ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಿಶೇಷ ಸರ್ಟಿಫಿಕೇಟ್ ಕೋರ್ಸ್‌ಗಳ ಉದ್ಘಾಟನೆ

0

ವಿಷಯ ಜ್ಞಾನ ವಿಸ್ತಾರವಾದಂತೆ ಭವ್ಯ ಭವಿಷ್ಯ ನಿಮ್ಮದಾಗುವುದು : ಪಿ ಸುಬ್ರಾಯ ಪೈ
ಪದವಿಪೂರ್ವ ವಿಭಾಗದಲ್ಲಿ ವಿನೂತನ ಪ್ರಯೋಗಕ್ಕೆ ಮುನ್ನುಡಿ

ಪುತ್ತೂರು: “ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ವ್ಯಾವಹಾರಿಕ ಜ್ಞಾನ ಸ್ವಲ್ಪ ಮಟ್ಟಿಗೆ ಸಿಗುತ್ತದೆ, ಕಾಲೇಜು ಪಠ್ಯಗಳ ಜೊತೆಗೆ ಇತರ ಪಠ್ಯಪೂರಕ ಚಟುವಟಿಕೆಗಳನ್ನು ಅಳವಡಿಸಿಕೊಂಡು ವಿವಿಧ ಮೂಲಗಳಿಂದ ಜ್ಞಾನ ಸಂಪಾದನೆ ಮಾಡಿದಷ್ಟು ಜೀವನದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ. ಇಂದಿನ ಆಧುನಿಕ ಸಮಾಜದಲ್ಲಿ ಜೀವನ ನಡೆಸಲು ಪುಸ್ತಕ ಜ್ಞಾನವನ್ನು ಮೀರಿದ ಜ್ಞಾನವು ಅತ್ಯಾವಶ್ಯಕ” ಎಂದು ಖ್ಯಾತ ಉದ್ಯಮಿಗಳು ಹಾಗೂ ಅಜೇಯ ವಿಶ್ವಸ್ಥ ಮಂಡಳಿ, ಮೂರ್ಕಜೆ, ವಿಟ್ಲ ಇದರ ಅಧ್ಯಕ್ಷ ಪಿ. ಸುಬ್ರಾಯ ಪೈ ಹೇಳಿದರು.

ಇವರು ವಿವೇಕಾನಂದ ಪದವಿಪೂರ್ವ ಕಾಲೇಜಿನ ನೇತಾಜಿ ಸಭಾಂಗಣದಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗಾಗಿ ನಡೆಸಲ್ಪಡುವ ವಿಶೇಷ ಸರ್ಟಿಫಿಕೇಟ್ ಕೋರ್ಸ್‌ಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವೆಲ್ತ್ ವಿಷನ್ ಪುತ್ತೂರು ಹಾಗೂ ಹಾರ್ದಿಕ್ ಹರ್ಬಲ್ಸ್ ಬಂಟ್ವಾಳ ಇದರ ಸಂಸ್ಥಾಪಕರಾದ ಮುರಳೀಧರ.ಕೆ ಮಾತನಾಡಿ, ಆಧುನಿಕ ಸಮಾಜದ ವಿವಿಧ ಉದ್ಯಮಗಳಿಗೆ ಪೂರಕವಾದ ಜ್ಞಾನವನ್ನು ಒದಗಿಸಲು ಇಂತಹ ಸರ್ಟಿಫಿಕೇಟ್ ಕೋರ್ಸ್‌ಗಳು ಸಹಕಾರಿ, ಇದು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ, ಸಮಯದ ಸದುಪಯೋಗ ಹಾಗೂ ಕಲಿಕೆಯಿಂದ ಗಳಿಕೆಗೆ ದಾರಿದೀಪ” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರ.ಪಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, “ನಮ್ಮ ಕೌಶಲ್ಯಗಳ ಜತೆಗೆ ನೈಪುಣ್ಯತೆಯನ್ನು ಬೆಳೆಸಿಕೊಳ್ಳುವುದು ಅತ್ಯಾವಶ್ಯಕ” ಎಂದು ನೈಜ ಉದಾಹರಣೆಗಳೊಂದಿಗೆ ಮಾರ್ಗದರ್ಶನವನ್ನು ನೀಡಿದರು. “ವಿಭಿನ್ನವಾದ ಯೋಚನಾ ಮನಸ್ಥಿತಿ, ಸೃಜನಶೀಲತೆ, ಎಲ್ಲ ವಿಷಯಗಳ ಬಗೆಗಿನ ಸಾಮಾನ್ಯ ಜ್ಞಾನ, ಜೀವನದಲ್ಲಿ ಬರುವ ಸವಾಲುಗಳನ್ನು ಎದುರಿಸಲು ವಿದ್ಯಾರ್ಥಿಗಳಿಗೆ ಕಲಿಕೆಯ ಹಂತದಲ್ಲೇ ಇಂತಹ ತರಬೇತಿಗಳು ಅತ್ಯಗತ್ಯ. ಈ ವಿನೂತನ ಶೈಲಿಯ ತರಬೇತಿಯನ್ನು ನಮ್ಮ ಸಂಸ್ಥೆ ಪರಿಚಯಿಸುತ್ತಿರುವುದು ನಮಗೆಲ್ಲರಿಗೆ ಹೆಮ್ಮೆಯ ವಿಚಾರ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ಡಾ .ಕೆ.ಎನ್. ಸುಬ್ರಹ್ಮಣ್ಯ, ವತ್ಸಲಾ ರಾಜ್ಞೆ ಹಾಗೂ ಕಾಲೇಜು ಪ್ರಾಂಶುಪಾಲಮಹೇಶ್ ನಿಟಿಲಾಪುರ ಹಾಗೂ ಉಪಪ್ರಾಂಶುಪಾಲ ದೇವಿಚರಣ್ ರೈ ಉಪಸ್ಥಿತರಿದ್ದರು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕ ಶ್ರೀಧರ್ ಶೆಟ್ಟಿಗಾರ್ ಪ್ರಾಸ್ತಾವಿಕ ನುಡಿಗಳೊಂದಿಗೆ ಅತಿಥಿಗಳನ್ನು ಸ್ವಾಗತಿಸಿ, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ದೇವಿಪ್ರಸಾದ್ ವಂದಿಸಿದರು. ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿ ಮೋನಿಷಾ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here