ನಾಳೆಯಿಂದ ಕಾರ್ಪಾಡಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಸಡಗರ, ಸಂಭ್ರಮ

0

ಪುತ್ತೂರು: ಸುಮಾರು 3000 ವರ್ಷಗಳ ಇತಿಹಾಸವಿರುವ ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸುಬ್ರಹ್ಮಣ್ಯ ಹಾಗೂ ಸಪರಿವಾರ ದೇವರ ಪುನರ್ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರೋತ್ಸವವು ಏ.21ರಿಂದ ಏ.28ರ ತನಕ ವಿವಿಧ ವೈದಿಕ, ತಾಂತ್ರಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಡಗರ ಸಂಭ್ರಮದಿಂದ ನಡೆಯಲಿದೆ.


ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದಲ್ಲಿ ಏ.21ರಂದು ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಉಗ್ರಾಣ ಮುಹೂರ್ತ, ಪಾಕ ಶಾಲೆ ಉದ್ಘಾಟನೆ, ಲಾಕರ್ ಉದ್ಘಾಟನೆ, ಕಾರ್ಯಾಲಯ ಉದ್ಘಾಟನೆ, ಅತಿಥಿ ಕೊಠಡಿ ಉದ್ಘಾಟನೆ, ಮುಖ್ಯ ವೇದಿಕೆ ಉದ್ಘಾಟನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ ಕ್ಷೇತ್ರದ ತಂತ್ರಿಗಳು ಹಾಗೂ ಋತ್ವಿಜರಿಗೆ ಸ್ವಾಗತ, ನಂತರ ದೇವತಾ ಪ್ರಾರ್ಥನೆಯೊಂದಿಗೆ ವಿವಿಧ ವೈದಿಕ ತಾಂತ್ರಿಕ ವಿಧಿ ವಿಧಾನಗಳು ಪ್ರಾರಂಭಗೊಳ್ಳಲಿದೆ. ಸಂಜೆ ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಜಿ ಆಗಮಿಸಿ, ಆಶೀರ್ವಚನ ನೀಡಲಿದ್ದಾರೆ.ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ನಡೆದ ಬಳಿಕ ವಿದುಷಿ ಮಧುರಾ ಕಾರಂತ್ ಮೈಸೂರು ಇವರಿಂದ ಭರತನಾಟ್ಯ, ಅಭಿನಯ ಕಲಾವಿದರು ಪುತ್ತೂರು ಅಭಿನಯದ ‘ಮಣ್ಣ್’(ಕಾರ್ನಿಕದ) ತುಳು ನಿಗೂಢಮಯ ನಾಟಕ ನಡೆಯಲಿದೆ.


ಏ.22ರಂದು ಕ್ಷೇತ್ರದಲ್ಲಿ ವಿವಿಧ ವೈದಿಕ ಹಾಗೂ ತಾಂತ್ರಿಕ ಕಾರ್ಯಕ್ರಮಗಳು, ವಿವಿಧ ಭಜನಾ ಮಂಡಳಿಗಳಿಂದ ಭಜನೆ, ಸಂಜೆ ನಡೆಯುವ ಧಾರ್ಮಿಕ ಸಭೆಯಲ್ಲಿ ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಶಾಸಕರು, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರಾಗಿರುವ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ.ದ.ಕ.ಸಂಸದ ನಳಿನ್ ಕುಮಾರ್ ಕಟೀಲು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಧ್ಯಾಹ್ನ ಬೊಳುವಾರು ಆಂಜನೇಯ ಮಹಿಳಾ ಯಕ್ಷಗಾನ ಬಳಗದವರಿಂದ ಯಕ್ಷಗಾನ ತಾಳಮದ್ದಳೆ, ಸಂಜೆ ಕೈಕಾರ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಪ್ರಾರ್ಥನಾ ಬಿ. ಮತ್ತು ಅನುರಾಧ ಬಿ. ಬಳಗದವರಿಂದ ಸಂಗೀತ ರಸಮಂಜರಿ, ಮೆಗಾ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ್ ಪ್ರಸ್ತುತ ಪಡಿಸುವ ವಿಸ್ಮಯ ಜಾದೂ ಪ್ರದರ್ಶನ ನಡೆಯಲಿದೆ.


