ಪುತ್ತೂರು: ಬೆಟ್ಟಂಪಾಡಿ ಗ್ರಾ.ಪಂ ವ್ಯಾಪ್ತಿಯ ಗೋಳಿಪದವು ಎಂಬಲ್ಲಿ ಜಲ ಜೀವನ್ ಮಿಷನ್ ಯೋಜನೆಯ ಪೈಪ್ಲೈನ್ ಕಾಮಗಾರಿಯ ಅವಾಂತರದಿಂದಾಗಿ ಅಲ್ಲಿನ ನಿವಾಸಿಗಳು ಕುಡಿಯಲು ನೀರಿಲ್ಲದೆ ಪರದಾಡುವಂತಾಗಿದೆ.
ಜಲಜೀವನ್ ಮಿಷನ್ ಯೋಜನೆಯಲ್ಲಿ ಮನೆ ಮನೆಗೆ ನೀರು ಹರಿಸುವ ಯೋಜನೆಯಲ್ಲಿ ಬೆಟ್ಟಂಪಾಡಿ ಗ್ರಾ.ಪಂ ವ್ಯಾಪ್ತಿಯ ಇರ್ದೆ ಗ್ರಾಮದ ಗೋಳಿಪದವುನಲ್ಲಿ ಕಳೆದ ಎರಡು ತಿಂಗಳ ಹಿಂದೆ ಪೈಪ್ಲೈನ್ ಕಾಮಗಾರಿ ನಡೆಸಲಾಗಿತ್ತು. ಕಾಮಗಾರಿ ನಡೆದ ಕೆಲವೇ ದಿನಗಳಲ್ಲಿ ಪೈಪ್ ಒಡೆದು ನೀರು ಪೋಲಾಗುತ್ತಿತ್ತು. ಇದರಿಂದಾಗಿ ಆ ಭಾಗದ ನಿವಾಸಿಗಳು ನೀರಿಲ್ಲದೆ ಪರದಾಡುವಂತಾಗಿದೆ. ಸಮಸ್ಯೆ ಕುರಿತು ಸಂಬಂಧಪಟ್ಟು ಅಽಕಾರಿಗಳು, ಗುತ್ತಿಗೆದಾರರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಅವರು ಬೇಜವಾಬ್ದಾರಿಯಿಂದ ಮಾತನಾಡುತ್ತಿದ್ದಾರೆ. ಈಗ ಕುಡಿಯಲು ನೀರಿಲ್ಲದೆ ಸಂಕಷ್ಟ ಎದುರಿಸುತ್ತಿದ್ದೇವೆ. ಈ ಭಾಗದಲ್ಲಿ ಸುಮಾರು 30 ಮನೆಗಳಿದ್ದು ನಾವು ದೂರದೂರುಗಳಿಂದ ಪಿಕಪ್ ಮೂಲಕ ನೀರು ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕಾಮಗಾರಿಯು ಕಳಪೆಯಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಅಲ್ಲಿನ ನಿವಾಸಿಗಳು ಎಚ್ಚರಿಸಿದ್ದಾರೆ.