ಪುತ್ತೂರು: ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಹಾಗೂ ಆರೋಗ್ಯ ರಕ್ಷಾ ಸಮಿತಿಯ ನೇತೃತ್ವದಲ್ಲಿ ನಡೆಯುವ ಉಚಿತ ವೈದ್ಯಕೀಯ ಶಿಬಿರ 25ನೇ ಶಿಬಿರವು ಎ.7ರಂದು ದೇವಸ್ಥಾನದಲ್ಲಿ ನಡೆಯಿತು.
ಶಿಬಿರವನ್ನು ಡಾ.ಸುರೇಶ್ ಪುತ್ತೂರಾಯರವರ ತಾಯಿ ಸುನಂದ ಪುತ್ತೂರಾಯ ದೀಪ ಬೆಳಗಿಸಿ ಉದ್ಘಾಟಿಸಿ, ಶುಭಹಾರೈಸಿದರು.
ಆರೋಗ್ಯ ರಕ್ಷಾ ಸಮಿತಿ ಗೌರವಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ವೈದ್ಯಕೀಯ ಶಿಬಿರವನ್ನು ಅಧಿಕಾರಕ್ಕಾಗಿ ಮಾಡಿಲ್ಲ. ಹಿಂದು ಸಮಾಜಕ್ಕೆ ಶಕ್ತಿ ನೀಡುವ ಕೆಲಸವಾಗಿದೆ. ಧಾರ್ಮಿಕತೆಯ ಜೊತೆಗೆ ಸುಸ್ಥಿರ ಆರೋಗ್ಯಕ್ಕೆ ಸಹಕಾರಿಯಾಗಿದೆ. ದೇವರಲ್ಲಿ ಪ್ರಾರ್ಥನೆ ಅನುಗ್ರಹದ ಜೊತೆಗೆ ಹಿಂದು ಸಮಾಜಕ್ಕೆ ಶಕ್ತಿ ನೀಡಿ, ಸಮಸ್ಯೆ ಸವಾಲುಗಳಿಗೆ ಉತ್ತರ ನೀಡಿ ಹಿಂದು ಸಮಾಜ ಬೆಳೆಯಲು ಸಹಕಾರಿಯಗಿದೆ. ಇಲ್ಲಿ ನಡೆಯುವ ಶಿಬಿರವು ರಾಷ್ಟ್ರ ಮಟ್ಟದಲ್ಲಿ ಪರಿಣಾಮ ಬೀರಿದ್ದು ಅಂತರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಟಕಪೂರ್ವ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ಪ್ರಾರಂಭದಲ್ಲಿ ಸಣ್ಣ ಮಟ್ಟಿನಲ್ಲಿ ಪ್ರಾರಂಭವಾದ ಶಿಬಿರ ಇಪ್ಪತ್ತೈದು ತಿಂಗಳು ಪೂರೈಸಿದೆ. ನನ್ನ ಯೋಚನೆಗೆ ಪ್ರತಿಯೊಬ್ಬರೂ ಸಹಕಾರ, ಪ್ರೋತ್ಸಾಹ ನೀಡಿದ್ದಾರೆ. ಇದಕ್ಕೆ ವ್ಯವಸ್ಥಾಪನಾ ಸಮಿತಿ ಹಾಗೂ ಆರೋಗ್ಯ ರಕ್ಷ ಸಮಿತಿ ಆಧಾರ ಸ್ಥಂಭವಾಗಿ ನಿಂತಿದೆ. ಸತ್ಯನಾರಾಯಣ ಪೂಜಾ ಸಮಿತಿ, ನವಚೇತನ ಯುವಕ ಮಂಡಲ, ಐಕ್ಯಕಲಾ ಸೇವಾ ಟ್ರಸ್ಟ್, ವಿವಿಧ ಆಸ್ಪತ್ರೆಗಳು, ಲ್ಯಾಬೋರೇಟರಿ, ಔಷಧಿ ಕಂಪನಿ, ಜನೌಷಧಿ ಕೇಂದ್ರ ಬೆನ್ನೆಲುಬಾಗಿ ಸಹಕರಿಸಿದ್ದಾರೆ. ಹಲವು ಮಂದಿ ಸ್ವಯಂಸೇವಕರಾಗಿ, ಆರ್ಥಿಕ, ವಸ್ತುರೂಪ ಹಾಗೂ ಉಪಕರಣಗಳ ರೂಪದಲ್ಲಿ ಸಹಕರಿಸಿದ್ದು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್ಲರ ಸಹಕಾರದಿಂದ ಕಳೆದ 25 ತಿಂಗಳುಗಳಿಂದ ನಿರಂತವಾಗಿ ಶಿಬಿರವು ನಡೆಯುತ್ತಿದೆ. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ, ಆರೋಗ್ಯ ರಕ್ಷಾ ಸಮಿತಿ, ಸತ್ಯನಾರಾಯಣ ಪೂಜಾ ಸಮಿತಿ, ನವಚೇತನ ಯುವಕ ಮಂಡಲ, ಐಕ್ಯಕಲಾ ಸೇವಾ ಟ್ರಸ್ಟ್ ಸೇರಿದಂತೆ ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ನಡೆಯುತ್ತಿದೆ ಎಂದರು.
