ಇಲಾಖಾ ವಿಚಾರಣೆ ಮುಂದುವರಿಸಿ ಅಮಾನತು-ರಾಯಚೂರಿಗೆ ವರ್ಗಾವಣೆಗೆ ಕೆಎಟಿ ತಡೆ
ಕರ್ತವ್ಯಕ್ಕೆ ಹಾಜರಾದವರಿಗೆ ಸಸ್ಪೆನ್ಶನ್ ಆರ್ಡರ್
ಪುತ್ತೂರು: ಪುತ್ತೂರು ಎಪಿಎಂಸಿಯಲ್ಲಿ ಸಹಾಯಕ ಕಾರ್ಯದರ್ಶಿಯಾಗಿದ್ದ ರಾಮಚಂದ್ರ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಕರ್ನಾಟಕ ಕೃಷಿ ಮಾರಾಟ ಇಲಾಖೆಯ ನಿರ್ದೇಶಕ ಜಿ.ಎಂ.ಗಂಗಾಧರ ಸ್ವಾಮಿ ಅವರು ಮೇ.2ರಂದು ಆದೇಶ ಹೊರಡಿಸಿದ್ದಾರೆ.ರಾಮಚಂದ್ರ ಅವರನ್ನು ರಾಯಚೂರಿಗೆ ವರ್ಗಾವಣೆ ಗೊಳಿಸಲಾಗಿತ್ತಾದರೂ ಅದಕ್ಕೆ ಕೆಎಟಿ ತಡೆಯಾಜ್ಞೆ ನೀಡಿದ್ದ ಹಿನ್ನೆಲೆಯಲ್ಲಿ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದ ಬೆನ್ನಲ್ಲೇ ಅವರಿಗೆ ಅಮಾನತು ಆದೇಶ ಜಾರಿಯಾಗಿದೆ.
ಈ ಹಿಂದೆ ಪುತ್ತೂರು ಎಪಿಎಂಸಿಯಲ್ಲಿ ಸಹಾಯಕ ಕಾರ್ಯದರ್ಶಿಯಾಗಿದ್ದ ರಾಮಚಂದ್ರ ಅವರು ಸಮಿತಿಯ ತರಕಾರಿ ವ್ಯಾಪಾರಸ್ಥರಿಗೆ ಪದೇ ಪದೇ ಕಿರುಕುಳ ನೀಡುತ್ತಿದ್ದುದಲ್ಲದೆ ತರಕಾರಿ ವಾಹನಗಳ ಒಳಪ್ರವೇಶವನ್ನು ನಿರಾಕರಿಸುತ್ತಿರುವುದು ಹಾಗೂ ಹಣಕ್ಕೆ ಬೇಡಿಕೆ ಇಟ್ಟಿರುವುದು, ಪರವಾನಿಗೆಗಳನ್ನು ನಿಗದಿತ ಸಮಯಕ್ಕೆ ನೀಡದೇ ಇರುವುದರಿಂದ ವ್ಯಾಪಾರ ನಡೆಸಲು ಸಾಧ್ಯವಾಗದೇ ವ್ಯವಹಾರದಲ್ಲಿ ನಷ್ಟ ಉಂಟಾಗಿದೆ ಎಂದು ಪ್ರಾಂಗಣದ ತರಕಾರಿ ವ್ಯಾಪಾರಸ್ಥರು ಕಳೆದ ಜನವರಿ 4ರಂದು ಕೃಷಿ ಮಾರಾಟ ಇಲಾಖೆಯ ನಿರ್ದೇಶಕರಿಗೆ ದೂರು ಸಲ್ಲಿಸಿದ್ದರು.
ನೊಟೀಸ್ ಜಾರಿ: ರಾಮಚಂದ್ರ ಅವರ ಕಾರ್ಯವೈಖರಿ ಕುರಿತು ಸಮಿತಿಯ ವರ್ತಕರು ಸಲ್ಲಿಸಿರುವ ದೂರಿನಲ್ಲಿ ಪ್ರಸ್ತಾಪಿಸಿರುವ ಅಂಶಗಳ ಹಿನ್ನೆಲೆಯಲ್ಲಿ, 1957ರ ಕರ್ನಾಟಕ ನಾಗರಿಕ ಸೇವಾ(ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು)ನಿಯಮಗಳ 11ನೇ ನಿಯಮದಡಿಯಲ್ಲಿ ಅವರಿಗೆ ತಿಳುವಳಿಕೆ ಪತ್ರ ಮತ್ತು ನೊಟೀಸ್ ಜಾರಿ ಮಾಡಲಾಗಿತ್ತು.