ಏ.23ರಂದು ವಿವಿಧ ವೈದಿಕ, ತಾಂತ್ರಿಕ ವಿಧಿ ವಿಧಾನಗಳು, ವಿವಿಧ ಭಜನಾ ಮಂಡಳಿಗಳಿಂದ ಭಜನೆ ನಡೆಯಲಿದೆ. ಸಂಜೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀಧಾಮ ಮಾಣಿಲದ ಶ್ರೀಮೋಹನದಾಸ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಅಧ್ಯಕ್ಷತೆ ವಹಿಸಲಿದ್ದಾರೆ. ಉಪನ್ಯಾಸಕ ಡಾ|ರವೀಶ್ ಪಡುಮಲೆ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಮಾಜಿ ಶಾಸಕ ಸಂಜೀವ ಮಠಂದೂರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಧ್ಯಾಹ್ನ ಽ ಶಕ್ತಿ ಯಕ್ಷ ಬಳಗ ತೆಂಕಿಲ ಇವರಿಂದ ಯಕ್ಷಗಾನ ತಾಳಮದ್ದಳೆ, ಸಂಜೆ ಸಂಪ್ಯ ಅಕ್ಷಯ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ, ರಾತ್ರಿ ಬೊಳ್ಳಿ ಬೊಲ್ಪು ಕಲಾವಿದರಿಂದ ‘ಮರ್ಲ್ ಕಟ್ಟೋಡ್ಚಿ’ ತುಳು ನಾಟಕ ನಡೆಯಲಿದೆ.


ಏ.24ರಂದು ಕ್ಷೇತ್ರದಲ್ಲಿ ವಿವಿಧ ವೈದಿಕ, ತಾಂತ್ರಿಕ ವಿಧಿ ವಿಧಾನಗಳು ವಿವಿಧ ಭಜನಾ ಮಂಡಳಗಳಿಂದ ಭಜನೆ, ಸಂಜೆಯ ಸಭಾ ಕಾರ್ಯಕ್ರಮದಲ್ಲಿ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಎ.ಪಿ ಸತೀಶ ಮರಿಕೆ ಅಧ್ಯಕ್ಷತೆ ವಹಿಸಲಿದ್ದಾರೆ. ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ, ದ್ವಾರಕಾ ಕನ್‌ಸ್ಟ್ರಕ್ಷನ್‌ನ ಗೋಪಾಲಕೃಷ್ಣ ಭಟ್ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಧ್ಯಾಹ್ನ ಸುಸ್ವರ ಮೆಲೋಡಿಸ್ ಉಪ್ಪಿನಂಗಡಿ ಇವರಿಂದ ಭಕ್ತಿ-ಭಾವ-ಸಂಗಮ, ಸಂಜೆ ಮುಂಡೂರು ಸ.ಹಿ.ಪ್ರಾ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಾಯಿ ಕಲಾ ಯಕ್ಷ ಬಳಗ ಬಾಲವನ ಇವರಿಂದ ‘ಕೊಲ್ಲೂರು ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಬಯಲಾಟ ನಡೆಯಲಿದೆ.


