ಮಾರ್ ಇವಾನಿಯೋಸ್ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಪರಿಷತ್ ಉದ್ಘಾಟನೆ – ವಿಶೇಷ ಉಪನ್ಯಾಸ

0

ನಾಯಕತ್ವ ಎಂಬುದು ಹುದ್ದೆಯಲ್ಲ, ಅದೊಂದು ಜವಾಬ್ದಾರಿ – ಲಕ್ಷ್ಮೀಕಾಂತ ರೈ ಅನಿಕೂಟೇಲ್

ಕುಂತೂರು: ನಾಯಕತ್ವದ ಗುಣ ವಿದ್ಯಾರ್ಥಿಗಳ ಜೀವನವನ್ನು ಸದೃಢ ಮಾಡುವುದರ ಜತೆಗೆ ಆರೋಗ್ಯವಂತ ಸಮಾಜ ಸೃಷ್ಟಿಯಲ್ಲಿಯೂ ಪಾತ್ರವಹಿಸುತ್ತದೆ. ಆದರೆ ಇಂದಿನ ಯುವ ಪೀಳಿಗೆ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವತ್ತ ಮನಸ್ಸು ಮಾಡುತ್ತಿಲ್ಲ. ನಾಯಕತ್ವ ಗುಣಗಳು ವಿದ್ಯಾರ್ಥಿಗಳ ಮುಂದಿನ ಉಜ್ವಲ ಭವಿಷ್ಯವನ್ನು ರೂಪಿಸುವಲ್ಲಿ ಸಹಕಾರಿಯಾಗಿದೆ. ನಾಯಕತ್ವ ಗುಣವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವಲ್ಲಿ ಕಾಲೇಜಿನಲ್ಲಿರುವ ವಿದ್ಯಾರ್ಥಿ ಪರಿಷತ್ ಉತ್ತಮ ವೇದಿಕೆಯನ್ನು ಒದಗಿಸುತ್ತದೆ. ಆದರೆ ಇಲ್ಲಿ ದೊರೆಯುವ ನಾಯಕತ್ವ ಎಂಬುದು ಹುದ್ದೆಯಲ್ಲ, ಅದೊಂದು ಜವಾಬ್ದಾರಿ ಎನ್ನುವ ಜ್ಞಾನ ಪ್ರತಿಯೊಬ್ಬ ವಿದ್ಯಾರ್ಥಿ ನಾಯಕನಲ್ಲಿ ಇರಬೇಕು ಎಂದು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಲಕ್ಷ್ಮೀಕಾಂತ ರೈ ಅನಿಕೂಟೇಲು ಹೇಳಿದರು.

