ಮೂರು ದಿನಗಳಿಂದ ನೀರಿಲ್ಲದೆ ಸಂಕಷ್ಟಕ್ಕೀಡಾದ ನಿವಾಸಿಗಳು-ನೆಕ್ಕಿಲಾಡಿ ವಲಯ ಕಾಂಗ್ರೆಸ್ ನಿಂದ ಟ್ಯಾಂಕರ್‌ನಲ್ಲಿ ನೀರು ಪೂರೈಕೆ

0

ಉಪ್ಪಿನಂಗಡಿ: ಮೂರು ದಿನಗಳಿಂದ ನೀರಿಲ್ಲದೆ ತೀವ್ರ ಸಮಸ್ಯೆಗೊಳಗಾಗಿದ್ದ ಬೀತಲಪ್ಪುವಿನ ದಲಿತ ಕಾಲನಿಗೆ 34 ನೆಕ್ಕಿಲಾಡಿ ವಲಯ ಕಾಂಗ್ರೆಸ್ ಅಧ್ಯಕ್ಷೆ ಅನಿ ಮಿನೇಜಸ್ ಅವರ ನೇತೃತ್ವದಲ್ಲಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ನಾಯ್ಕ್ ಅವರ ಸಹಕಾರದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗಿತ್ತು.‌


34 ನೆಕ್ಕಿಲಾಡಿ ಗ್ರಾ.ಪಂ.ನ ಬೀತಲಪ್ಪುವಿನ ದಲಿತ ಕಾಲನಿಗೆ ನೀರು ಪೂರೈಕೆಯ ಮೂಲವಾಗಿದ್ದ ಜೆಜೆಎಂನ ಕೊಳವೆ ಬಾವಿಯಲ್ಲಿ ನೀರು ಖಾಲಿಯಾಗಿತ್ತು. ಇದರಿಂದಾಗಿ ಇಲ್ಲಿನ ಸುಮಾರು 12 ರಿಂದ 15 ಕುಟುಂಬಗಳಿಗೆ ಕಳೆದ ಮೂರು ದಿನಗಳಿಂದ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿತ್ತು. ಗ್ರಾ.ಪಂ. ಕೊಳವೆ ಬಾವಿಯ ಪಂಪನ್ನು ಆಳಕ್ಕೆ ಇಳಿಸಲು ಮುಂದಾಗಿದ್ದರೂ, ಡ್ರಿಲ್ಲಿಂಗ್ ಮಾಡದೇ ಪಂಪ್ ಇಳಿಸಲು ಸಾಧ್ಯವಾಗುತ್ತಿರಲಿಲ್ಲ. ಇಲ್ಲಿ ನೀರಿಲ್ಲದ್ದರಿಂದ ಜನರು ಸಂಕಷ್ಟಕ್ಕೀಡಾಗಿರುವ ಕುರಿತು ಬೀತಲಪ್ಪುವಿನ ಜನತೆ ಮೇ 1ರಂದು 34 ನೆಕ್ಕಿಲಾಡಿ ಕಾಂಗ್ರೆಸ್ ವಲಯಾಧ್ಯಕ್ಷೆ ಅನಿ ಮಿನೇಜಸ್ ಅವರ ಗಮನಕ್ಕೆ ತಂದಿದ್ದರು. ಕೂಡಲೇ ಸ್ಪಂದಿಸಿದ ಇವರು ಈ ಬಗ್ಗೆ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ, ಪಿಡಬ್ಲ್ಯೂಡಿಯ ಪ್ರಥಮ ದರ್ಜೆ ಗುತ್ತಿಗೆದಾರರಾದ ರಾಧಾಕೃಷ್ಣ ನಾಯ್ಕ್ ಅವರ ಗಮನಕ್ಕೆ ತಂದಿದ್ದು, ಅವರ ಸಹಕಾರದಿಂದ ಬೀತಲಪ್ಪುವಿನ ಕಾಲನಿಗೆ ಒಂದು ಟ್ಯಾಂಕರ್ ನೀರನ್ನು ಪೂರೈಸಲಾಯಿತು.
ಈ ಸಂದರ್ಭ 34 ನೆಕ್ಕಿಲಾಡಿ ವಲಯ ಕಾಂಗ್ರೆಸ್ ಅಧ್ಯಕ್ಷೆ ಅನಿ ಮಿನೇಜಸ್, ಬೂತ್ ಅಧ್ಯಕ್ಷ ಅಬ್ದುಲ್ ಖಾದರ್, ಕಾಂಗ್ರೆಸ್ ಕಾರ್ಯಕರ್ತರಾದ ಅರುಣ್, ಗಣೇಶ್ ನಾಯಕ್ ಇದ್ದರು.

