ವಿವಿಧ ಸಂಸ್ಥೆಗಳ ವತಿಯಿಂದ ಮತದಾನ ಜಾಗೃತಿ ಬೀದಿ ನಾಟಕ ಪ್ರದರ್ಶನ, ಸ್ವಚ್ಛತಾ ಅಭಿಯಾನ

0

ಏ.26ರಂದು ಕಡ್ಡಾಯವಾಗಿ ಎಲ್ಲರೂ ಮತಚಲಾಯಿಸಿ : ಹನುಮ ರೆಡ್ಡಿ
ಪುತ್ತೂರು: ಮತದಾನದ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲಾ ಹಾಗೂ ತಾಲೂಕು ಸ್ವೀಪ್ ಸಮಿತಿಯ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರಜ್ಞಾವಂತ ನಾಗರಿಕರಾಗಿ ಎಲ್ಲರೂ ಏ.26ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತಚಲಾಯಿಸುವ ಮೂಲಕ ಪ್ರಜಾತಂತ್ರ ವ್ಯವಸ್ಥೆಯಲ್ಲಿನ ನಿಮ್ಮ ಹಕ್ಕನ್ನು ಚಲಾಯಿಸಿ ಎಂದು ಪುತ್ತೂರು ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಹನುಮ ರೆಡ್ಡಿ ಹೇಳಿದರು.

ಭಾರತ ಚುನಾವಣಾ ಆಯೋಗ, ದ.ಕ.ಜಿಲ್ಲಾ ಸ್ವೀಪ್ ಸಮಿತಿ, ಪುತ್ತೂರು ತಾಲೂಕು ಸ್ವೀಪ್ ಸಮಿತಿ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ರೆಡ್ ಕ್ರಾಸ್ ಘಟಕದ ವತಿಯಿಂದ ಎ.20ರಂದು ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಹಮ್ಮಿಕೊಂಡ ಮತದಾನ ಜಾಗೃತಿ ಕುರಿತ ಬೀದಿ ನಾಟಕ ಪ್ರದರ್ಶನ ಹಾಗೂ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಚುನಾವಣೆ ಹತ್ತಿರವಾಗುತ್ತಿದ್ದಂತೆ ಸಮಾಜದಲ್ಲಿ ಮತದಾರರ ಓಲೈಕೆಗಾಗಿ ನಾನಾ ಆಮಿಷಗಳನ್ನು ಒಡ್ಡಲಾಗುತ್ತದೆ. ಅವುಗಳಿಗೆ ಮರುಳಾಗದೆ ತಮ್ಮ ಮತಗಳನ್ನು ಮಾರಿಕೊಳ್ಳದೆ ಸ್ವತಂತ್ರವಾಗಿ ಮತಚಲಾಯಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಜಿಲ್ಲಾ ತರಬೇತುದಾರ ಹಾಗೂ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಉಪನ್ಯಾಸಕ ನಂದಕಿಶೋರ್ ಎಸ್. ಮಾತನಾಡಿ, ಜಿಲ್ಲಾಡಳಿತ ಸ್ವೀಪ್ ಕಾರ್ಯಕ್ರಮಗಳ ಮೂಲಕ ಮತದಾರರಲ್ಲಿ ಅರಿವು ಮೂಡಿಸುವ ಹಾಗೂ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ನಾನಾ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಅದೇ ರೀತಿ ಇಂದು ಬಸ್ ನಿಲ್ದಾಣದಲ್ಲಿ ಕಾಲೇಜಿನ ವಿದ್ಯಾರ್ಥಿನಿಯರ ಮೂಲಕ ಬೀದಿ ನಾಟಕ ಹಾಗೂ ಸ್ವಚ್ಛತಾ ಅಭಿಯಾನ ನಡೆಸುವ ಮೂಲಕ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ಹೇಳಿದರು.

ಬಸ್ ನಿಲ್ದಾಣ ವ್ಯವಸ್ಥಾಪಕ ಅಬ್ಬಾಸ್ ಮಾತನಾಡಿ, ಎಲ್ಲರೂ ತಪ್ಪದೆ ಮತಚಲಾಯಿಸುವ ಮೂಲಕ ಸತ್ಪ್ರಜೆಗಳಾಗಬೇಕು ಎಂದು ಹೇಳಿದರು. ಪುತ್ತೂರು ತಾಲೂಕು ಪಂಚಾಯತ್ ವಿಷಯ ನಿರ್ವಾಹಕ ತುಳಸಿ, ಸಿಬ್ಬಂದಿ ಭರತ್ ರಾಜ್ ಕೆ, ಹಿರಿಯ ಉಪನ್ಯಾಸಕ ಪ್ರೊ. ಶಾಂತಾರಾಮ, ಉಪನ್ಯಾಸಕ ವಸಂತ ಕುಮಾರ್, ವೆಂಕಪ್ಪ ನಾಯ್ಕ್, ಕೆಎಸ್‌ಆರ್‌ಟಿಸಿ ಸಂಚಾರ ನಿಯಂತ್ರಕ ಕೋಚಣ್ಣ ಪೂಜಾರಿ, ಭಾಸ್ಕರ್ ಶೆಟ್ಟಿ, ಮುರಳೀಧರ್ ಭಟ್ ಉಪಸ್ಥಿತರಿದ್ದರು.

ಬೀದಿನಾಟಕ ಪ್ರದರ್ಶನ – ಸ್ವಚ್ಛತಾ ಅಭಿಯಾನ:
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹಾಗೂ ಮಹಾಲಿಂಗೇಶ್ವರ ದೇವಳದ ರಥ ಬೀದಿಯಲ್ಲಿ ಬೀದಿನಾಟವನ್ನು ಪ್ರದರ್ಶಿಸಲಾಯಿತು. ರಂಗ ನಿರ್ದೇಶಕ, ಪತ್ರಕರ್ತ ಮೌನೇಶ್ ವಿಶ್ವಕರ್ಮ ಅವರ ನಿರ್ದೇಶನದಲ್ಲಿ ಮತ ಮಾರಾಟಕ್ಕಲ್ಲ ಬೀದಿನಾಟಕವನ್ನು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ಪ್ರಸ್ತುತ ಪಡಿಸಿದರು. ರೆಡ್ ಕ್ರಾಸ್ ಘಟಕದ ಸಂಚಾಲಕ ನಂದಕಿಶೋರ್ ಅವರ ನೇತೃತ್ವದಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ಮತದಾನದ ಜಾಗೃತಿಯನ್ನು ಬೀದಿನಾಟಕದ ಮೂಲಕ ಅಲ್ಲದೆ ಕಾಲೇಜಿನ ರೆಡ್ ಕ್ರಾಸ್ ಘಟಕ ಸ್ವಯಂ ಸೇವಕಿಯರು ವಿಶೇಷವಾಗಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸುತ್ತಮುತ್ತ ಹಾಗೂ ಮಹಾಲಿಂಗೇಶ್ವರ ದೇವಳದ ರಥಬೀದಿಯಲ್ಲಿ ಸ್ವಚ್ಛತೆಯನ್ನು ಮಾಡುವ ಮೂಲಕ ವಿನೂತನವಾಗಿ ಜಾಗೃತಿ ಮೂಡಿಸಿದರು.

LEAVE A REPLY

Please enter your comment!
Please enter your name here