ಅಂಬಿಕಾ ಮಹಾವಿದ್ಯಾಲಯದಲ್ಲಿ ಸರ್ಟಿಫಿಕೇಟ್ ಕೋರ್ಸ್ ಉದ್ಘಾಟನೆ

0

ಜೀವನ ಕೌಶಲ್ಯ ಕರಗತ ಮಾಡಿಕೊಳ್ಳುವುದು ಅಗತ್ಯ : ಐತ್ತಪ್ಪ ನಾಯ್ಕ್


ಪುತ್ತೂರು: ಪಠ್ಯದ ಸಂಗತಿಗಳಷ್ಟೇ ಜೀವನವನ್ನು ರೂಪಿಸುವುದಿಲ್ಲ. ಪಠ್ಯದ ಜತೆ ಜತೆಗೆ ನಾವು ಯಾವ ಬಗೆಯ ಕೌಶಲ್ಯಗಳನ್ನು ನಮ್ಮದಾಗಿಸಿಕೊಳ್ಳುತ್ತೇವೆ ಎಂಬುದು ನಮ್ಮ ಭವಿಷ್ಯಕ್ಕೆ ಪೂರಕವೆನಿಸುತ್ತದೆ. ಅನೇಕ ವಿದ್ಯಾರ್ಥಿಗಳು ಅಂಕ ಗಳಿಸುವಲ್ಲಿ ಸೋತರೂ ತಮ್ಮಲ್ಲಿರುವ ಕೌಶಲ್ಯಗಳಿಂದಾಗಿ ಬದುಕಿನಲ್ಲಿ ಯಶಸ್ಸನ್ನು ಕಂಡ ನೂರಾರು ಉದಾಹರಣೆಗಳಿವೆ. ಹಾಗಾಗಿ ಜೀವನ ಕೌಶಲಗಳ ಬಗೆಗೆ ವಿದ್ಯಾರ್ಥಿಗಳು ಗಂಭೀರವಾಗಿ ಆಲೋಚಿಸಬೇಕು ಎಂದು ವಿಶ್ರಾಂತ ಮುಖ್ಯೋಪಾಧ್ಯಾಯ ಬಿ.ಐತ್ತಪ್ಪ ನಾಯ್ಕ್ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ಪರ್ಸನಲ್ ಡೆವೆಲಪ್‌ಮೆಂಟ್ ಅಂಡ್ ಲೈಫ್ ಸ್ಕಿಲ್ಸ್ ಎಂಬ ವಿಷಯದ ಮೇಲೆ ಹದಿನಾರು ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗಾಗಿ ಆರಂಭಿಸಲಾದ ಸರ್ಟಿಫಿಕೇಟ್ ಕೋಸ್ ಅನ್ನು ಉದ್ಘಾಟಿಸಿ ಗುರುವಾರ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಅವಕಾಶಗಳನ್ನು ಬಳಸಿಕೊಳ್ಳುವುದು ಜಾಣತನವೆನಿಸುತ್ತದೆ. ಬದುಕಿನ ವಿವಿಧ ಘಟ್ಟಗಳಲ್ಲಿ ಒಂದಿಲ್ಲೊಂದು ಅವಕಾಶಗಳು ನಮ್ಮ ಎದುರಾಗುತ್ತವೆ. ಆದರೆ ಅಂತಹ ಅವಕಾಶಗಳನ್ನು ಅವಜ್ಞೆಯ ಕಾರಣಕ್ಕಾಗಿ ನಾವು ಕಳೆದುಕೊಳ್ಳುತ್ತಾ ಬರುತ್ತೇವೆ. ಜೀವನದ ಸಂಧ್ಯಾಕಾಲದಲ್ಲಿ ಕುಳಿತು ಹಿನ್ನೋಟಗೈದಾಗ ಕಳೆದುಕೊಂಡ ಅವಕಾಶಗಳ ಬಗೆಗೆ ಖಿನ್ನರಾಗುವ ಸ್ಥಿತಿ ಒದಗಿಬರುತ್ತದೆ. ಆದ್ದರಿಂದ ಅವಕಾಶ ದೊರೆತಾಗಲೆಲ್ಲಾ ಬಾಚಿಕೊಳ್ಳುವುದಕ್ಕೆ ನಾವು ಸನ್ನದ್ಧರಾಗಿರಬೇಕು ಎಂದು ಕರೆ ನೀಡಿದರು.


ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್.ನಟ್ಟೋಜ, ಕಾಲೇಜಿನ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ, ಕಾಲೇಜಿನ ಐಕ್ಯುಎಸಿ ಘಟಕದ ಸಂಯೋಜಕ ಚಂದ್ರಕಾಂತ ಗೋರೆ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ತೃಪ್ತಿ ಮಯ್ಯಾಳ ಪ್ರಾರ್ಥಿಸಿ, ವಿದ್ಯಾರ್ಥಿನಿ ಅಕ್ಷಿತಾ ವಂದಿಸಿದರು. ವಿದ್ಯಾರ್ಥಿನಿ ದೀಪ ಸ್ವಾಗತಿಸಿ, ಸ್ಪೂರ್ತಿ ಕಾರ್ಯಕ್ರಮ ನಿರ್ವಹಿಸಿದರು.


