ಉಪ್ಪಿನಂಗಡಿ: ಕೈ ತುಂಬಾ ಸಂಪಾದನೆಯ ಖಾಸಗಿ ನೆಲೆಯಲ್ಲಿನ ವೈದ್ಯಕೀಯ ವೃತ್ತಿಯನ್ನು ಕೈ ಬಿಟ್ಟು ಭಾರತೀಯ ಸೇನೆಯಲ್ಲಿ ವೈದ್ಯನಾಗಿ ದುಡಿಯಬೇಕೆಂಬ ಹಂಬಲವನ್ನು ಹೊಂದಿದ್ದ ಉಪ್ಪಿನಂಗಡಿಯ ಯುವ ವೈದ್ಯ ಡಾ. ಗೌತಮ್ ರೈ ಭಾರತೀಯ ಸೇನೆಯ ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ವಿಭಾಗದಲ್ಲಿ ವೈದ್ಯಾಧಿಕಾರಿ ಸಹಿತ ಅಸಿಸ್ಟಂಟ್ ಕಮಾಂಡೆಂಟ್ ಆಗಿ ಸೇರ್ಪಡೆಗೊಂಡಿದ್ದಾರೆ.
ಉಪ್ಪಿನಂಗಡಿಯ ನಿವಾಸಿಗರಾದ ಶರತ್ ಕುಮಾರ್ ರೈ ಹಾಗೂ ರುಕ್ಮಿಣಿ ರೈ ದಂಪತಿಗಳ ಮಗನಾಗಿರುವ ಗೌತಮ್ ರೈ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ಹತ್ತನೇ ತರಗತಿಯವರೆಗೆ ವಿದ್ಯಾಭ್ಯಾಸವನ್ನು ಮಾಡಿದ್ದು, ಅದೇ ವೇಳೆ ಸ್ಕೌಟ್ ಗೈಡ್ಸ್ ನಲ್ಲಿ ರಾಷ್ಟ್ರಪತಿ ಪುರಸ್ಕಾರ್ ಪರೀಕ್ಷೆ ಉತ್ತೀರ್ಣರಾಗಿದ್ದರು. ಪಿಯುಸಿ ಶಿಕ್ಷಣವನ್ನು ಪುತ್ತೂರಿನ ಅಂಬಿಕಾ ವಿದ್ಯಾಲಯದಲ್ಲಿ ಪಡೆದು ವೈದ್ಯಕೀಯ ಶಿಕ್ಷಣವನ್ನು ಎಂ ಬಿ ಜೆ ಮೆಡಿಕಲ್ ಕಾಲೇಜು ಹೊಸಕೋಟೆಯಲ್ಲಿ ಪಡೆದಿರುತ್ತಾರೆ.
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂಬ ತನ್ನ ಜೀವಮಾನದ ಕನಸನ್ನು ನನಸಾಗಿಸಲು ತನ್ನ ವೈದ್ಯಕೀಯ ವೃತ್ತಿಯನ್ನು ಸೇನೆಯಲ್ಲಿ ಮುಂದುವರೆಸಲು ಹಂಬಲಿಸಿದರು. ಸಲ್ಲಿಸಿದ ಅರ್ಜಿ ಪುರಸ್ಕೃತಗೊಂಡು 6 ತಿಂಗಳ ಸೈನಿಕ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಪಾಸಿಂಗ್ ಔಟ್ ಪೆರೇಡ್ ನಲ್ಲಿ ತೋಳೀನ ಪದಕವನ್ನು ಹೆತ್ತವರಿಂದ ಪೋಣಿಸಿಕೊಂಡರು. ತರಬೇತಿಯಲ್ಲಿ ಒಟ್ಟು 53 ಅಧಿಕಾರಿಗಳು ಉತ್ತೀರ್ಣರಾಗಿ ತತ್ ಸಂಬಂಧಿತ ಹುದ್ದೆಗೆ ಆಯ್ಕೆಯಾಗಿದ್ದು, ಈ ಪೈಕಿ ಕರ್ನಾಟಕದಿಂದ ಆಯ್ಕೆಯಾದ ಏಕೈಕ ಅಧಿಕಾರಿಯಾಗಿ ಗೌತಮ್ ರೈ ಗಮನ ಸೆಳೆದಿದ್ದಾರೆ. ಅವರು ಅರುಣಾಚಲ ಪ್ರದೇಶದಲ್ಲಿನ ಸೇನಾ ವಿಭಾಗದಲ್ಲಿ ಕರ್ತವ್ಯಕ್ಕೆ ನಿಯುಕ್ತಿಗೊಂಡಿದ್ದಾರೆ.
ಅಪಾರ ಸಂತಸ ತಂದಿದೆ : ಯು ಎಸ್ ಎ ನಾಯಕ್
ಸೇನೆಯಲ್ಲಿ ವೈದ್ಯಾಧಿಕಾರಿ ಸಹಿತ ಸೇನಾಧಿಕಾರಿಯಾಗಿ ಆಯ್ಕೆಯಾದ ಇಂದ್ರಪ್ರಸ್ಥ ವಿದ್ಯಾಲಯದ ಹಿರಿಯ ವಿದ್ಯಾರ್ಥಿ ಗೌತಮ್ ರೈ ಯವರ ದೇಶ ಸೇವೆಯ ತುಡಿತವನ್ನು ಕಂಡಾಗ ಹೃದಯ ತುಂಬಿ ಬಂತು. ದೇಶಕ್ಕೆ ಅನುಪಮ ಕೊಡುಗೆ ಸಲ್ಲಿಸುವ ಸೌಭಾಗ್ಯ ಅವರಿಗೆ ಒದಗಿ ಬರಲಿ. ಭಗವಂತನ ಶ್ರೀ ರಕ್ಷೆ ಸದಾ ಅವರಿಗಿರಲಿ ಎಂದು ಇಂದ್ರಪ್ರಸ್ಥ ವಿದ್ಯಾಲಯದ ಸಂಸ್ಥಾಪಕ ಯು ಎಸ್ ಎ ನಾಯಕ್ ಹರ್ಷ ವ್ಯಕ್ತಪಡಿಸಿದ್ದಾರೆ.