ಮತದಾರರೇ..
ಬನ್ನಿ ಒಗ್ಗಟ್ಟಾಗಿ ಬದುಕಿರಿ. ಯಾವುದೇ ಪಕ್ಷಕ್ಕೆ, ವ್ಯಕ್ತಿಗೆ ಮಾರಿಕೊಂಡು ಜೀವನವಿಡೀ ಅವರ ಗುಲಾಮರಾಗಿ ಬದುಕಬೇಡಿ. ನಿಮ್ಮನ್ನು ಜಾತಿ , ಧರ್ಮ, ಭಾಷೆ, ಪಕ್ಷ ಎಂದು ಒಡೆದು ಆಳುವ ಜನಪ್ರತಿನಿಧಿಗಳ, ಪಕ್ಷಗಳ ಹುನ್ನಾರವನ್ನು ವಿಫಲಗೊಳಿಸಿರಿ. ಪರಸ್ಪರ ವೈರಿಗಳಂತೆ ಹೋರಾಡುತ್ತಾ, ಪರಸ್ಪರರನ್ನು ನಾಶ ಮಾಡಲು ಪ್ರಯತ್ನಿಸುತ್ತಾ, ಜನಪ್ರತಿನಿಧಿಗಳನ್ನು, ಅಽಕಾರಿಗಳನ್ನು ರಾಜರುಗಳನ್ನಾಗಿ ಮಾಡಲು ಹೋರಾಡುತ್ತಾ ನಾಶವಾಗಬೇಡಿ.
ಮತದಾರರನ್ನು ರಾಜರನ್ನಾಗಿ ಮಾಡುವ ಜಾಗೃತಿಯ ಆಂದೋಲನ ಫಲಕ
*ನೀವು ಆರಿಸಿದ ಜನಪ್ರತಿನಿಧಿಗಳು, ನಿಮ್ಮ ಸೇವೆಗಾಗಿ ನೇಮಿಸಲ್ಪಟ್ಟ ಅಧಿಕಾರಿಗಳು ನಿಮಗೆ ಸೇವೆ ನೀಡುವಂತೆ ಪ್ರತಿಜ್ಞೆ ಮಾಡಿಸಿರಿ
*ಅವರು ನಿಮಗೆ ಅನ್ಯಾಯ, ಮೋಸ ಮಾಡದಂತೆ ಕಣ್ಣಲ್ಲಿ ಕಣ್ಣಿಟ್ಟು ಕಾಯಿರಿ. ಅನ್ಯಾಯ ಮಾಡಿದರೆ ಕಟುವಾಗಿ ಕ್ರಮಕೈಗೊಳ್ಳಿ, ಶಿಕ್ಷಿಸಿರಿ.
*ಪ್ರಧಾನಿಗೂ, ರಾಷ್ಟ್ರಪತಿಗೂ, ಮುಖ್ಯಮಂತ್ರಿಗೂ, ಅಂಬಾನಿ, ಅದಾನಿಗೂ, ಬಡವ, ಅನಕ್ಷರಸ್ಥನಿಗೂ, ದೇಶದ ಪ್ರತಿಯೊಬ್ಬ ಪ್ರಜೆಗೂ ಇರುವ ಓಟಿನ ಹಕ್ಕು ಒಂದೇ… ಅದು ಎಲ್ಲರಿಗೂ ಸಮಾನ.
*ನಿಮ್ಮ ಒಂದೊಂದೇ ಓಟಿನಿಂದ ಪ್ರತಿನಿಧಿ ಆಯ್ಕೆಯಾಗಬಹುದು, ಸೋಲಬಹುದು. ಇಂದಿರಾಗಾಂಧಿ, ವಾಜಪೇಯಿ ಚುನಾವಣೆಯಲ್ಲಿ ಸೋತಿದ್ದಾರೆ. ಯಾರೂ ಸೋಲಬಹುದು. ಅವರು ಯಾರೂ ರಾಜಕೀಯದಲ್ಲಿ ಶಾಶ್ವತವಲ್ಲ. ಪ್ರಜಾಪ್ರಭುತ್ವದಲ್ಲಿ ಮತದಾರರೇ ಶಾಶ್ವತ ಪ್ರಭುಗಳು.
