ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೆಯ ಬಳಿಕ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ಎ.28ರಂದು ಜರುಗಲಿರುವ ವರ್ಷಾವಧಿ ನೇಮ ನಡಾವಳಿಗೆ ಎ.20ರಂದು ಬೆಳಿಗ್ಗೆ ಗೊನೆ ಮುಹೂರ್ತ ನಡೆಯಿತು.
ದೈವಸ್ಥಾದದ ಪ್ರಧಾನ ಅರ್ಚಕ ರವಿಚಂದ್ರ ನೆಲ್ಲಿತ್ತಾಯ ಅವರು ದೈವಸ್ಥಾನದ ಭಂಡಾರದ ಸ್ಥಾನದಲ್ಲಿ ಪ್ರಾರ್ಥನೆ ಮಾಡಿ ಬಳಿಕ ಸಂಪ್ರದಾಯದಂತೆ ವಾದ್ಯದೊಂದಿಗೆ ಕಾಲು ದಾರಿಯಲ್ಲಿ ತೆರೆಳಿ ತೋಟವೊಂದರಲ್ಲಿ ಗೊನೆ ಮುಹೂರ್ತ ಮಾಡಲಾಯಿತು. ದೈವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಮಾಧವ ಗೌಡ ಕಾಂತಿಲ, ಮಾಜಿ ಸದಸ್ಯರಾದ ಅಶೋಕ್, ಭೋಜರಾಜ ಗೌಡ, ನಾರಾಯಣ ಪೂಜಾರಿ, ಕಿರಣ್ ಕುಮಾರ್ ರೈ, ಮಾಜಿ ಮಾಜಿ ಸದಸ್ಯ ಚಿದಾನಂದ ಬೈಲಾಡಿ ಮತ್ತು ದೈವದ ಚಾಕ್ರಿ ಮಾಡುವವರು ಮತ್ತಿತರರು ಉಪಸ್ಥಿತರಿದ್ದರು. ದೈವಸ್ಥಾನದ ಕಚೇರಿ ನಿರ್ವಾಹಕ ಚಂದ್ರಶೇಖರ್ ಭಟ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ದೈವಸ್ಥಾನದ ನೇಮ ನಡಾವಳಿಗೆ ಸಂಬಂಧಿಸಿ ಎ.25ರಂದು ಮುಂಡ್ಯ ಹಾಕುವುದು, ಎ.26ಕ್ಕೆ ಎಣ್ಣೆ ಕೊಡುವುದು, ಎ.27ಕ್ಕೆ ಬಲ್ನಾಡು ಶ್ರೀ ವಿನಾಯಕ ದೇವಸ್ಥಾನದಲ್ಲಿ ದೇವತಾ ಪ್ರಾರ್ಥನೆ, ವಿಶೇಷ ಮಹಾಪೂಜೆ, ರಂಗಪೂಜೆ, ರಾತ್ರಿ ಶ್ರೀ ದಂಡನಾಯಕ ದೈವಸ್ಥಾನದಲ್ಲಿ ಶ್ರೀ ದೈವಗಳ ಭಂಡಾರ ತೆಗೆಯುವುದು ಅನ್ನಸಂತರ್ಪಣೆ, ತಂಬಿಲ ನಡೆಯಲಿದೆ. ಎ.28ಕ್ಕೆ ಶ್ರೀ ದಂಡನಾಯಕ ದೈವದ ವಾಲಸರಿನೇಮ, ಶ್ರೀ ಉಳ್ಳಾಲ್ತಿ ನೇಮ, ಶ್ರೀ ಕಾಲರಾಹು ಮತ್ತು ಮಲರಾಯ ದೈವಗಳ ನೇಮ ನಡೆಯಲಿದೆ.