ಜೆಜೆಎಂನ ಯೋಜನೆಯಡಿ ಕೊರೆದ ಕೊಳವೆ ಬಾವಿಯಿಂದ ಇಲ್ಲಿಗೆ ನೀರು ಪೂರೈಸಲಾಗುತ್ತಿತ್ತು. ಆದರೆ ಅದರಲ್ಲಿ ಈಗ ನೀರು ಬತ್ತಿ ಹೋಗಿದ್ದು, ಮೂರು ದಿನಗಳಿಂದ ಇಲ್ಲಿನ ಮಂದಿ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಇಲ್ಲಿ ಒಂದೋ ಇದೇ ಕೊಳವೆ ಬಾವಿಯನ್ನು ಡ್ರಿಲ್ಲಿಂಗ್ ಮಾಡಬೇಕು. ಇಲ್ಲದಿದ್ದಲ್ಲಿ ಬೇರೆಯೇ ಕೊಳವೆ ಬಾವಿ ಕೊರೆಸಬೇಕು. ಇದಕ್ಕೆ ಗ್ರಾ.ಪಂ.ನ ಅನುದಾನವಿಲ್ಲ. ಜೆಜೆಎಂನ ನಿರ್ವಹಣೆ ಅವಧಿಯೂ ಮುಗಿದು ಹೋಗಿದೆ. ಶಾಸಕರ ಟಾಸ್ಕ್‌ಪೋರ್ಸ್‌ನ ಅನುದಾನ ಇಲ್ಲಿ ಕೆಲಸಗಳಾಗಬೇಕಿದೆ. ಆದ್ದರಿಂದ ಇಲ್ಲಿಯ ಸಮಸ್ಯೆಯ ಬಗ್ಗೆ ಜಿಲ್ಲಾ ಪಂಚಾಯತ್ ಎಂಜಿನಿಯರ್ ಅವರಿಗೆ ತಿಳಿಸಲಾಗಿದೆ. ಇದಕ್ಕೆ ಪರಿಹಾರ ಒದಗಿಸುವುದಾಗಿ ತಿಳಿಸಿದ್ದಾರೆ.
ಸತೀಶ್ ಬಂಗೇರ
ಅಭಿವೃದ್ಧಿ ಅಧಿಕಾರಿ
34 ನೆಕ್ಕಿಲಾಡಿ ಗ್ರಾ.ಪಂ.

ಬೀತಲಪ್ಪು ಕಾಲನಿಯ ನಿವಾಸಿಗಳಿಗೆ ಮೂರು ದಿನಗಳಿಂದ ನೀರಿನ ಸಮಸ್ಯೆ ಎದುರಾಗಿರೋದು ಇಂದು ನನ್ನ ಗಮನಕ್ಕೆ ಅಲ್ಲಿನ ನಿವಾಸಿಗಳು ತಂದಿದ್ದರು. ನಾನು ಗ್ರಾ.ಪಂ. ಪಿಡಿಒ ಅವರಿಗೆ ನೀರೊದಗಿಸುವ ವ್ಯವಸ್ಥೆ ಏನಾದರೂ ಗ್ರಾ.ಪಂ. ಕಡೆಯಿಂದ ಮಾಡಲಾಗಿದೆಯೇ ಎಂದು ಪ್ರಶ್ನಿಸಿದಾಗ, ಈವರೆಗೆ ಏನೂ ಆಗಿಲ್ಲ ಎಂದರು. ಕೂಡಲೇ ನಾನು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ನಾಯ್ಕ್ ಅವರನ್ನು ಸಂಪರ್ಕಿಸಿ ಸಮಸ್ಯೆಯ ಬಗ್ಗೆ ಹೇಳಿದಾಗ ತಕ್ಷಣವೇ ಸ್ಪಂದಿಸಿದ ಅವರು ಒಂದು ಟ್ಯಾಂಕರ್ ನೀರು ಒದಗಿಸಿ, ಸಹಕರಿಸಿದ್ದು, ಅದನ್ನು ಇಲ್ಲಿನ ನಿವಾಸಿಗಳಿಗೆ ಹಂಚುವ ಕಾರ್ಯ ಮಾಡಲಾಗಿದೆ. ಅಲ್ಲದೇ, ಶಾಸಕರ ಆಪ್ತ ಸಹಾಯಕರಿಗೆ ಇಲ್ಲಿನ ಸಮಸ್ಯೆಯ ಬಗ್ಗೆ ತಿಳಿಸಿ, ಶಾಸಕರ ಟಾಸ್ಕಪೋರ್ಸ್‌ನ ನೇತೃತ್ವದಲ್ಲಿ ತುರ್ತಾಗಿ ಇದರ ಪರಿಹಾರಕ್ಕೆ ಕೇಳಿಕೊಂಡಿದ್ದು, ಅವರು ಕೂಡಾ ಸಂಬಂಧಿಸಿದವರಿಗೆ ಕರೆ ಮಾಡಿ ಸಮಸ್ಯೆ ತಕ್ಷಣವೇ ಸ್ಪಂದಿಸಲು ಸೂಚಿಸಿದ್ದಾರೆ. ಇಂದು ರಾತ್ರಿ ಅಥವಾ ನಾಳೆ ಬೋರ್‌ವೆಲ್ ಗಾಡಿ ಬರಲಿದ್ದು, ಒಂದೋ ಇದ್ದ ಕೊಳವೆ ಬಾವಿಯನ್ನೇ ಡ್ರಿಲ್ಲಿಂಗ್ ಮಾಡುವುದು ಅಥವಾ ಹೊಸ ಕೊಳವೆ ಬಾವಿಯನ್ನು ಕೊರೆಯಲಾಗುತ್ತದೆ.
ಅನಿ ಮಿನೇಜಸ್
ಅಧ್ಯಕ್ಷರು, 34 ವಲಯ ಕಾಂಗ್ರೆಸ್

LEAVE A REPLY

Please enter your comment!
Please enter your name here