*ಮತದಾರರೇ ನಿಮಗೆ ಬೇಕಾಗಿ ಈ ಮತದಾನ ಇರುವುದು. ಯಾವುದೇ ಪಕ್ಷ, ವ್ಯಕ್ತಿಗಾಗಿ ಅಲ್ಲ. ಅವರಿಗಾಗಿ ಅವರನ್ನು ರಾಜರಾಗಿ ಮಾಡಲು ನಿಮ್ಮ ಮತದಾನವಲ್ಲ, ಬದುಕಲ್ಲ. ನಿಮ್ಮ ಸೇವೆಗಾಗಿ ಅವರ ಬದುಕು ಎಂದು ತಿಳಿಯಿರಿ.
*ನೀವು ನಿಮ್ಮ ಸೇವೆಗಾಗಿ ಆಯ್ಕೆ ಮಾಡಿದ ಪ್ರತಿನಿಧಿ, ನೇಮಕ ಮಾಡಿದ ಅಧಿಕಾರಿ, ನಿಮ್ಮನ್ನು ಲಂಚ, ಭ್ರಷ್ಟಾಚಾರದ ಮೂಲಕ ಶೋಷಿಸುವುದು, ನಿಮ್ಮ ಬದುಕನ್ನು ನಾಶ ಮಾಡುವುದು ಅಂದರೆ ಏನರ್ಥ. ಅದನ್ನು ಸಹಿಸಿಕೊಂಡು ಸುಮ್ಮನೆ ಇರುವುದು ಶೂರತನವೇ? ಹೇಡಿತನವೇ?. ಅದು ರಾಜರ ಬದುಕೇ? ಅಥವಾ ಗುಲಾಮರ ಜೀವನವೇ?. ನೀವೇ ನಿರ್ಣಯ ಮಾಡಿರಿ.
*ನೀವು ಆಯ್ಕೆ ಮಾಡಿದ ಪ್ರತಿನಿಧಿಗಳಿಗೆ (ಶಾಸಕ, ಸಂಸದರಿಗೆ) ಇರುವ ಸಂಬಳವೆಷ್ಟು? ಸವಲತ್ತು, ಭದ್ರತೆ, ಅಧಿಕಾರ, ರಕ್ಷಣೆ ಎಷ್ಟೆಂದು ತಿಳಿದಿದ್ದೀರಾ?. ತಿಂಗಳಿಗೆ ಹಲವಾರು ಲಕ್ಷ ಸಂಭಾವನೆ ಪಡೆಯುತ್ತಿದ್ದಾರೆ. ಒಮ್ಮೆ ಚುನಾವಣೆಯಲ್ಲಿ ಗೆದ್ದು ಮತ್ತೆ ಸೋತರೂ ಅವರಿಗೆ ಜೀವನವಿಡೀ ಪೆನ್ಷನ್ ಇದೆ ಎಂದು ಗೊತ್ತಿದೆಯೇ?. ಅವರನ್ನು ಆರಿಸಿದ ರಾಜರುಗಳಾದ ನಿಮಗೆ ಇರುವ ಸಂಪಾದನೆ, ಸವಲತ್ತು, ರಕ್ಷಣೆ ಎಷ್ಟೆಂದು ಹೇಳಬಲ್ಲಿರಾ?.
*ನಿಮ್ಮ ಸೇವೆಗೆಂದು ನೀವು ಆರಿಸಿದ ಜನಪ್ರತಿನಿಧಿಗಳು, ನೇಮಿಸಿದ ಅಧಿಕಾರಿಗಳು ಹೇಗಿದ್ದವರು ಹೇಗಾಗಿದ್ದಾರೆ? ಎಷ್ಟೊಂದು ಶ್ರೀಮಂತರಾಗಿದ್ದಾರೆ. ನಿಮ್ಮ ಸ್ಥಿತಿ ಹೇಗಿದೆ ಎಂದು ಒಮ್ಮೆ ಯೋಚಿಸಿ ನೋಡಿ. ಆ ಪರಿಸ್ಥಿತಿ ಬದಲಾಗಬೇಡವೇ?
*ನೀವು ಅವರಿಗೆ ಸೇವೆ ಮಾಡಲು ಓಟು ಕೊಟ್ಟದ್ದೇ? ನಿಮ್ಮ ಶೋಷಣೆ ಮಾಡಲು, ಅಧಿಕಾರ ನಡೆಸಲು ಓಟು ಕೊಟ್ಟದ್ದೇ? ಗೆಲ್ಲಿಸಿದ್ದೇ? ಚಿಂತಿಸಿ ನೋಡಿ.
*ಮತದಾರರೇ.. ಬನ್ನಿ ಒಗ್ಗಟ್ಟಾಗಿ ಬದುಕಿರಿ. ಯಾವುದೇ ವ್ಯಕ್ತಿಗೆ, ಪಕ್ಷಕ್ಕೆ ನಿಮ್ಮನ್ನು ಮಾರಿಕೊಂಡು ಜೀವನವಿಡೀ ಅವರ ಗುಲಾಮರಾಗಿ ಬದುಕಬೇಡಿ.
