ಸಿಇಟಿಯಲ್ಲಿ ಪಠ್ಯಕ್ರಮದ ಹೊರಗಿನಿಂದ ಹಲವಾರು ಪ್ರಶ್ನೆ ವಿವೇಕಾನಂದ ಪ.ಪೂ.ಕಾಲೇಜು ಆಡಳಿತ ಮಂಡಳಿ ಖಂಡನೆ

0

ಪಠ್ಯಕ್ರಮದ ಹೊರಗಿನ ಪ್ರಶ್ನೆಗಳಿಗೆ ಪೂರ್ಣ ಅಂಕ ನೀಡಿ ಇಲ್ಲವೇ ಆ ಪ್ರಶ್ನೆಗಳನ್ನು ಹೊರಗಿಟ್ಟು ಮೌಲ್ಯ ಮಾಪನ ಮಾಡಿ
ನೊಂದ ವಿದ್ಯಾರ್ಥಿಗಳು, ಪಾಲಕರಿಗೆ ನ್ಯಾಯ ಒದಗಿಸಲು ಶಿಕ್ಷಣ ಸಚಿವರಿಗೆ ಆಗ್ರಹ

ಪುತ್ತೂರು:ಎಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಕೋರ್ಸ್‌ಗಳಿಗೆ ಸೇರಬಯಸುವವರಿಗಾಗಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಗಳು ಏ.18,19ರಂದು ನಡೆದಿದೆ. ಪುತ್ತೂರಿನ ಮೂರು ಪರೀಕ್ಷಾ ಕೇಂದ್ರಗಳು ಸೇರಿದಂತೆ ದ.ಕ.ಜಿಲ್ಲೆಯಲ್ಲಿ ಒಟ್ಟು 45 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದೆ. ಏ.18ರಂದು ಜೀವಶಾಸ್ತ್ರ ಗಣಿತ ಹಾಗೂ ಏ.19ರಂದು ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಪರೀಕ್ಷೆ ನಡೆದಿದೆ. ಈ ಬಾರಿಯ ಸಿಇಟಿಯಲ್ಲಿ ಹಲವಾರು ಪ್ರಶ್ನೆಗಳನ್ನು ಪಠ್ಯಕ್ರಮದ ಹೊರಗಿನಿಂದ ನೀಡಲಾಗಿದೆ ಎಂಬ ದೂರುಗಳು ಕೇಳಿ ಬಂದಿವೆ.

2023-24ನೇ ಸಾಲಿನ ಕರ್ನಾಟಕ ರಾಜ್ಯದ ಸಾಮಾನ್ಯ ಪ್ರವೇಶ ಪರೀಕ್ಷೆ ಇದರ ಪ್ರಶ್ನೆ ಪತ್ರಿಕೆಯಲ್ಲಿ ನೀಡಲಾದ ಪ್ರಶ್ನೆಗಳ ಪೈಕಿ ಹಲವಾರು ಪ್ರಶ್ನೆಗಳನ್ನು ಪಠ್ಯಕ್ರಮದ ಹೊರಗಿನಿಂದ ನೀಡಲಾಗಿದ್ದು ಈ ಬೇಜವಾಬ್ದಾರಿ ಕ್ರಮವನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಮತ್ತು ಉಪನ್ಯಾಸಕ ವೃಂದ ತೀವ್ರವಾಗಿ ಖಂಡಿಸಿದೆ. ವರ್ಷಪೂರ್ತಿ ಶ್ರಮವಹಿಸಿ ಒತ್ತಡವನ್ನು ಅನುಭವಿಸಿ ತಯಾರಿ ನಡೆಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಹಿಂಸೆ ಅನುಭವಿಸುವಂತಾಯಿತು. ಈ ಗೊಂದಲಕ್ಕೆ ಪ್ರಶ್ನೆ ಪತ್ರಿಕೆ ತಯಾರಿಸಿದ ಸಿಬ್ಬಂದಿಗಳ ಬೇಜವಾಬ್ದಾರಿ ಎದ್ದು ಕಾಣುತ್ತಿತ್ತು. ಸರಕಾರದ ಸಂಬಂಧಪಟ್ಟ ಇಲಾಖೆ ಈ ಗೊಂದಲಕ್ಕೆ ಕಾರಣವಾದ ವ್ಯಕ್ತಿಗಳ ಮೇಲೆ ವಿಚಾರಣೆ ಮಾಡಿ ಕ್ರಮ ಕೈಗೊಳ್ಳಬೇಕೆಂದು ವಿವೇಕಾನಂದ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರ ಪಿ.ಮತ್ತು ಸಂಚಾಲಕ ಗೋಪಾಲಕೃಷ್ಣ ಭಟ್ ಆಗ್ರಹಿಸಿದ್ದಾರೆ.

