ಪುಣಚ: ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ವಿವಿಧ ವೈಧಿಕ, ತಾಂತ್ರಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ 5 ದಿನಗಳ ಕಾಲ ನಡೆದ ವರ್ಷಾವಧಿ ಜಾತ್ರೋತ್ಸವು ಎ.11ರಂದು ಅವಭೃತ ಸ್ನಾನ, ಧ್ವಜಾವರೋಹಣ ಹಾಗೂ ದೈವಗಳ ನೇಮೋತ್ಸವದೊಂದಿಗೆ ಸಂಪನ್ನಗೊಂಡಿತು.
ಬ್ರಹ್ಮಶ್ರೀ ವರ್ಕಾಡಿ ಗಣೇಶ ತಂತ್ರಿಗಳ ನೇತ್ರತ್ವದಲ್ಲಿ ನಡೆದ ಜಾತ್ರೋತ್ಸವ ಎ.7ರಂದು ಧ್ವಜಾರೋಹಣದೊಂದಿಗೆ ಚಾಲನೆ ದೊರೆಯಿತು. ಜಾತ್ರೋತ್ಸವದಲ್ಲಿ ಪ್ರತಿದಿನ ದೇವರ ಉತ್ಸವ ಬಲಿ ನಡೆಯಿತು.
ಎ.10ರಂದು ಬೆಳಗ್ಗೆ ದೀಪ ಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ರಾತ್ರಿ ಉತ್ಸವ ಬಲಿ, ದರ್ಶನ ಬಲಿ, ಬೆಡಿಕಟ್ಟೆ ಉತ್ಸವ, ಸಿಡಿಮದ್ದು ಪ್ರದರ್ಶನ, ಮೃಗ ಬೇಟೆ ಸವಾರಿ, ನಿತ್ಯಪೂಜೆ, ಶ್ರೀ ಭೂತ ಬಲಿ, ಶಯನ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ ‘ನಾದೃಧೀಂ 24’ ಶಾಸ್ತ್ರೀಯ ನೃತ್ಯ ಕಾರ್ಯಕ್ರಮ ನಡೆಯಿತು. ಎ.11 ರಂದು ಬೆಳಿಗ್ಗೆ ಕವಾಟೋದ್ಘಾಟನೆ, ತೀರ್ಥಪ್ರಸಾದ ವಿತರಣೆ, ತುಲಾಭಾರ ಸೇವೆ ನಡೆದು ರಾತ್ರಿ ಪಡುಪೇಟೆ ಸವಾರಿ, ಅವಭೃತ ಸ್ನಾನ, ಬಟ್ಟಲು ಕಾಣಿಕೆ, ದ್ವಜಾವರೋಹಣ ನಡೆಯಿತು.
ಬಳಿಕ ನೆತ್ತರ್ ಕಣ, ವ್ಯಾಘ್ರ ಚಾಮುಂಡಿ ಇತ್ಯಾದಿ ಪರಿವಾರ ದೈವಗಳಿಗೆ ನೇಮೋತ್ಸವ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ ‘ನೃತ್ಯ ಪಲ್ಲವ’ ಭರತನಾಟ್ಯ, ಜಾನಪದ ನೃತ್ಯಗಳು ಹಾಗೂ ಶ್ರೀ ದೇವಿ ಮಹಿಳಾ ಯಕ್ಷಗಾನ ಮಂಡಳಿ ದೇವಿನಗರ ಇವರಿಂದ ‘ಗಿರಿಜಾ ಕಲ್ಯಾಣ’ ಯಕ್ಷಗಾನ ನಡೆಯಿತು.
ಪ್ರತಿ ದಿನ ಮಧ್ಯಾಹ್ನ ಮತ್ತು ರಾತ್ರಿ ಮಹಾ ಅನ್ನಸಂತರ್ಪಣೆ ನಡೆಯಿತು. ದೇವಸ್ಥಾನದ ಆಡಳಿತ ಮಂಡಳಿ, ಭಜನಾ ಮಂಡಳಿ, ಗ್ರಾಮಸ್ಥರು, ಊರ ಪರವೂರ ಸಾವಿರಾರು ಮಂದಿ ಭಕ್ತಾದಿಗಳು ಭಾಗವಹಿಸಿ ಜಾತ್ರೋತ್ಸವವನ್ನು ಕಣ್ತುಂಬಿಕೊಂಡು ಪುನೀತರಾದರು.