ಬಡಗನ್ನೂರುಃ: ಬಡಗನ್ನೂರು ಗ್ರಾಮದ ಪಟ್ಟೆ ಎಂಬಲ್ಲಿರುವ ಪಾಲುಬಿದ್ದ ಕಿಂಡಿ ಅಣೆಕಟ್ಟನ್ನು ತೆರವುಗೊಳಿಸುವಂತೆ ದ ಕ ಜಿಲ್ಲಾಧಿಕಾರಿಗಳು ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಿದ್ದರೂ ತೆರವುಗೊಳಿಸದಿರುವುದು ಕೃಷಿ ಭೂಮಿಗೆ ಹಾನಿಕಾರಕವಾಗಿ ಪರಿಣಮಿಸಿದೆ. ಈ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟೆಯಲ್ಲಿರುವ ಈ ಕಿಂಡಿ ಅಣೆಕಟ್ಟು ಸುಮಾರು 50 ವರ್ಷಗಳ ಹಿಂದೆ ಕೃಷಿ ಬಳಕೆಗೆ ಲೋಕೋಪಯೋಗಿ ಇಲಾಖೆಯ ವತಿಯಿಂದ ನಿರ್ಮಾಣಮಾಡಲಾಗಿದೆ.ಪ್ರಸ್ತುತ ಉಪಯೋಗ ಶೂನ್ಯವಾಗಿದೆ. ಸೂಕ್ತ ನಿರ್ವಾಹಣೆಯಿಲ್ಲದೆ ಅಣೆಕಟ್ಟು ಪಾಲುಬಿದ್ದಿದೆ .ಮಳೆಗಾಲದಲ್ಲಿ ತ್ಯಾಜ್ಯಗಳು ಅಣೆಕಟ್ಟು ಬಳಿ ರಾಶಿ ಬಿದ್ದು ಮಳೆ ನೀರು ಹರಿದು ಪಕ್ಕದ ರಸ್ತೆ ಮತ್ತು ಕೃಷಿ ತೋಟಗಳಿಗೆ ತೊಂದರೆಯಾಗುತ್ತಿದೆ.ಅಣೆಕಟ್ಟು ದುರಸ್ತಿ ಮಾಡಲು ಮತ್ತು ಹಲಗೆ ಜೋಡಿಸಲು ಇಲಾಖೆಯಿಂದ ಅನುದಾನ ನೀಡುತ್ತಿಲ್ಲ. ಈ ಕಾರಣಕ್ಕೆ ಅಣೆಕಟ್ಟಿಗೆ ಹಲಗೆ ಜೋಡಿಸುವ ಕಾರ್ಯ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ.
ಡಿ ಸಿ ಗೆ ಮನವಿ
ಕಳೆದ 2 ವರ್ಷ ಮೊದಲು ಬಡಗನ್ನೂರು ಗ್ರಾಮದಲ್ಲಿ ಗ್ರಾಮವಾಸ್ತವ್ಯ ಹೂಡಿದ್ದ ದ .ಕ ಜಿಲ್ಲಾಧಿಕಾರಿಗಳಲ್ಲಿ ಕಿಂಡಿ ಅಣೆಕಟ್ಟನ್ನು ತೆರವುಮಾಡುವಂತೆ ಮನವಿ ಮಾಡಲಾಗಿತ್ತು.ಸ್ಥಳದಲ್ಲಿದ್ದ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ಗಳಿಂದ ಮಾಹಿತಿ ಪಡೆದು ,ಕಿಂಡಿ ಅಣೆಕಟ್ಟನ್ನು ತೆರವು ಮಾಡುವಂತೆ ಸೂಚನೆ ನೀಡಿದ್ದರು. ಕಿಂಡಿ ಅಣೆಕಟ್ಟು ತೆರವು ಮಾಡಿದರೆ ಮಳೆಗಾಲದಲ್ಲಿ ಮಳೆ ನೀರು ರಸ್ತೆ ಮೇಲೆ ಹರಿಯುವುದು ಮತ್ತು ಕೃಷಿ ತೋಟಗಳಿಗೆ ನುಗ್ಗುವುದನ್ನು ತಡೆಯಬಹುದಾಗಿದೆ ಎಂದು ಕೃಷಿಕರು ಮಾಹಿತಿ ನೀಡಿದ್ದು ತೆರವಿಗೆ ಸೂಚನೆ ನೀಡಿದ್ದರು. ಆದರೆ ಈ ತನಕ ಪಾಳು ಬಿದ್ದ ಕಿಂಡಿ ಅಣೆಕಟ್ಟು ತೆರವು ಕಾರ್ಯಕ್ಕೆ ಮುಂದಾಗಿಲ್ಲ. ಮುಂದೆ ಮಳೆ ಸಮೀಪಿಸುತ್ತಿರುದರಿಂದ ಮಳೆಗಾಲ ಪ್ರಾರಂಭದ ಮುಂಚಿತವಾಗಿ ತೆರವು ಕಾರ್ಯ ಕೈಗೊಂಡು ಕೃಷಿ ಭೂಮಿಗೆ ಉಂಟಾಗುವ ಹಾನಿಯಿಂದ ರಕ್ಷಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.