ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಉತ್ಸವದ ಪುಷ್ಪಕನ್ನಡಿಯ ಅಲಂಕಾರದಲ್ಲಿ ಸ್ವರ್ಣಪುಷ್ಪ ಮತ್ತು ಚಕ್ರಮಾಲೆಯನ್ನು ಉದ್ಯಮಿ ಭಕ್ತರೊಬ್ಬರ ನೇತೃತ್ವದಲ್ಲಿ ಎ.10ರಂದು ಸಮರ್ಪಣೆ ಮಾಡಲಾಯಿತು.
ಉದ್ಯಮಿ ಶಿವಪ್ರಸಾದ್ ಶೆಟ್ಟಿ ಮತ್ತು ಸುಜಾತಾ ಶೆಟ್ಟಿ ದಂಪತಿ ನೇತೃತ್ವದಲ್ಲಿ ಶ್ರೀ ದೇವರ ಪುಷ್ಪಕನ್ನಡಿಗೆ ದೇವರ ಅಲಂಕಾರಕ್ಕೆ 27 ದೊಡ್ಡ ಪ್ರತ್ಯೇಕ ಸ್ವರ್ಣ ಪುಷ್ಪಗಳು ಮತ್ತು 25 ಸಣ್ಣ ಸ್ವರ್ಣ ಪುಷ್ಪವನ್ನೊಳಗೊಂಡ ಚಕ್ರಮಾಲೆಯನ್ನು ಶ್ರೀ ದೇವರ ಸತ್ಯಧರ್ಮ ನಡೆಯಲ್ಲಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ಪ್ರಾರ್ಥನೆಯೊಂದಿಗೆ ಸಮರ್ಪಣೆ ಮಾಡಲಾಯಿತು. ಪುತ್ತೂರು ಜಾತ್ರೆಯ ಧ್ವಜಾರೋಹಣದ ಬಳಿಕ ಸ್ವರ್ಣಪುಷ್ಪ ಮತ್ತು ಚಕ್ರಮಾಲೆಯನ್ನು ಸಮರ್ಪಣೆ ಮಾಡಲಾಯಿತು.
ಈ ಸಂದರ್ಭ ದೇವಳದ ಪ್ರಧಾನ ಅರ್ಚಕರಾದ ವೇ ಮೂ ವಿ.ಎಸ್ ಭಟ್, ವೇ ಮೂ ವಸಂತ ಕೆದಿಲಾಯ, ಶಾಸಕ ಅಶೋಕ್ ಕುಮಾರ್ ರೈ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು, ದೇವಳದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ನಿಕಟಪೂರ್ವ ಸದಸ್ಯ ಶೇಖರ್ ನಾರಾವಿ, ನ್ಯಾಯವಾದಿ ಕವನ್ ನಾಕ್, ಉದ್ಯಮಿ ಶಿವರಾಮ ಆಳ್ವ, ದೇರ್ಕಜೆ ವೆಂಕಟ್ರಮಣ ಭಟ್, ವಾಮದೇವ ಆಚಾರ್ಯ ಸಹಿತ ಅನೇಕರು ಉಪಸ್ಥಿತರಿದ್ದರು.
ಕ್ಷೇತ್ರದ ಬ್ರಹ್ಮವಾಹಕರಾಗಿರುವ ವೇ ಮೂ ಹರೀಶ್ ಭಟ್ ಅವರ ಮಾರ್ಗದರ್ಶನದಂತೆ ಸ್ವರ್ಣಪುಷ್ಪ ಮತ್ತು ಚಕ್ರಮಾಲೆಯನ್ನು ಶ್ರೀ ದೇವರಿಗೆ ಸಮರ್ಪಣೆ ಮಾಡಲಾಗಿದೆ. ಸುಮಾರು ರೂ. 8ಲಕ್ಷ ಮೌಲ್ಯ ಸ್ವರ್ಣಪುಷ್ಪ ಮತ್ತು ಚಕ್ರಮಾಲೆಗೆ ತಗುಲಿದೆ ಎಂದು ಉದ್ಯಮಿ ಶಿವಪ್ರಸಾದ್ ಶೆಟ್ಟಿಯವರು ತಿಳಿಸಿದ್ದಾರೆ.