ಏ.25ರಂದು ವಿವಿಧ ವೈದಿಕ, ತಾಂತ್ರಿಕ ವಿಧಿ ವಿಧಾನಗಳು, ವಿವಿಧ ಭಜನಾ ಮಂಡಳಿಗಳಿಂದ ಭಜನೆ ನಡೆಯಲಿದೆ. ಸಂಜೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಸಂಜೀವ ಪೂಜಾರಿ ಕೂರೇಲು ಅಧ್ಯಕ್ಷತೆ ವಹಿಸಲಿದ್ದಾರೆ. ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಮೋಹನ ಗೌಡ ಇಡ್ಯಡ್ಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹರಿದಾಸ್ ರಾಮಚಂದ್ರ ಮಣಿಯಾಣಿ ಕಾಟುಕುಕ್ಕೆ ಬಳಗದವರಿಂದ ಸ್ಯಮಂತಕ ಮಣಿ ಹರಿಕೀರ್ತನೆ, ಸಂಜೆ ಸಂಟ್ಯಾರ್ ಸ.ಹಿ.ಪ್ರಾ ಶಾಲಾ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಕಾರ್ಯಕ್ರಮ, ರಾತ್ರಿ ಅಮ್ಮ ಕಲಾವಿದರು ಕುಡ್ಲ ಅಭಿನಯದ ‘ಅಮ್ಮೆರ್’ ತುಳು ಹಾಸ್ಯಮಯ ನಾಟಕ ನಡೆಯಲಿದೆ.


ಏ.26-ದೇವರ ಪ್ರತಿಷ್ಠೆ: ಏ.26ರಂದು ಪ್ರಾತಃಕಾಲ ಮಹಾಗಣಪತಿ ಹೋಮ, ಮಂಟಪ ಸಂಸ್ಕಾರ, ಕುಂಭೇಶಕರ್ಕರಿಪೂಜೆ, ಅಗ್ನಿಜನನ, ಬ್ರಹ್ಮಕಲಶಪೂಜೆ, ಪರಿಕಲಶಪೂಜೆ, ಅಲ್ಪಪ್ರಸಾದಶುದ್ಧಿ, ಪ್ರಾಸಾದ ಪ್ರತಿಷ್ಠೆ, ನಾಂದೀ ಪುಣ್ಯಾಹ ವಾಚನ, ನಪುಂಸಕ ಶಿಲಾ ಪ್ರತಿಷ್ಠೆ, ರತ್ನನ್ಯಾಸಾದಿ ಪೀಠಪ್ರತಿಷ್ಠೆ, ಶಯ್ಯಾಮಂಟಪದಿಂದ ಜೀವಕಲಶಬಿಂಬ, ನಿದ್ರಾಕಲಶಾದಿಗಳನ್ನು ಗರ್ಭಗೃಹದ ಒಳಗೆ ಒಯ್ಯವುದು, ಶ್ರಿ ಸುಬ್ರಹ್ಮಣ್ಯ, ಗಣಪತಿ, ದುರ್ಗಾದೇವಿ ಪ್ರತಿಷ್ಠೆ ಅಷ್ಟಬಂಧಕ್ರಿಯೆ, ಕುಂಭೇಶಕಲಶಾಭಿಷೇಕ, ನಿದ್ರಾಕಲಶಾಭಿಷೇಕ, ಜೀವಕಲಶಾಭಿಷೇಕ, ಪ್ರತಿಷ್ಠಾ ಪೂಜೆ, ಶಿಖರ ಪ್ರತಿಷ್ಠೆ, ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ತಂಬಿಲ ಸೇವೆ, ಮಧ್ಯಾಹ್ನ ಪ್ರತಿಷ್ಠಾ ಬಲಿ, ಬ್ರಾಹ್ಮಣ ಹಸ್ತೋದಕ, ಮಹಾಪೂಜೆ, ರಾತ್ರಿ ನಿತ್ಯ ನೈಮಿತ್ತಿಕಗಳನ್ನು ನಿಶ್ಚಯಿಸಿ, ಪ್ರಾರ್ಥನೆ, ದುರ್ಗಾಪೂಜೆ, ಮಹಾಬಲಿಪೀಠಾಧಿವಾಸ, ಅಧಿವಾಸಹೋಮ, ಕಲಶಾಽವಾಸ, ಮಹಾಪೂಜೆ ನಡೆಯಲಿದೆ. ಸಂಜೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ಕಾರ್ತಿಕ್ ತಂತ್ರಿಗಳು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಶ್ಯಾಮ್‌ಪ್ರಸಾದ್ ಭಟ್ ಹೈದರಾಬಾದ್ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಿಂಚನ ಬಳಗ ಅಡ್ಡೂರು ಪೊಳಲಿಯವರಿಂದ ಭರತನಾಟ್ಯ-ಜನಪದನೃತ್ಯ-ಭಕ್ತಿಗೀತೆ, ಕುರಿಯ ವಿಶ್ವಗುರು ನೃತ್ಯ ಮತ್ತು ಸಂಗೀತ ಕಲಾ ಶಾಲೆಯವರಿಂದ ಭರತನಾಟ್ಯ, ರಾತ್ರಿ ರಂಗ ಮಾಣಿಕ್ಯ ಸುಬ್ಬು ಸಂಟ್ಯಾರ್ ರಚನೆಯ ‘ಅಜ್ಜನ ಪಜ್ಜೆ’ ತುಳು ಯಕ್ಷಗಾನ ನಡೆಯಲಿದೆ.