*ನಿಮ್ಮನ್ನು ಜಾತಿ , ಧರ್ಮ, ಭಾಷೆ, ಪಕ್ಷ ಎಂದು ಒಡೆದು ಆಳುವ ಜನಪ್ರತಿನಿಧಿಗಳ, ಪಕ್ಷಗಳ ಹುನ್ನಾರವನ್ನು ವಿಫಲಗೊಳಿಸಿರಿ. ಪರಸ್ಪರ ವೈರಿಗಳಂತೆ ಹೋರಾಡುತ್ತಾ, ಪರಸ್ಪರರನ್ನು ನಾಶ ಮಾಡಲು ಪ್ರಯತ್ನಿಸುತ್ತಾ, ಜನಪ್ರತಿನಿಧಿಗಳನ್ನು, ಅಧಿಕಾರಿಗಳನ್ನು ರಾಜರುಗಳನ್ನಾಗಿ ಮಾಡಲು ಹೋರಾಡುತ್ತಾ ನಾಶವಾಗಬೇಡಿ.
*ಈ ಚುನಾವಣೆಯ ಮತದಾನ ಯಾರನ್ನೋ ಗೆಲ್ಲಿಸಲಿಕ್ಕಾಗಿ ಅಲ್ಲ. ನಿಮಗೆ ಬೇಕಾದ ಆಡಳಿತಕ್ಕೆ ಸರಿಯಾದ ಪ್ರತಿನಿಧಿಯ ಆಯ್ಕೆ ಮಾಡಿ ನಿಮ್ಮನ್ನು ನೀವೇ ಗೆಲ್ಲಿಸಿಕೊಳ್ಳಲಿಕ್ಕಾಗಿ ಆಗಿದೆಯೇ ಹೊರತು ಗುಲಾಮರನ್ನಾಗಿ ಮಾಡಿಕೊಳ್ಳಲಿಕ್ಕಾಗಿ ಅಲ್ಲ.
*ನಿಮಗೆ ಸರಕಾರದಿಂದ ಸಿಗುವ ಮತ್ತು ಸಿಗಬೇಕಾದ ಸವಲತ್ತು, ಸೇವೆ ಅದು ನಿಮ್ಮದೇ ಹಕ್ಕಿನ ಭಾಗ ಹೊರತು ಯಾವುದೇ ವ್ಯಕ್ತಿ, ಸರಕಾರ ಅಥವಾ ಪಕ್ಷ ನೀಡುವ ಭಿಕ್ಷೆ ಅಲ್ಲವೇ ಅಲ್ಲ.
*ಈ ಕೆಳಗೆ ನೀಡಿದ ಮತದಾರರ ಜಾಗೃತಿಯ ಘೋಷಣೆಗಳನ್ನು ಓದಿ ನೋಡಿ ಅದನ್ನು ಆಚರಣೆಗೆ ತನ್ನಿ. ಹಳ್ಳಿ ಉದ್ದಾರವಾದರೆ ದೇಶ ಉದ್ದಾರವಾದಂತೆ. ಊರಿನ ಸೇವೆಯೇ ದೇಶ ಸೇವೆ ಎಂದು ಹೇಳಿದ ಮಹಾತ್ಮ ಗಾಂಧಿಯವರ ಮಾತನ್ನು ನೆನಪಿಸಿಕೊಂಡು ಗ್ರಾಮಸ್ವರಾಜ್ಯದ ಹಳ್ಳಿಯಿಂದ ಡೆಲ್ಲಿಗೆ ಆಡಳಿತವನ್ನು ಆಯ್ಕೆ ಮಾಡಿ. ಡೆಲ್ಲಿಯಿಂದ ಹಳ್ಳಿಗೆ ಆಡಳಿತವನ್ನು ತಿರಸ್ಕರಿಸಿರಿ. ಮತದಾರರಾದ ನೀವೇ ನಿಜವಾದ ರಾಜರುಗಳಾಗಿ ಪ್ರಜಾಪ್ರಭುತ್ವವನ್ನು, ದೇಶವನ್ನು, ಕೆಟ್ಟ ಜನಪ್ರತಿನಿಧಿಗಳಿಂದ ಮತ್ತು ಅಧಿಕಾರಿಗಳಿಂದ ರಕ್ಷಿಸಿರಿ.