ನಿನ್ನೆ ಬಿಜೆಪಿ ಸೇರ್ಪಡೆ…ಇಂದು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ..!-ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ- ಬಜತ್ತೂರಿನ ಸೋಮಪ್ಪ ಪೂಜಾರಿ ಸ್ಪಷ್ಟನೆ

0

  • ಉಪ್ಪಿನಂಗಡಿ: ಕಾಂಗ್ರೆಸ್ ಪಕ್ಷದಲ್ಲಿ ನನ್ನನ್ನು ಕಡೆಗಣಿಸಿದ್ದಾರೆ ಎಂದು ಹೇಳಿಕೆ ನೀಡಿ ಗುರುವಾರ ಪತ್ನಿ ಜೊತೆ ಪುತ್ತೂರು ಬಿಜೆಪಿ ಕಚೇರಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದ ಬಜತ್ತೂರಿನ ಹಿರಿಯ ಕಾಂಗ್ರೆಸ್ ಕಾರ್ಯಕರ್ತ ಸೋಮಪ್ಪ ಪೂಜಾರಿ ಅವರು ಶುಕ್ರವಾರ ಉಪ್ಪಿನಂಗಡಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ನಾನು ಕಾಂಗ್ರೆಸ್ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ, ಬಿಜೆಪಿಗೆ ಸೇರ್ಪಡೆಗೊಂಡಿಲ್ಲ ಎಂದು ಸೋಮಪ್ಪ ಪೂಜಾರಿ ಅವರು ಸ್ಪಷ್ಟಪಡಿಸಿದ್ದಾರೆ.
  • ಕಾಂಗ್ರೆಸ್ ಪಕ್ಷದಲ್ಲಿ 30 ವರ್ಷ ಕಾರ್ಯಕರ್ತನಾಗಿ ಮತ್ತು 2ನೇ ಬೂತ್‌ನ ಅಧ್ಯಕ್ಷನಾಗಿ ಸೇವೆ ಮಾಡಿರುತ್ತೇನೆ. ಆದರೆ ಕಾಂಗ್ರೆಸ್‌ನಲ್ಲಿ ನನ್ನನ್ನು ಕಡೆಗಣಿಸಿದ್ದಾರೆ ಎಂದು ಹೇಳಿಕೆ ನೀಡಿ ಗುರುವಾರ ಸೋಮಪ್ಪ ಪೂಜಾರಿ ಮತ್ತು ಅವರ ಪತ್ನಿ ಬಜತ್ತೂರು ಗ್ರಾ.ಪಂ.ಮಾಜಿ ಸದಸ್ಯೆ ಲೀಲಾವತಿಯವರು ಪುತ್ತೂರು ಬಿಜೆಪಿ ಕಚೇರಿಯಲ್ಲಿ ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮಾಜಿ ಶಾಸಕ ಸಂಜೀವ ಮಠಂದೂರು ಸೇರಿದಂತೆ ಬಿಜೆಪಿ ಹಿರಿಯ ಮುಖಂಡರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಆದರೆ ಸೋಮಪ್ಪ ಪೂಜಾರಿ ಅವರು ಶುಕ್ರವಾರ ಉಪ್ಪಿನಂಗಡಿ ವ್ಯಾಪ್ತಿಯಲ್ಲಿ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್.ಪೂಜಾರಿ ಅವರ ಪರ ಕಾಂಗ್ರೆಸ್ ಮುಖಂಡರೊಂದಿಗೆ ಮತಯಾಚನೆಯಲ್ಲಿ ತೊಡಗಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ-ಸ್ಪಷ್ಟನೆ:
ಕಾಂಗ್ರೆಸ್ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ನಾನು ಬಿಜೆಪಿ ಸೇರಿಲ್ಲ ಎಂದು ಬಜತ್ತೂರಿನ ಸೋಮಪ್ಪ ಪೂಜಾರಿಯವರು ಸ್ಪಷ್ಟಪಡಿಸಿದ್ದಾರೆ. ನನಗೆ ನಮ್ಮ ಕಾಂಗ್ರೆಸ್ ನಾಯಕರ ಬಗ್ಗೆ ಸ್ಪಲ್ಪ ಅತೃಪ್ತಿ ಇತ್ತು, ಇದನ್ನು ಕೆಲವರಲ್ಲಿ ವ್ಯಕ್ತಪಡಿಸಿದ್ದೆ. ಹಾಗೆ ಅವರು ನನ್ನನ್ನು ಬಿಜೆಪಿ ನಾಯಕರ ಸಮ್ಮುಖದಲ್ಲಿ ಸೇರ್ಪಡೆ ಮಾಡುವ ಪ್ರಕ್ರಿಯೆ ತರಾತುರಿಯಲ್ಲಿ ಮಾಡಿದರು. ಇದು ನನ್ನಿಂದಲೂ ತಪ್ಪಾಗಿದೆ. ಯಾವುದೇ ಕಾರಣಕ್ಕೂ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾದ ಡಾ. ರಾಜಾರಾಮ್ ಕೆ.ಬಿ.ಯವರು ಒಳ್ಳೆಯ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ನಾನು ಸೂಚಿಸಿದ ಓರ್ವ ಬಡ ಹೆಣ್ಣು ಮಗಳಿಗೆ ಅವರ ಕ್ಲಿನಿಕ್‌ನಲ್ಲಿ ಉದ್ಯೋಗಾವಕಾಶ ಕಲ್ಪಿಸಿದ್ದಾರೆ. ಕಾರ್ಯಕರ್ತರನ್ನು ಗೌರವದಿಂದ ನೋಡುತ್ತಿದ್ದಾರೆ. ಅವರನ್ನು ನಾನು ಮರೆಯುವ ಹಾಗಿಲ್ಲ. ನಮ್ಮ ಭಾಗದ ವಲಯಾಧ್ಯಕ್ಷರನ್ನು ಮತ್ತು ಇತರರನ್ನು ಒಟ್ಟಿಗೆ ಸೇರಿಸಿ ಸಮಸ್ಯೆ ಬಗೆಹರಿಸಿದ್ದಾರೆ. ಹಾಗಾಗಿ ನಾನು ಕಾಂಗ್ರೆಸ್‌ನಲ್ಲೇ ಇದ್ದೇನೆ, ಕಾಂಗ್ರೆಸ್‌ಗಾಗಿಯೇ ದುಡಿಯುತ್ತೇನೆ. ಮನೆ ಮನೆಗೆ ತೆರಳಿ ಮತ ಯಾಚನೆ ಮಾಡುತ್ತಿದ್ದೇನೆ ಎಂದು ಸೋಮಪ್ಪ ಪೂಜಾರಿ ಅವರು ಸ್ಪಷ್ಟಪಡಿಸಿದ್ದಾರೆ.

LEAVE A REPLY

Please enter your comment!
Please enter your name here