ಪ್ರತಿಯೊಬ್ಬ ಅರ್ಹ ಪ್ರಜೆ ತಪ್ಪದೇ ಮತದಾನ ಮಾಡಲಿ: ಲಕ್ಷ್ಮೀಕಾಂತ ರೈ ಅನಿಕೂಟೇಲು
ರಾಮಕುಂಜ: ಪ್ರತಿಯೊಬ್ಬ ಅರ್ಹ ಪ್ರಜೆ ತಪ್ಪದೇ ಮತದಾನ ಮಾಡಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮಗೆ ಬೇಕಾದ ಉತ್ತಮ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳಲು ಪ್ರತಿಯೊಬ್ಬರಿಗೂ ಹಕ್ಕಿದೆ. ಆ ದಿಸೆಯಲ್ಲಿ ಸಂವಿಧಾನಾತ್ಮಕ ಹಕ್ಕಾದ ಮತದಾನ ಕಾರ್ಯದಲ್ಲಿ ತಪ್ಪದೇ ಪಾಲ್ಗೊಳ್ಳುವಂತಾಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರೇ ಪ್ರಭುಗಳು. ಒಂದು ಮತದಿಂದ ಯಾವುದೇ ವ್ಯತ್ಯಾಸವಾಗದು ಎಂದು ಮತದಾನ ಮಾಡದಿದ್ದರೆ, ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಅವಕಾಶವನ್ನು ನಾವು ಕಳೆದುಕೊಂಡಂತಾಗುತ್ತದೆ. ಆದ್ದರಿಂದ ಏ.26ರಂದು ಪ್ರತಿಯೊಬ್ಬರೊ ಮತದಾನ ಮಾಡಿ ಎಂದು ಪುತ್ತೂರು ತಾಲೂಕು ಮಟ್ಟದ ಸ್ವೀಪ್ ಸಮಿತಿ ತರಬೇತುದಾರ ಹಾಗೂ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಲಕ್ಷ್ಮೀಕಾಂತ ರೈ ಅನಿಕೂಟೇಲು ಹೇಳಿದರು.
ಕಡಬ ತಾಲೂಕಿನ ರಾಮಕುಂಜದ ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನಲ್ಲಿ ಪುತ್ತೂರು ತಾಲೂಕು ಸ್ವೀಪ್ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ಚುನಾವಣಾ ಆಯೋಗವು ಸಮಾಜದ ಪ್ರತಿಯೊಂದು ವರ್ಗವು ಮತ ಚಲಾಯಿಸಬೇಕು ಎಂಬ ಗುರಿಯನ್ನು ಹೊಂದಿದೆ. ವಿದ್ಯಾರ್ಥಿಗಳಾದ ನೀವೆಲ್ಲರೋ ಕಡ್ಡಾಯವಾಗಿ ಮತದಾನ ಮಾಡುವ ಜೊತೆಗೆ ಯುವ ಸಮುದಾಯವು ಮತದಾನದ ಬಗ್ಗೆ ಪೋಷಕರಿಗೆ ಹಾಗೂ ಸ್ಥಳೀಯ ನಾಗರಿಕರಿಗೆ ಅರಿವು ಮೂಡಿಸಿ 100% ಮತದಾನವಾಗಲು ಸಹಕರಿಸಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಗಣರಾಜ್ ಕುಂಬ್ಳೆ ಮಾತನಾಡಿ, ಈವರೆಗೆ ವಿವಿಧ ಕಾಲೇಜುಗಳಲ್ಲಿ ನಡೆದ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳು ಜಾಗೃತರಾಗಿದ್ದಾರೆ. ಶೇ.100ರಷ್ಟು ಮತದಾನವಾಗುವುದರಿಂದ ಸದೃಢ ಪ್ರಜಾಪ್ರಭುತ್ವ ಕಟ್ಟಲು ಸಾಧ್ಯ. ಆ ದಿಸೆಯಲ್ಲಿ ವಿದ್ಯಾರ್ಥಿಗಳೆಲ್ಲರೂ ತಪ್ಪದೇ ಮತದಾನ ಮಾಡುವ ಜೊತೆಗೆ ಸಮಾಜದ ಎಲ್ಲರೂ ಮತದಾನ ಮಾಡುವಂತೆ ಪ್ರೋತ್ಸಾಹಿಸಬೇಕು ಎಂದರು. ಕಾಲೇಜಿನ ಮತದಾರರ ಸಾಕ್ಷರತಾ ಸಂಘದ ಸಂಚಾಲಕ ಹಾಗೂ ರಾಜ್ಯಶಾಸ್ತ್ರ ಉಪನ್ಯಾಸಕರಾದ ದಯಾನಂದ್ ರವರು ಮತದಾರರ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕ ದಿವಾಕರ್ ಸ್ವಾಗತಿಸಿದರು. ಕಾಲೇಜಿನ ಎಲ್ಲಾ ಉಪನ್ಯಾಸಕರು, ಬೋದಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ತನ್ನ ಒಂದು ಮತದ ಮಹತ್ವದ ಅರಿಯದ ಬಹುತೇಕ ಮಂದಿ ಮತದಾನದ ದಿನದಂದು ರಜೆ ನೆಪದಲ್ಲಿ ಪ್ರವಾಸಕ್ಕೆ ಹೊರಟು ಬಿಡುತ್ತಾರೆ. ಮತದಾನ ಮಾಡುವ ಮೂಲಕ ಉತ್ತಮ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಅವಕಾಶವಿದ್ದರೂ ಕೆಲವು ಮತದಾರರು ಅದರತ್ತ ಆಸಕ್ತಿ ತೋರುವುದಿಲ್ಲ. ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಲ್ಲಿ, ಒಮ್ಮತದ ಅಭಿಪ್ರಾಯ ವ್ಯಕ್ತವಾಗುವುದಲ್ಲದೇ ಸೂಕ್ತ ಜನಪ್ರತಿನಿಧಿಯನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ. ದೇಶ ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ಚಲಾಯಿಸದಿದ್ದರೆ, ಲೋಪವಾಗುತ್ತದೆ ಎಂಬ ಪ್ರಜ್ಞೆ ಪ್ರತಿಯೊಬ್ಬರಲ್ಲೂ ಮೂಡಬೇಕು.
-ಲಕ್ಷ್ಮೀಕಾಂತ ರೈ ಅನಿಕೂಟೇಲ್