ಬಡಗನ್ನೂರುಃ ಯಕ್ಷಗಾನ ಇತಿಹಾಸದಲ್ಲೇ ಪರಿಪೂರ್ಣ ಮೇಳವೊಂದು ಪ್ರಪ್ರಥಮ ಬಾರಿಗೆ ವಿದೇಶದಲ್ಲಿ ಚಾರಿತ್ರಿಕ ದಾಖಲೆಯೊಂದಿಗೆ ತೆಂಕುತಿಟ್ಟಿನ ಪ್ರಸಿದ್ಧ ಶ್ರೀ ಗೆಜ್ಜೆಗಿರಿ ಮೇಳದವರಿಂದ ಮಸ್ಕತ್ ಮತ್ತು ದುಬೈ ನಲ್ಲಿ ಮಾತೆ ದೇಯಿ ಬೈದೆತಿ ಮತ್ತು ಧೂಮಾವತಿ ಅಮ್ಮನವರ ಬೆಳಕಿನ ಯಕ್ಷಗಾನ ಗೆಜ್ಜೆಸೇವೆ ನಡೆಯಲಿದೆ.
ಏ. 19 ರಂದು ಒಮಾನ್ ಬಿಲ್ಲವಾಸ್ ಕೂಟದ ವತಿಯಿಂದ ಒಮಾನ್ ದೇಶದ ಮಸ್ಕತ್ ನ ರೂವಿ ಅಲ್ ಫಲಾಜ್ ಹೋಟೆಲ್ನ ಗ್ರ್ಯಾಂಡ್ ಹಾಲ್ ನಲ್ಲಿ ಮಧ್ಯಾಹ್ನ 3:15ರಿಂದ ಗೆಜ್ಜೆಗಿರಿ ಕ್ಷೇತ್ರದ ಸ್ಥಳ ಪುರಾಣ ಆಧಾರಿತ ಕಾರಣಿಕವನ್ನು ಸಾರುವ ನಿತಿನ್ ತೆಂಕಕಾರಂದೂರು ವಿರಚಿತ, ಯೋಗೀಶ್ ಕುಮಾರ್ ಚಿಗುರುಪಾದೆ ಪದ್ಯ ರಚನೆಯ ಯಶಸ್ವಿ 225ನೇ ಪ್ರಯೋಗದ ಪ್ರದರ್ಶನದೊಂದಿಗೆ ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಯಕ್ಷಗಾನ ಪ್ರದರ್ಶನವು ಅತೀ ವಿಜ್ರಂಭಣೆಯಿಂದ ನಡೆಯಲಿದೆ. ಒಮಾನ್ ಬಿಲ್ಲವಾಸ್ ಕೂಟದ 15ನೇ ವಾರ್ಷಿಕೋತ್ಸವದ ಪ್ರಯುಕ್ತ ತುಳುನಾಡಿನ ಅತಿಥಿ ಗಣ್ಯರಾದ ಶೈಲೇಂದ್ರ ವೈ ಸುವರ್ಣ, ಜಯಾನಂದ ಎಮ್ ಪೂಜಾರಿ, ಗೀತಾಂಜಲಿ ಸುವರ್ಣ, ದುಬೈನಿಂದ ಪ್ರಭಾಕರ ಡಿ ಸುವರ್ಣ ಕರ್ನಿರೆ, ಸೌದಿಯಿಂದ ಸತೀಶ್ ಕುಮಾರ್ ಬಜಾಲ್, ಬಹರೈನ್ ನಿಂದ ಹರೀಶ್ ಪೂಜಾರಿ, ರಾಜ್ ಕುಮಾರ್, ರೂಪೇಶ್, ಕತಾರ್ ನಿಂದ ಸಂದೀಪ್ ಮಲಾರ್, ಕುವೈತ್ ನಿಂದ ರೋಹಿತ್ ಸನಿಲ್ ಮುಂತಾದ ಅತಿಥಿ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಕೂಟದ ಅಧ್ಯಕ್ಷ ಸುಜಿತ್ ಅಂಚನ್ ಪಾಂಗಾಳ ಅವರು ತಿಳಿಸಿದ್ದಾರೆ.
20 ರಂದು ಬಿಲ್ಲವ ಫ್ಯಾಮಿಲಿ ದುಬೈ ಕೂಟದ ವತಿಯಿಂದ ಬರ್ ದುಬೈಯ ಜದಫ್ ಸ್ವಿಸ್ ಇಂಟರ್ ನ್ಯಾಷನಲ್ ಸೈಂಟಿಫಿಕ್ ಸ್ಕೂಲ್ ನ ಹಾಲ್ ನಲ್ಲಿ ಸಂಜೆ 5:00ರಿಂದ ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಯಶಸ್ವಿ 226ನೇ ಪ್ರಯೋಗದ ಯಕ್ಷಗಾನ ಪ್ರದರ್ಶನವು ಅತೀ ವಿಜೃಂಭಣೆಯಿಂದ ನಡೆಯಲಿದೆ ಎಂದು ಕೂಟದ ಅಧ್ಯಕ್ಷರಾದ ದೀಪಕ್ ಎಸ್.ಪಿ ಅವರು ತಿಳಿಸಿದ್ದಾರೆ.
ಕ್ಷೇತ್ರದ ಶಕ್ತಿಗಳ ಅನುಗ್ರಹದಿಂದ ಶ್ರೀ ಗೆಜ್ಜೆಗಿರಿ ಮೇಳದ ಪ್ರಶಾಂತ್ ಪೂಜಾರಿ ಪಜೀರು ಮಸ್ಕತ್ ಅವರ ವ್ಯವಸ್ಥಾಪಕತ್ವದಲ್ಲಿ, ನವೀನ್ ಸುವರ್ಣ ಸಜಿಪ ಮತ್ತು ನವೀನ್ ಅಮೀನ್ ಶಂಕರಪುರ ಅವರ ಸಂಚಾಲಕತ್ವದಲ್ಲಿ ಮೇಳವು ಯಶಸ್ವಿ ಪಥದಲ್ಲಿ ಮುನ್ನಡೆಯುತ್ತಿದೆ.ಯಕ್ಷಗಾನ ತಿರುಗಾಟದ ಇತಿಹಾಸದಲ್ಲೇ ಪರಿಪೂರ್ಣ ಮೇಳವೊಂದು ಪ್ರಪ್ರಥಮ ಬಾರಿಗೆ ವಿದೇಶದಲ್ಲಿ ಹೊಸ ಚಾರಿತ್ರಿಕ ದಾಖಲೆಯೊಂದಿಗೆ ಪ್ರದರ್ಶನಗೊಳ್ಳುತ್ತಿರುವುದು ಶ್ರೀ ಗೆಜ್ಜೆಗಿರಿ ಮೇಳಕ್ಕೆ ಮತ್ತು ಶ್ರೀ ಕ್ಷೇತ್ರಕ್ಕೆ ಹೆಗ್ಗಳಿಕೆ ಗರಿ ಎಂದು ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ನಿವೃತ್ತ ಎಸ್.ಪಿ ಪೀತಾಂಬರ ಹೇರಾಜೆ ಅವರು ಹರ್ಷ ವ್ಯಕ್ತಪಡಿಸುವುದರ ಜೊತೆಗೆ ವಿದೇಶ ಪ್ರವಾಸಕ್ಕೆ ಹೊರಡಲಿರುವ ಗೆಜ್ಜೆಗಿರಿ ಮೇಳದ ಹಿಮ್ಮೇಳ ಮತ್ತು ಮುಮ್ಮೇಳ ಕಲಾವಿದರಿಗೆ ಶುಭ ಕೊರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.