ಬಿಳಿಯೂರು: ಹಿಂಸಾತ್ಮಕ ರೀತಿಯಲ್ಲಿ ಜಾನುವಾರು ಸಾಗಾಟ ಪತ್ತೆ-ಆರೋಪಿ ಬಂಧನ-2 ಜಾನುವಾರು, ಪಿಕಪ್ ವಾಹನ ವಶ

0

ಉಪ್ಪಿನಂಗಡಿ: ಮಾಂಸ ಮಾಡುವ ಉದ್ದೇಶದಿಂದ ಜಾನುವಾರುಗಳ ಕೈಕಾಲು ಕಟ್ಟಿ ಹಿಂಸಾತ್ಮಕ ರೀತಿಯಲ್ಲಿ ಪಿಕಪ್ ವಾಹನವೊಂದರಲ್ಲಿ ತುಂಬಿಸಿ ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಉಪ್ಪಿನಂಗಡಿ ಪೊಲೀಸರು ಬಂಟ್ವಾಳ ತಾಲೂಕು ಬಿಳಿಯೂರು ಎಂಬಲ್ಲಿ ಪತ್ತೆ ಹಚ್ಚಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಘಟನೆ ಎ.7ರಂದು ಬೆಳಿಗ್ಗೆ ನಡೆದಿದೆ.


ಖಚಿತ ಮಾಹಿತಿ ಮೇರೆಗೆ ಉಪ್ಪಿನಂಗಡಿ ಠಾಣಾ ಪಿಎಸ್‌ಐಯವರು ಸಿಬ್ಬಂದಿಗಳೊಂದಿಗೆ ಕಾರ್ಯಾಚರಣೆ ನಡೆಸಿದ್ದು ಬಂಟ್ವಾಳ ತಾಲೂಕು ಬಿಳಿಯೂರು ಗ್ರಾಮದ ಬಿಳಿಯೂರು ಡ್ಯಾಂನ ಸೇತುವೆಯ ಮೇಲೆ ಮಹೇಂದ್ರ ಪಿಕಪ್(ಕೆಎ19, ಡಿ0948) ವಾಹನದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಕಡಿದು ಮಾಂಸ ಮಾಡುವ ಉದ್ದೇಶದಿಂದ ಜಾನುವಾರುಗಳ ಕೈಕಾಲುಗಳನ್ನು ಕಟ್ಟಿ ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ. ಘಟನಾ ಸ್ಥಳದಿಂದ ರೂ.21 ಸಾವಿರ ಮೌಲ್ಯದ ಎರಡು ಜಾನುವಾರುಗಳು, ಜಾನುವಾರುಗಳ ಕೈಕಾಲು ಕಟ್ಟಲು ಉಪಯೋಗಿಸಿದ ಎರಡು ಹಗ್ಗಗಳು, ಸಾಗಾಟಕ್ಕೆ ಬಳಸಿದ್ದ 3 ಲಕ್ಷ ರೂ.ಮೌಲ್ಯದ ಮಹೇಂದ್ರ ಪಿಕಪ್ ವಾಹನ ಹಾಗೂ ಇವುಗಳನ್ನು ಸಾಗಾಟ ಮಾಡುತ್ತಿದ್ದ ಆಪಾದಿತ ಅಬೂಬಕ್ಕರ್ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಅ.ಕ್ರ 40/2024, ಕಲಂ: 5,7,ಮತ್ತು 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020 ಮತ್ತು ಕಲಂ: 11(ಡಿ) ಪ್ರಾಣಿ ಹಿಂಸಾ ತಡೆ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here