ಕಡಬ ತಾಲೂಕಿನ ಕುಂತೂರಿನಲ್ಲಿರುವ ಮಾರ್ ಇವಾನಿಯೋಸ್ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿ 2024-25ರ ಸಾಲಿನ ನೂತನ ವಿದ್ಯಾರ್ಥಿ ಪರಿಷತ್ ಹಾಗೂ ವಿವಿಧ ಸಂಘಗಳ ಉದ್ಘಾಟನೆಯನ್ನು ದೀಪ ಬೆಳಗುವ ಮೂಲಕ ನಡೆಸಿ ನಂತರ ಮಾತನಾಡಿದ ಅವರು, ದೇಶದಲ್ಲಿ ಅಸಮಾನತೆ ತಾಂಡವವಾಡಿ ಗ್ರಾಮೀಣ ಭಾಗಕ್ಕೆ ಮೂಲ ಸೌಕರ್ಯಗಳು ಸಿಗುತ್ತಿಲ್ಲ, ಇಂತಹ ಸಮಸ್ಯೆಗಳನ್ನು ಕೊನೆಗಾಣಿಸಬೇಕಾದರೆ ಯುವಕರು ನಾಯಕತ್ವ ಗುಣ ಬೆಳೆಸಿಕೊಂಡು ಎಲ್ಲಾ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದೇಶವನ್ನು ಬದಲಾವಣೆಯ ಹಾದಿಯಲ್ಲಿ ನಡೆಸುವ ಜವಾಬ್ದಾರಿ ಹೊರಬೇಕು. ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಜತಗೆ ನಾಯಕತ್ವದ ಗುಣ ಬೆಳೆಸಿಕೊಂಡು ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ನಾಯಕತ್ವದ ಗುಣಗಳನ್ನು ರೂಪಿಸುವಲ್ಲಿ ಕಾಲೇಜಿನ ಪ್ರತಿಯೊಂದು ಸಂಘಗಳು ಹಾಗೂ ವಿದ್ಯಾರ್ಥಿ ಪರಿಷತ್ ಉತ್ತಮ ಅಡಿಪಾಯವನ್ನು ನೀಡುತ್ತಿದೆ. ಇಲ್ಲಿ ನೀವು ನಿರ್ವಹಿಸುವ ಕೆಲಸಗಳು ಮುಂದೆ ಸಮಾಜದಲ್ಲಿ ಉತ್ತಮ ನಾಯಕರನ್ನಾಗಿ ರೂಪಿಸುತ್ತದೆ ಎಂದು ತಿಳಿಸಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಸಂಚಾಲಕ ವಂ|ಫಾ|ಡಾ| ಎಲ್ದೋ ಪುತ್ತೆನ್‌ಕಂಡತ್ತಿಲ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಇಂದಿನ ಬದಲಾಗುತ್ತಿರುವ ಕೆಲಸದ ವಾತಾವರಣದಲ್ಲಿ ನಾಯಕತ್ವವು ಹೊಸ ಆಯಾಮವನ್ನು ಪಡೆದುಕೊಂಡಿದೆ. ಇಂದು ಎಂಟಕ್ಕಿಂತಲೋ ಜಾಸ್ತಿ ನಾಯಕತ್ವದ ಶೈಲಿಗಳು ನಮ್ಮ ಮುಂದಿದೆ. ಆದರೆ ಒಬ್ಬ ವಿದ್ಯಾರ್ಥಿ ಪರಿಣಾಮಕಾರಿ ನಾಯಕನಾಗಲು, ಹಲವು ಕೌಶಲ್ಯಗಳನ್ನು ಹೊಂದಿರಬೇಕು. ಅದನ್ನು ನೀವು ಬೆಳೆಸಿಕೊಂಡಾಗ ಅದು ನಿಮ್ಮನ್ನು ಯಶಸ್ಸಿನತ್ತ ಮುನ್ನಡೆಸುತ್ತದೆ ಎಂದರು. ವೇದಿಕೆಯಲ್ಲಿ ಗೌರವ ಉಪಸ್ಥಿತರಿದ್ದ ಕಾಲೇಜಿನ ಪ್ರಾಂಶುಪಾಲೆ ಉಷಾ ಎಂ.ಎಲ್. ಮಾತನಾಡಿ, ವಿದ್ಯಾರ್ಥಿಗಳಲ್ಲಿ ಟೀಮ್ ವರ್ಕ್ ಎನ್ನುವುದು ಅತ್ಯಂತ ಪ್ರಮುಖವಾಗಿರುವುದು. ಪ್ರಭಾವಿ ನಾಯಕರು ತಮ್ಮ ಕಾರ್ಯಗಳು, ಮಾತುಗಳ ಮೂಲಕ ತಮ್ಮ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಲು ಸಾಧ್ಯವಾಗುತ್ತದೆ. ಅಂತಹ ಸಾಮರ್ಥ್ಯವನ್ನು ನೀವೆಲ್ಲರೂ ಬೆಳೆಸಿಕೊಳ್ಳಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಸಂಚಾಲಕ ವಂ|ಫಾ|ಡಾ| ಎಲ್ದೋ ಪುತ್ತೆನ್‌ಕಂಡತ್ತಿಲ್ ವಿದ್ಯಾರ್ಥಿ ಪರಿಷತ್ ನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಸಭಾ ಕಾರ್ಯಕ್ರಮದ ನಂತರ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಲಕ್ಷ್ಮೀಕಾಂತ ರೈ ಅನಿಕೂಟೇಲು ‘ಮೌಲ್ಯಯುತ ನಾಯಕತ್ವದ ಸೂತ್ರಗಳು’ ಎನ್ನುವ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ನಂತರ ಸುಮಾರು 2 ಗಂಟೆಗೂ ಅಧಿಕ ಕಾಲ ಪ್ರಶಿಕ್ಷಾಣಾರ್ಥಿಗಳ ಜೊತೆಗೆ ಪ್ರಚಲಿತ ವಿದ್ಯಾಮಾನಗಳ ಕುರಿತು ಸಂವಾದ ನಡೆಸಿದರು. ಕನ್ನಡ ಪ್ರಾಧ್ಯಾಪಕ ಹರೀಶ್ ಸ್ವಾಗತಿಸಿ, ಪ್ರಶಿಕ್ಷಣಾರ್ಥಿ ದೀಕ್ಷಾ ವಂದಿಸಿದರು. ಪ್ರಶಿಕ್ಷಣಾರ್ಥಿ ಕೀರ್ತನಾ ಮತ್ತು ಶಿಲ್ಪಾ ಕಾರ್ಯಕ್ರಮ ನಿರೂಪಿಸಿದರು. ಪ್ರಶಿಕ್ಷಣಾರ್ಥಿ ಪ್ರಿಯಾ ಸಂವಾದ ಕಾರ್ಯಕ್ರಮವನ್ನು ನಿರ್ವಹಿಸಿದರು. ಕಾಲೇಜಿನ ಎಲ್ಲಾ ಉಪನ್ಯಾಸಕರು, ಭೋದಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

