ಎ.23, 24ಕ್ಕೆ ಕೆಮ್ಮಿಂಜೆ ಶ್ರೀ ರಾಮ ಭಜನಾ ಮಂದಿರದ ಪುನರ್ ಪ್ರತಿಷ್ಠಾಪನೆ

0

ಪುತ್ತೂರು: ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ವಠಾರದಲ್ಲಿರುವ ಶ್ರೀ ರಾಮ ಭಜನಾ ಮಂದಿರದ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮ ಎ.23 ಮತ್ತು 24ರಂದು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ಜರುಗಲಿದೆ ಎಂದು ಶ್ರೀ ರಾಮಭಜನಾ ಮಂದಿರ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕೆಮ್ಮಿಂಜೆ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.


ಎ.23 ರಂದು ರಾತ್ರಿ ಗಂಟೆ 7 ರಿಂದ ದೇವತಾ ಪ್ರಾರ್ಥನೆ, ಆಚಾರ್ಯವರಣೆ ಸಹಿತ ವಿವಿಧ ಧಾರ್ಮಿಕ ವಿಧಿ ವಿಧಾನ ನಡೆಯಲಿದ್ದು ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಅದೇ ದಿನ ಸಂಜೆ ಗಂಟೆ 4.30 ರಿಂದ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಧೀಶಕ್ತಿ ಮಹಿಳಾ ಯಕ್ಷಬಳಗ ತೆಂಕಿಲ ಪುತ್ತೂರು ಇವರಿಂದ ಕುಂಬಳೆ ಪಾರ್ತಿಸುಬ್ಬ ವಿರಚಿತ ಯಕ್ಷಗಾನ ತಾಳಮದ್ದಳೆ ವಾಲಿವಧೆ ನಡೆಯಲಿದೆ. ಸಂಜೆ ಗಂಟೆ 6 ರಿಂದ ಸಭಾ ಕಾರ್ಯಕ್ರಮದಲ್ಲಿ ಹಿರಿಯರು ದೀಪ ಪ್ರಜ್ವಲಿಸಲಿದ್ದಾರೆ. ಈ ಸಂದರ್ಭ ನಿತ್ಯ ಕರಸೇವಕರು ಮತ್ತು ಕಟ್ಟಡದ ಕೆಲಸ ಕಾರ್ಯಗಳನ್ನು ನಿರ್ವಹಿಸಿದವರಿಗೆ ಹಾಗು ಶಿಲ್ಪಿಗಳಿಗೆ ಗೌರವ ಸಮರ್ಪಣೆ ಮಾಡಲಾಗುವುದು. ಭಾಸ್ಕರ್ ರಾವ್ ಕೆ ಮರೀಲು ಮತ್ತು ವಿ ಶಾಮಣ್ಣ ಅವರಿಗೆ ವಿಶೇಷ ಗೌರವ ಸಮರ್ಪಣೆ ಮಾಡಲಾಗುವುದು. ಎ.24ರಂದು ಬೆಳಿಗ್ಗೆ ಗಣಪತಿ ಹೋಮದ ಬಳಿಕ ಶ್ರೀ ರಾಮ ದೇವರ ಪ್ರತಿಷ್ಠೆ, ಸಾನಿಧ್ಯ ಕಲಶಾಭಿಷೇಕ, ಮಂಗಳಾರತಿ ಮತ್ತು ಪ್ರಸಾದ ವಿತರಣೆ ನಡೆಯಲಿದೆ. ಬೆಳಿಗ್ಗೆ ಗಂಟೆ 6 ರಿಂದ 11ರ ತನಕ ವಿವಿಧ ಭಜನಾ ತಂಡಗಳಿಂದ ವಿವಿಧ ಭಜನಾ ಕಾರ್ಯಕ್ರಮ ನಡೆಯಲಿದೆ. ಗಂಟೆ 11 ರಿಂದ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥರು ಆಶೀರ್ವಚನ ನೀಡಲಿದ್ದಾರೆ. ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದ ಆಡಳಿತ ಮುಖ್ಯಸ್ಥ ಯು ಪೂವಪ್ಪ ಅವರು ಸಭಾಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪ್ರಶಾಂತ್ ಪಕ್ಕಳ, ರಾಮಕ್ಷತ್ರಿಯ ಸೇವಾ ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಕೆಮ್ಮಿಂಜೆ, ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ, ವೇ ಮೂ ಸುಬ್ರಹ್ಮಣ್ಯ ಬಳ್ಳಕ್ಕುರಾಯ, ಸ್ವಣೋದ್ಯಮಿ ಬಲರಾಮ ಆಚಾರ್ಯ, ರಾಷ್ಟ್ರ ಸೇವಿಕಾ ಸಮಿತಿ ದಕ್ಷಿಣ ಪ್ರಾಂತ ಇದರ ಭಗಿನಿ ಮೀನಾಕ್ಷಿ, ಉದ್ಯಮಿಗಳಾದ ಉಜ್ವಲ್ ಪ್ರಭು ಮತ್ತು ಶಿವಪ್ರಸಾದ್ ಶೆಟ್ಟಿಯವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭ ವಾಸ್ತು ಶಿಲ್ಪಿ ಪಿ.ಜಿ ಜಗನ್ನಿವಾಸ ರಾವ್ ಅವರನ್ನು ಸನ್ಮಾನಿಸಲಾಗುವುದು ಎಂದವರು ಹೇಳಿದರು. ಶ್ರೀ ರಾಮಭಜನಾ ಮಂದಿರ ಟ್ರಸ್ಟ್‌ನ ಕಾರ್ಯದರ್ಶಿ ಅರುಣ್ ಕುಮಾರ್ ಆಲಂಕಾರ್, ನವೀಕರಣ ಸಮಿತಿ ಕಾರ್ಯಾಧ್ಯಕ್ಷ ನಿತಿನ್ ಕುಮಾರ್ ಮಂಗಳ, ರಾಮಕ್ಷತ್ರಿಯ ಸೇವಾ ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಕೆಮ್ಮಿಂಜೆ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