ಏ.27-ದೇವರಿಗೆ ಬ್ರಹ್ಮಕಲಶಾಭಿಷೇಕ: ಏ.27ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಪಂಚಾಮೃತಾಭಿಷೇಕ, ಇಂದ್ರಾದಿ ದಿಕ್ಪಾಲ ದೇವತೆಗಳ ಪ್ರತಿಷ್ಠೆ, ಮಹಾಬಲಿಪೀಠ ಪ್ರತಿಷ್ಠೆ ಶ್ರೀದೇವರಿಗೆ ಬ್ರಹ್ಮಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ರಾತ್ರಿ ರಂಗಪೂಜೆ, ಮಹಾಪೂಜೆ, ಶ್ರೀದೇವರ ಬಲಿ ಹೊರಟು ಶ್ರೀಭೂತ ಬಲಿ ಉತ್ಸವ, ವಸಂತಕಟ್ಟೆ ಪೂಜೆ, ಸಾರ್ವಜನಿಕ ಕಟ್ಟೆ ಪೂಜೆ, ಸಂಪ್ಯ ಶ್ರೀಗಣೇಶ ಸುಬ್ರಹ್ಮಣ್ಯ ಕಟ್ಟೆಗೆ ದೇವರ ಸವಾರ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಳಿಗ್ಗೆ ಯಕ್ಷಶ್ರೀ ಹವ್ಯಾಸಿ ಬಳಗದವರಿಂದ ತಾಳಮದ್ದಳೆ ನಡೆಯಲಿದೆ.


ಏ.28-ದೇವರ ದರ್ಶನ ಬಲಿ, ದೈವಗಳ ನೇಮ: ಏ.28ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ತುಲಾಭಾರ, ಶ್ರೀದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಮಧ್ಯಾಹ್ನ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ವ್ಯಾಘ್ರಚಾಮುಂಡಿ ಹಾಗೂ ಗುಳಿಗ ದೈವಗಳ ನೇಮೋತ್ಸವ, ಏ.೨೯ ಹಾಗೂ ಏ.೩೦ರಂದು ಉಳ್ಳಾಲ್ತಿ, ಉಳ್ಳಾಕ್ಲು ಸಪರಿವಾರ ದೈವಗಳಿಗೆ ನೇಮೋತ್ಸವದೊಂದಿಗೆ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿದೆ.ಬ್ರಹ್ಮಕಲಶೋತ್ಸವದಲ್ಲಿ ಪ್ರತಿದಿನ ಬೆಳಿಗ್ಗೆಯಿಂದ ಮಧ್ಯಾಹ್ನ ತನಕ ವಿವಿಧ ಭಜನಾ ತಂಡಗಳಿಂದ ಭಜನೆ ನಡೆಯಲಿದೆ.ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ.