“ಇಂದಿನ ಮಕ್ಕಳು ನಾಳಿನ ನಾಗರಿಕರು. ಇಂದಿನ ವಿದ್ಯಾರ್ಥಿಗಳು ನಾಳಿನ ನಾಯಕರು ಎಂಬ ಮಾತಿದೆ. ಒಬ್ಬ ನಿಜವಾದ ನಾಯಕ ‘ನಾನು’ ಎಂಬ ವ್ಯಕ್ತಿ ಕೇಂದ್ರಿತ ಪರಿಕಲ್ಪನೆಯನ್ನು ಮೀರಿ ‘ನಾವು’ ಎಂಬ ಸಮೂಹ ಕೇಂದ್ರಿತ ಪರಿಕಲ್ಪನೆ ಹೊಂದಿರುತ್ತಾನೆ. ಗುಂಪನ್ನು ಮುನ್ನಡೆಸುವ, ಕಠಿಣ ಪರಿಸ್ಥಿತಿಯನ್ನು ಎದುರಿಸುವ, ನಿರ್ಣಯ ಕೈಗೊಳ್ಳುವ ಸಾಮರ್ಥ್ಯ ಹೊಂದಿರುತ್ತಾನೆ. ಈ ಎಲ್ಲ ಸಾಮರ್ಥ್ಯಗಳನ್ನು ವಿದ್ಯಾರ್ಥಿಗಳಲ್ಲಿ ಅಂತರ್ಗತಗೊಳಿಸಲು ಶಾಲಾ–ಕಾಲೇಜುಗಳ ವಿವಿಧ ಸಂಘಗಳ ಮೂಲಕ ಸೂಕ್ತ ವೇದಿಕೆ, ಅವಕಾಶಗಳನ್ನು ಒದಗಿಸುತ್ತದೆ. ಇಂದಿನ ಎಲ್ಲಾ ದೊಡ್ಡ ದೊಡ್ಡ ನಾಯಕರು ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿ ಪರಿಷತ್ ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಪ್ರತಿಯೊಬ್ಬ ವಿದ್ಯಾರ್ಥಿವು ಇಂತಹ ವಿದ್ಯಾರ್ಥಿ ಸಂಘಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಮುಂದಿನ ಸದೃಢ ನಾಯಕರಾಗಿ ರೂಪುಗೊಳ್ಳಬಹುದು”

  • – ಲಕ್ಷ್ಮೀಕಾಂತ ರೈ ಅನಿಕೂಟೇಲು, ಸಹಾಯಕ ಪ್ರಾಧ್ಯಾಪಕರು, ರಾಜ್ಯಶಾಸ್ತ್ರ ವಿಭಾಗ, ವಿವೇಕಾನಂದ ಕಾನೂನು ಮಹಾವಿದ್ಯಾಲಯ ಪುತ್ತೂರು

LEAVE A REPLY

Please enter your comment!
Please enter your name here