿಯನ್ನು ಬಂಧಿಸಿಲ್ಲ. ಆರೋಪಿಗಳ ಫೋನ್, ವಾಹನ ಸಿಕ್ಕಿದೆ. ಆದರೂ ಆರೋಪಿಗಳ ಬಂಧನ ಯಾಕೆ ಸಾಧ್ಯವಾಗಿಲ್ಲ? ಚುನಾವಣಾ ನಾಕಾ ಬಂಧಿ ಎಲ್ಲೆಡೆ ಹಾಕಿದ್ದರೂ ಅಕ್ರಮ ಸಾಗಾಟಗಳು ಯಾಕೆ ಪತ್ತೆಯಾಗುವುದಿಲ್ಲ ಎಂದು ಪ್ರಶ್ನಿಸಿದ ಅವರು ಕಾನೂನಿನ ವೈಫಲ್ಯದಿಂದ ನಿರಂತರ ಗೋಹತ್ಯೆ, ಸಾಗಾಟ ಪ್ರಕರಣಗಳು ನಡೆಯುತ್ತಿವೆ. ಕಬಕ ಪ್ರಕರಣದ ಆರೋಪಿಗಳನ್ನು ತಕ್ಷಣ ಬಂಧಿಸಿ ಕ್ರಮ ಕೈಗೊಳ್ಳದಿದ್ದಲ್ಲಿ ನಾವು ರಸ್ತೆ, ರಸ್ತೆಗಳಲ್ಲಿ ನಿಲ್ಲುತ್ತೇವೆ. ಸಮಾಜದ ಸ್ವಾಸ್ಥ್ಯಯ ಕಾಪಾಡುವ ಜವಾಬ್ದಾರಿ ಹೊಂದಿರುವ ಪೊಲೀಸರು ಅವರ ನಿಜವಾದ ಕರ್ತವ್ಯ ನಿರ್ವಹಿಸಲಿ. ನಾವು ಮತ್ತೆ ಮತ್ತೆ ಮನವಿ ಮಾಡಲು ಹೋಗುವುದಿಲ್ಲ ಎಂದು ಮುರಳೀಕೃಷ್ಣ ಹಸಂತಡ್ಕ ಎಚ್ಚರಿಸಿದರು.

ವಿಶ್ವಹಿಂದೂ ಪರಿಷತ್‌ನ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ, ಜಿಲ್ಲಾ ಉಪಾಧ್ಯಕ್ಷ ಸತೀಶ್ ಬಿ.ಎಸ್, ಬಜರಂಗದಳ ಪುತ್ತೂರು ಪ್ರಖಂಡದ ಜಯಂತ್ ಕುಂಜೂರುಪಂಜ, ನ್ಯಾಯವಾದಿ ಮಾಧವ ಪೂಜಾರಿ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here