1964ರಂದು ಭಜನಾ ಮಂದಿರ ನಿರ್ಮಾಣ ಮಾಡಲಾಗಿತ್ತು. ಪ್ರತಿ ತಿಂಗಳು ಭಜನಾ ಕಾರ್ಯಕ್ರಮ ನಡೆಯುತ್ತದೆ. ಇದೀಗ ಸುಮಾರು ರೂ.ಹನ್ನೆರಡುವರೆ ಲಕ್ಷ ವೆಚ್ಚದಲ್ಲಿ ಪುನರ್‌ನವೀಕರಣ ಮಾಡಲಾಗಿದೆ. ಈ ಹಿಂದೆ ಗರ್ಭಗುಡಿಗೆ ಸುತ್ತು ಬರುವ ವ್ಯವಸ್ಥೆ ಇರಲಿಲ್ಲ. ಇದೀಗ ಗರ್ಭಗುಡಿಗೆ ಸುತ್ತು ಬರುವ ವ್ಯವಸ್ಥೆ ಕಲ್ಪಿಸುವಂತೆ ನವೀಕರಣ ಮಾಡಲಾಗಿದೆ. ವಿಶೇಷ ಎಂದರೆ ಷಷ್ಠಿಯ ಸಂದರ್ಭ ಸುಬ್ರಹ್ಮಣ್ಯ ದೇವರ ಉತ್ಸವದಲ್ಲಿ ಶ್ರೀ ದೇವರು ಭಜನಾ ಮಂದಿರ ಒಳಗೆ ಬಂದು ಕಟ್ಟೆ ಪೂಜೆ ನಡೆಯುತ್ತದೆ.
-ನವೀನ್‌ಚಂದ್ರ ಪುನರ್ವಸು, ನವೀಕರಣ ಸಮಿತಿ ಅಧ್ಯಕ್ಷರು

LEAVE A REPLY

Please enter your comment!
Please enter your name here