ಇಂದು ಹಸಿರು ಹೊರೆಕಾಣಿಕೆ ಸಮರ್ಪಣೆ
ಬ್ರಹ್ಮಕಲಶೋತ್ಸವದ ಅಂಗವಾಗಿ ಏ.20ರಂದು ಅಪರಾಹ್ನ ಅದ್ದೂರಿಯಾಗಿ ಹಸಿರು ಹೊರೆಕಾಣಿಕೆ ಸಮರ್ಪಣೆ ನಡೆಯಲಿದೆ.ತಾಲೂಕಿನ ವಿವಿಧ ಭಾಗಗಳಿಂದ ಸಂಗ್ರಹಗೊಂಡ ಹೊರೆಕಾಣಿಕೆಯು ಪುತ್ತೂರು ಶ್ರೀ ಮಹಾಲಿಂಗೇಶ್ವ ದೇವಸ್ಥಾನದ ಬಳಿ ಜಮಾವಣೆಗೊಂಡು ಅಪರಾಹ್ನ 3 ಗಂಟೆಗೆ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ.ದೇವಸ್ಥಾನದಿಂದ ಹೊರಟ ಮೆರವಣಿಗೆಯು ಮುಖ್ಯರಸ್ತೆ, ದರ್ಬೆ, ಮುಕ್ರಂಪಾಡಿ, ಸಂಪ್ಯ ಮೂಲಕ ಸಾಗಿ ದೇವಸ್ಥಾನದ ತನಕ ಸಾಗಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಪ್ರಕಟಣೆ ತಿಳಿಸಿದೆ.

ವಿಶೇಷ ಆಕರ್ಷಣೆಯಾಗಿ ಕಾರು-ಪಾಡಿ= ಕಾರ್ಪಾಡಿಯ ಚಿತ್ರಣ
ಕಾರ್ಪಾಡಿ ಕ್ಷೇತ್ರಕ್ಕೂ ಸಮೀಪದಲ್ಲಿರುವ ಬಲ್ಲೇರಿ ಕಾಡಿಗೂ ದೈವಿಕ ಸಂಬಂಧವಿದ್ದು ಬಲ್ಲೇರಿ ಕಾಡಿನ ಶಿಖರದಲ್ಲಿ ನಾಗರೂಪಿ ಸುಬ್ರಹ್ಮಣ್ಯ ನೆಲೆಯಾಗಿ ಕಾಲ ಕ್ರಮೇಣ ಗುಹಾಂತರದಲ್ಲಿ ಸರ್ವರೂಪಿಯಾದ ಸುಬ್ರಹ್ಮಣ್ಯ ದೇವರು ಮೂಡಣ ದಿಕ್ಕಿನ ಬಯಲು ಸೀಮೆಯಲ್ಲಿ ನೆಲೆಸಿ ಕಾರು-ಪಾಡಿ ಕಾರ್ಪಾಡಿ(ತುಳು ಪದ)ಯಾಗಿದೆ ಎಂಬ ಪ್ರತೀತಿಯಿದ್ದು ಇದನ್ನು ತೋರಿಸುವ ಈಗಿನ ಬಲ್ಲೇರಿ ರಕ್ಷಿತಾರಣ್ಯ, ಪ್ರಕೃತಿ ರಮಣೀಯ ತಾಣ ಹಾಗೂ ದೇವಸ್ಥಾನದ ಚಿತ್ರಣವನ್ನು ದೇವಸ್ಥಾನದ ಹಿಂಭಾಗದಲ್ಲಿ ನಿರ್ಮಿಸಿರುವ ತಡೆಗೋಡೆಯಲ್ಲಿ ಸುಮಾರು100 ಅಡಿ ಉದ್ದ ಹಾಗೂ 15 ಅಡಿ ಎತ್ತರದ ಪ್ಲೆಕ್ಸ್ ನಲ್ಲಿ ಮುದ್ರಿಸಿ ಅಳವಡಿಸಲಾಗಿದ್ದು ಪುರಾತನತೆಯ ಚಿತ್ರಣ ವಿಶೇಷ ಆಕರ್ಷಣೆಯಾಗಿದೆ.

LEAVE A REPLY

Please enter your comment!
Please enter your name here