ಮೊಟ್ಟೆತ್ತಡ್ಕ ಐಕ್ಯಕಲಾ ಸೇವಾ ಟ್ರಸ್ಟ್‌ನಿಂದ ವೈದ್ಯಕೀಯ ಶಿಬಿರಕ್ಕೆ ಎರಡು ರಕ್ತದೊತ್ತಡ(ಬಿಪಿ) ಪರೀಕ್ಷಿಸುವ ಯಂತ್ರವನ್ನು ಕೊಡುಗೆಯಾಗಿ ನೀಡಿದರು. ಐಕ್ಯಕಲಾ ಸೇವಾ ಟ್ರಸ್ಟ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು. ಆರೋಗ್ಯ ರಕ್ಷಾ ಸಮಿತಿಯಿಂದ ಅವರನ್ನು ಗೌರವಿಸಲಾಯಿತು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಸದಸ್ಯರಾದ ಜಯಕುಮಾರ್ ನಾಯರ್, ಲಕ್ಷ್ಮಣ ಗೌಡ, ಮೊಟ್ಟೆತ್ತಡ್ಕ ಐಕ್ಯಕಲಾ ಸೇವಾ ಟ್ರಸ್ಟ್‌ನ ಚೇತನ್, ಮುಕ್ರಂಪಾಡಿ ಸತ್ಯನಾರಾಯಣ ಪೂಜಾ ಸಮಿತಿ ಸಂತೋಷ್, ಆಯುರ್ವೇದ ತಜ್ಞೆ ಡಾ. ಶ್ರೀಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಬಿರದಲ್ಲಿ ತಜ್ಞ ವೈದ್ಯ ಡಾ.ಸುರೇಶ್ ಪುತ್ತೂರಾಯ, ಕೀಲು ಮತ್ತು ಎಲು ತಜ್ಞ ಡಾ. ಸಚಿನ್ ಶಂಕರ್ ಹಾರಕರೆ, ಶ್ವಾಸಕೋಶ ತಜ್ಞ ಡಾ. ಪ್ರೀತಿರಾಜ್ ಬಲ್ಲಾಳ್, ತಜ್ಞ ವೈದ್ಯೆ ಡಾ. ಸ್ವಾತಿ ಹಾಗೂ ಆಯುರ್ವೇದ ತಜ್ಞರಾದ ಡಾ. ಸಾಯಿ ಪ್ರಕಾಶ್ ಮತ್ತು ಡಾ. ಶ್ರೀಜಾ ರೈ ಶಿಬಿರದಲ್ಲಿ ಭಾಗವಹಿಸಿ ತಪಾಸಣೆ ನಡೆಸಿಕೊಟ್ಟರು. ತಜ್ಞರಿಂದ ವೈದ್ಯಕೀಯ ತಪಾಸಣೆ, ಕೀಲು ಮತ್ತು ಎಲುಬು ತಪಾಸಣೆ, ಶ್ವಾಸಕೋಶ ತಪಾಸಣೆ, ಆಯುರ್ವೇದ ವೈದ್ಯಕೀಯ ತಪಾಸಣೆ, ಇಸಿಜಿ, ಮಧುಮೇಹ ರಕ್ತಪರೀಕ್ಷೆ ಹಾಗೂ ಉಚಿತ ಔಷಧಿಗಳ ವಿತರಿಸಲಾಯಿತು.