ವಿಚಾರಣೆ ಮುಂದುವರಿಸಿ ಸೇವೆಯಿಂದ ಅಮಾನತು: ರಾಮಚಂದ್ರ ಅವರ ವಿರುದ್ಧ ದೋಷಾರೋಪಣಾ ಪಟ್ಟಿಯಲ್ಲಿ ಆರೋಪಿಸಿರುವ ಅಂಶಗಳಂತೆ, ಅವರ ವಿರುದ್ಧದ ಇಲಾಖಾ ವಿಚಾರಣೆಯನ್ನು ಮುಂದುವರಿಸಿ,ತಕ್ಷಣದಿಂದ ಜಾರಿಗೆ ಬರುವಂತೆ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.1957ರ ಕರ್ನಾಟಕ ನಾಗರಿಕ ಸೇವಾ(ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು)ನಿಯಮಗಳ 10ನೇ ನಿಯಮದ 1ನೇ ಉಪನಿಯಮದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಆಡಳಿತಾತ್ಮಕ ಹಿತದೃಷ್ಟಿಯಿಂದ ಇಲಾಖಾ ವಿಚಾರಣೆಯನ್ನು ಮುಂದುವರಿಸುತ್ತಾ, ತಕ್ಷಣದಿಂದ ಜಾರಿಗೆ ಬರುವಂತೆ ರಾಮಚಂದ್ರ ಅವರನ್ನು ಸೇವೆಯಿಂದ ಅಮಾನತುಗೊಳಿಸಿರುವುದಾಗಿ ಕರ್ನಾಟಕ ರಾಜ್ಯ ಕೃಷಿ ಮಾರಾಟ ಇಲಾಖೆಯ ನಿರ್ದೇಶಕರು ಮತ್ತು ಶಿಸ್ತುಪ್ರಾಧಿಕಾರಿಗಳೂ ಆಗಿರುವ ಜಿ.ಎಂ.ಗಂಗಾಧರಸ್ವಾಮಿ ಆದೇಶದಲ್ಲಿ ತಿಳಿಸಿದ್ದಾರೆ.
ಪುತ್ತೂರು ಎಪಿಎಂಸಿಯಲ್ಲಿ ಸಹಾಯಕ ಕಾರ್ಯದರ್ಶಿಯಾಗಿದ್ದ ರಾಮಚಂದ್ರ ಅವರ ವಿರುದ್ಧ ಪ್ರಾಂಗಣದ ತರಕಾರಿ ವ್ಯಾಪಾರಸ್ಥರು ನೀಡಿದ್ದ ದೂರಿನ ತನಿಖೆಗಾಗಿ ಅಧಿಕಾರಿಗಳ ವಿಶೇಷ ತಂಡವೊಂದನ್ನು ರಚಿಸಲಾಗಿತ್ತು.ಈ ಮಧ್ಯೆ, ರಾಮಚಂದ್ರ ಅವರನ್ನು 2023ರ ಜ.16ರಿಂದ ಮುಂದಿನ 2 ತಿಂಗಳ ತನಕ ಅಥವಾ ಮುಂದಿನ ಆದೇಶದ ತನಕ ಕಡ್ಡಾಯ ರಜೆಯ ಮೇಲೆ ತೆರಳುವಂತೆ ಕೃಷಿ ಮಾರಾಟ ಇಲಾಖೆಯ ನಿರ್ದೇಶಕರು ಆದೇಶ ನೀಡಿದ್ದರು.ಅವರ ಮೇಲಿನ ದೂರಿನ ಕುರಿತು ತನಿಖೆಗಾಗಿ ನೇಮಕವಾಗಿದ್ದ ಅಧಿಕಾರಿಗಳ ವಿಶೇಷ ತಂಡ ಪುತ್ತೂರು ಎಪಿಎಂಸಿಗೆ ಪರಿಶೀಲನೆಗೆ ಆಗಮಿಸಿದ್ದರು.ರಾಮಚಂದ್ರ ಅವರ ವಿರುದ್ಧದ ದೂರಿನ ಇಲಾಖಾ ವಿಚಾರಣೆ ನಡೆಸಲು, ಆಡಳಿತಾತ್ಮಕ ಹಿತದೃಷ್ಟಿಯಿಂದ ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಖಾಲಿ ಇರುವ ಹಿರಿಯ ಮಾರುಕಟ್ಟೆ ಮೇಲ್ವಿಚಾರಕ ಹುದ್ದೆಗೆ ಅವರನ್ನು ವರ್ಗಾಯಿಸಿ ಕೃಷಿ ಮಾರಾಟ ಇಲಾಖೆ ಆದೇಶ ಹೊರಡಿಸಿತ್ತು.ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ, ಕೇಂದ್ರ ಕಚೇರಿಗೆ ವರದಿಯನ್ನು ಸಲ್ಲಿಸಲು ಪುತ್ತೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಗೆ ಆದೇಶದಲ್ಲಿ ಸೂಚಿಸಲಾಗಿತ್ತು.ಆದರೆ ರಾಮಚಂದ್ರ ಅವರು ರಾಯಚೂರಿನಲ್ಲಿ ಕರ್ತವ್ಯಕ್ಕೆ ಹಾಜರಾಗದೆ, ತನ್ನ ವರ್ಗಾವಣೆಯ ವಿರುದ್ಧ ಕರ್ನಾಟಕ ಆಡಳಿತಾತ್ಮಕ ನ್ಯಾಯಾಲಯ(ಕೆಎಟಿ)ಕ್ಕೆ ದೂರು ಸಲ್ಲಿಸಿದ್ದರು.ಕೆಎಟಿ ಅವರ ವರ್ಗಾವಣೆ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದರಿಂದ ಮೇ 2ರಂದು ಬೆಳಿಗ್ಗೆ ಅವರು ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದ ಪುತ್ತೂರು ಎಪಿಎಂಸಿ ಸಹಾಯಕ ಕಾರ್ಯದರ್ಶಿಯಾಗಿ ಕರ್ತವ್ಯಕ್ಕೆ ಹಾಜರಾಗಿದ್ದರು.ಮಧ್ಯಾಹ್ನ ಗಂಟೆ 12ಕ್ಕೆ ಅವರ ಅಮಾನತು ಆದೇಶ ಬಂದಿದೆ.ವರ್ಗಾವಣೆ ಆದೇಶಕ್ಕೆ ಕೆಎಟಿ ತಡೆ ನೀಡಿದ್ದರೂ ಸೇವೆಯಿಂದ ಅಮಾನತುಗೊಳಿಸಲಾದ ಹಿನ್ನೆಲೆಯಲ್ಲಿ ಅವರು ಎಪಿಎಂಸಿಯಿಂದ ನಿರ್ಗಮಿಸಿದರು.
ಅಮಾನತು ಆದೇಶ ಬಂದಿದೆ
ರಾಮಚಂದ್ರ ಅವರ ಅಮಾನತು ಆದೇಶ ಮಧ್ಯಾಹ್ನ ಸುಮಾರು 12.30 ಗಂಟೆಗೆ ಬಂದಿದೆ. ಈಗ ನಾನು ಚುನಾವಣೆ ಕರ್ತವ್ಯದಲ್ಲಿದ್ದೇನೆ.ನಾಳೆ-ನಾಡಿದ್ದು ಆದೇಶದ ಪ್ರತಿ ಕೊಡುತ್ತೇನೆ. ಅವರಿಗೆ ವರ್ಗಾವಣೆ ಆಗಿತ್ತು.ಆದರೆ ಅವರು ಕೆಎಟಿಗೆ ಅರ್ಜಿ ಸಲ್ಲಿಸಿದ್ದರು.ಅಲ್ಲಿ ವರ್ಗಾವಣೆ ಆದೇಶಕ್ಕೆ ತಡೆಯಾಜ್ಞೆ ತಂದಿದ್ದು,ಅವರಿಗೆ ಈ ಹಿಂದಿನ ಹುದ್ದೆಗೆ ಹಾಜರಾಗುವಂತೆ ಕೋರ್ಟ್ ಆದೇಶ ನೀಡಿದೆ.ಹಾಗಾಗಿ ಅವರು ಮೇ 2ರಂದು ಬೆಳಿಗ್ಗೆ ಕರ್ತವ್ಯಕ್ಕೆ ಹಾಜರಾಗಿದ್ದರು.ಮಧ್ಯಾಹ್ನ ಗಂಟೆ 12.30ಕ್ಕೆ ಅಮಾನತು ಆದೇಶವು ಬಂದಿದೆ-
ಎಂ.ಸಿ.ಬಡಗಾನುರು, ಎಪಿಎಂಸಿ ಕಾರ್ಯದರ್ಶಿ