ಅಲ್ಲದೇ, ಈಗ ಕೊಟ್ಟಿರುವ ಪ್ರಶ್ನೆ ಪತ್ರಿಕೆಯಲ್ಲಿ ಪಠ್ಯಕ್ರಮದಿಂದ ಹೊರಗಿನ ಪ್ರಶ್ನೆಗಳಿಗೆ ನೀಡಲಾದ ಅಂಕಗಳನ್ನು ಪೂರ್ಣವಾಗಿ ನೀಡಬೇಕು ಇಲ್ಲವೇ ಆ ಪ್ರಶ್ನೆಗಳನ್ನು ಸಂಪೂರ್ಣವಾಗಿ ಹೊರಗಿಟ್ಟು ಮೌಲ್ಯಮಾಪನ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ. ಇದರ ಜೊತೆಗೆ ಪರೀಕ್ಷೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ಅನುಭವಿಸಿದ ಮಾನಸಿಕ ಹಿಂಸೆಗೆ ಶಿಕ್ಷಣ ಸಚಿವರು ತಕ್ಷಣ ಸ್ಪಂದಿಸಿ ನೊಂದ ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ನ್ಯಾಯ ಒದಗಿಸಿಕೊಡಬೇಕೆಂದೂ ಅವರು ಆಗ್ರಹಿಸಿದ್ದಾರಲ್ಲದೆ, ಪರೀಕ್ಷೆ ಬರೆದ ವಿದ್ಯಾರ್ಥಿಗಳು ಈ ಸಂಬಂಧವಾಗಿ ಯಾವುದೇ ಒತ್ತಡಕ್ಕೆ ಒಳಗಾಗಬಾರದೆಂದು ವಿನಂತಿಸಿದ್ದಾರೆ. ಅಲ್ಲದೆ ಪ್ರಶ್ನೆಗಳ ಕುರಿತು ಆಕ್ಷೇಪಣೆಗಳಿದ್ದಲ್ಲಿ ವಿದ್ಯಾರ್ಥಿಗಳು [email protected]ಗೆ ತಮ್ಮ ದೂರು ಸಲ್ಲಿಸಬಹುದು. ನಮ್ಮ ಸಂಸ್ಥೆ ಯಾವತ್ತೂ ನಿಮ್ಮ ಜೊತೆಗೆ ಬೆಂಬಲವಾಗಿ ನಿಲ್ಲುತ್ತದೆ ಎಂದು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರ ಪಿ.ಮತ್ತು ಸಂಚಾಲಕ ಗೋಪಾಲಕೃಷ್ಣ ಭಟ್ ತಿಳಿಸಿದ್ದಾರೆ.

ವಿದ್ಯಾರ್ಥಿಗಳು ಧೃತಿಗೆಡಬೇಡಿ
ವಿದ್ಯಾರ್ಥಿಗಳನ್ನು ಗೊಂದಲಕ್ಕೆ ಎಡೆಮಾಡಿ ಮಾನಸಿಕವಾಗಿ ಕುಗ್ಗುವಂತೆ ಮಾಡಿದ ಈ ಪ್ರಶ್ನೆ ಪತ್ರಿಕೆ ತಯಾರಿಸಿದವರ ವಿರುದ್ಧ ಹಾಗೂ ಸಂಬಂಧಪಟ್ಟ ಮತ್ತು ಅಧಿಕಾರಿಗಳ ವಿರುದ್ದ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಅದೇ ರೀತಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು. ವಿದ್ಯಾರ್ಥಿಗಳು JEE Advanced ಮತ್ತು ನೀಟ್‌ ಮುಂತಾದ ಪರೀಕ್ಷೆಗಳಿಗೆ ತಯಾರಿ ನಡೆಸಿ. ನಿಮ್ಮೊಂದಿಗೆ ನಮ್ಮ ಸಂಸ್ಥೆ ಬೆಂಬಲವಾಗಿ ನಿಲ್ಲುತ್ತದೆ.
– ರವೀಂದ್ರ ಪಿ., ಅಧ್ಯಕ್ಷರು, ಆಡಳಿತ ಮಂಡಳಿ ವಿವೇಕಾನಂದ ಪದವಿಪೂರ್ವ ಕಾಲೇಜು, ಪುತ್ತೂರು

LEAVE A REPLY

Please enter your comment!
Please enter your name here