ಸರ್ಟಿಫಿಕೇಟ್ ಕೋರ್ಸ್ :
ವಿದ್ಯಾರ್ಥಿಗಳ ರಜಾ ಅವಧಿಯ ಸದ್ಬಳಕೆಗೆ ಈ ಸರ್ಟಿಫಿಕೇಟ್ ಕೋರ್ಸ್ ಅತ್ಯಂತ ಉಪಯೋಗಿ. ಜೀವನಕ್ಕೆ ಬೇಕಾದ ಎಲ್ಲಾ ಕೌಶಲಗಳನ್ನು ಈ ಸರ್ಟಿಫಿಕೇಟ್ ಕೋರ್ಸ್ ಒದಗಿಸಿಕೊಡುತ್ತದೆ. ಸಂವಹನ ಕಲೆ, ಇಂಗ್ಲಿಷ್ ಸಂವಹನ, ಕಾನೂನು ಜ್ಞಾನ, ಒತ್ತಡ ನಿರ್ವಹಣಾ ತಂತ್ರಗಾರಿಕೆ, ನಾಯಕತ್ವ ಗುಣ, ಬ್ಯಾಂಕಿಂಗ್ ಜ್ಞಾನ, ಬರವಣಿಗೆ ಕಲೆಯೇ ಮೊದಲಾದ ಹತ್ತು ಹಲವು ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಇಲ್ಲಿ ಕಲಿಸಿಕೊಡಲಾಗುತ್ತದೆ. ಪ್ರತಿಯೊಂದು ವಿಭಾಗದಲ್ಲೂ ಚಟುವಟಿಕೆ, ಪ್ರಾಯೋಗಿಕ ಪಾಠದ ಮೂಲಕವೇ ಎಲ್ಲವನ್ನೂ ಹೇಳಿಕೊಡುವುದರಿಂದ ವಿದ್ಯಾರ್ಥಿಗಳ ಒಟ್ಟು ವ್ಯಕ್ತಿತ್ವ ಹಾಗೂ ಜ್ಞಾನದ ಮೇಲೆ ಈ ಸರ್ಟಿಫಿಕೇಟ್ ಕೋರ್ಸ್ ಪರಿಣಾಮ ಮಾಡಲಿದೆ.


ಪತ್ರಿಕೋದ್ಯಮ, ಭಾಷೆ, ಮನಃಶಾಸ್ತ್ರ, ವಾಣಿಜ್ಯ ಹಾಗೂ ಕಾನೂನು ವಿಷಯಗಳಿಂದ ನಿತ್ಯ ಬದುಕಿಗೆ ಅನಿವಾರ್ಯವಾದ ಸಂಗತಿಗಳನ್ನು ಆಯ್ದು ಈ ಸರ್ಟಿಫಿಕೇಟ್ ಕೋರ್ಸ್‌ನಲ್ಲಿ ಪಠ್ಯಕ್ರಮವಾಗಿ (ಸಿಲಬಸ್) ಅಳವಡಿಸಲಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಔದ್ಯೋಗಿಕ ಬದುಕಿಗೂ ಈ ಕಲಿಕೆ ಪೂರಕವೆನಿಸಲಿದೆ. ಉದ್ಯೋಗ ಜಗತ್ತಿಗೆ ಕಾಲಿಡುವಾಗ ಸಂದರ್ಶನವನ್ನು ಎದುರಿಸಬೇಕಾದ ಬಗೆಗಳ ಕುರಿತೂ ಇಲ್ಲಿ ಪ್ರಾಯೋಗಿಕ ಪಾಠವಿದೆ. ಸಮೂಹ ಚರ್ಚೆಯಲ್ಲಿ ಭಾಗವಹಿಸಬೇಕಾದ ವಿಧಾನದ ಬಗೆಗೂ ತಿಳುವಳಿಕೆ ನೀಡಲಾಗುತ್ತದೆ.
ವರದಿಗಾರಿಕೆ, ವೀಡಿಯೋ ಎಡಿಟಿಂಗ್, ರೀಲ್ಸ್ ತಯಾರಿಯಂತಹ ಆಕರ್ಷಕ ವಿಚಾರಗಳನ್ನೂ ಈ ಕೋರ್ಸ್ ತಿಳಿಸಿಕೊಡುತ್ತದೆ. ಸಣ್ಣ ಸಣ್ಣ ಕುತೂಹಲಭರಿತ ವೀಡಿಯೋಗಳನ್ನು ಮಾಡಿ ಯೂಟ್ಯೂಬ್ ನಂತಹ ಸಾಮಾಜಿಕ ಮಾಧ್ಯಮಗಳ ಮೂಲಕ ಹಂಚಿ, ಸಣ್ಣ ಮಟ್ಟಿನ ಆದಾಯ ಗಳಿಸುವ ಕಲೆಯನ್ನು ಈ ಕೋರ್ಸ್ ಹೇಳಿಕೊಡಲಿದೆ. ಶೇರು ಮಾರುಕಟ್ಟೆಯ ಬಗೆಗಿನ ಕನಿಷ್ಟ ಜ್ಞಾನವನ್ನು ಇದು ನೀಡಲಿದೆ.


ಎಸ್.ಎಸ್.ಎಲ್.ಸಿ ಅಥವ ಅದಕ್ಕಿಂತ ಹೆಚ್ಚಿನ ತರಗತಿಗಳಲ್ಲಿ ಅಧ್ಯಯನ ನಡೆಸುತ್ತಿರುವವರು ಈ ಕೋರ್ಸ್‌ಗೆ ಹಾಜರಾಗಬಹುದು. ಇನ್ನು ಕೆಲವು ಅವಕಾಶಗಳು ವಿದ್ಯಾರ್ಥಿಗಳಿಗೆ ಲಭ್ಯವಿದ್ದು ಆಸಕ್ತರು 9449102080 ಸಂಖ್ಯೆಗೆ ಕರೆ ಮಾಡಿ ದಾಖಲಾತಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.

LEAVE A REPLY

Please enter your comment!
Please enter your name here