ಪುತ್ತೂರು: ಸುಳ್ಯದಿಂದ ಗಾಯಾಳುವೊಬ್ಬರನ್ನು ಮಂಗಳೂರು ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ಮತ್ತು ವಿರುದ್ಧ ದಿಕ್ಕಿನಿಂದ ಬಂದ ಕಾರಿನ ನಡುವೆ ಅಪಘಾತ ಸಂಭವಿಸಿದ ಘಟನೆ ಮೇ 2ರಂದು ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಕಬಕದಲ್ಲಿ ನಡೆದಿದೆ.
ಸುಳ್ಯ ಕೆವಿಜಿ ಆಸ್ಪತ್ರೆಯಿಂದ ರೋಗಿಯೊಬ್ಬರನ್ನು ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ಆಂಬುಲೆನ್ಸ್ ಮತ್ತು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ನ್ಯಾನೊ ಕಾರು ನಡುವೆ ಡಿಕ್ಕಿ ಸಂಭವಿಸಿದೆ.ಡಿಕ್ಕಿ ರಭಸಕ್ಕೆ ಎರಡೂ ವಾಹನಗಳಿಗೆ ಹಾನಿಯಾಗಿದೆ.ಇದೇ ಸಂದರ್ಭ ನ್ಯಾನೋ ಕಾರಿಗೆ ಇನ್ನೊಂದು ಕಾರು ಡಿಕ್ಕಿಯಾಗಿದೆ.ಘಟನೆಯಿಂದ ರೋಗಿ ಮತ್ತು ಕೆಲವರಿಗೆ ಸಣ್ಣಪುಟ್ಟ ಗಾಯವಾಗಿದೆ.ಘಟನೆಯಿಂದ ಕಬಕದಲ್ಲಿ ಸುಮಾರು ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು ಎಂದು ತಿಳಿದು ಬಂದಿದೆ.
ಸುಳ್ಯದ ಅರಂತೋಡು ಗ್ರಾಮದ ಉಳುವಾರು ಎಂಬಲ್ಲಿ ಮನೆಯ ಬಾವಿಗೆ ಅಳವಡಿಸಿದ್ದ ಮೋಟರ್ ಪಂಪಿನ್ ಪುಟ್ ಬಾಲ್ ಸರಿಪಡಿಸಲೆಂದು ಬಾವಿಗೆ ಇಳಿದ ತರುಣ್ ಎಂಬವರು ಹಗ್ಗದ ಸಹಾಯದಿಂದ ಬಾವಿಯಿಂದ ಮೇಲೆ ಬರುತ್ತಿದ್ದ ಸಂದರ್ಭದಲ್ಲಿ ಬಾವಿಯ ಬದಿಯಲ್ಲಿದ್ದ ಕಲ್ಲು ಕುಸಿದು ತರುಣ್ ಅವರ ತಲೆಗೆ ಬಿದ್ದ ಪರಿಣಾಮ ಅವರು ಬಾವಿ ನೀರಿಗೆ ಬಿದ್ದು ತಲೆಗೆ ಗಂಭೀರ ಗಾಯವಾಗಿತ್ತು.ಅಲ್ಲಿದ್ದವರು ಬಾವಿಗಿಳಿದು ತರುಣ್ ಅವರನ್ನು ಮೇಲೆತ್ತಿ ಸುಳ್ಯಕ್ಕೆ ಕೆವಿಜಿ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯುವ ವೇಳೆ ಕಬಕದಲ್ಲಿ ಅವರಿದ್ದ ಅಂಬ್ಯುಲೆನ್ಸ್ ಮತ್ತು ಕಾರಿನ ಮಧ್ಯೆ ಅಪಘಾತ ಸಂಭವಿಸಿತ್ತು.ಇದರಿಂದಾಗಿ ಅಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತವಾಯಿತು.ಕೂಡಲೇ ಬದಲಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿ ಗಾಯಾಳು ತರುಣ್ ಅವರನ್ನು ಮಂಗಳೂರಿಗೆ ಸಾಗಿಸುವ ವೇಳೆ ಕಲ್ಲಡ್ಕ ಎಂಬಲ್ಲಿ ಆ ಆಂಬ್ಯುಲೆನ್ಸ್ ಕೆಲ ಸಮಯ ಕೈಕೊಟ್ಟಿತ್ತಾದರೂ ಬಳಿಕ ಸರಿಯಾಗಿ ತರುಣ್ ಅವರನ್ನು ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.