ಪುತ್ತೂರು:ಕುಡಿಯುವ ನೀರಿನ ಸಮಸ್ಯೆಯನ್ನು ತಪ್ಪಿಸಲು ಪುತ್ತೂರು ಉಪವಿಭಾಗಕ್ಕೆ ಸಂಬಂಧಿಸಿ ಪ್ರಾಚೀನ ಕೆರೆಗಳಿಗೆ ಹೊಸರೂಪ ನೀಡಲು ಇಲಾಖೆ ಮುಂದಾಗಿದ್ದು ಪುತ್ತೂರು ಉಪವಿಭಾಗಾಧಿಕಾರಿ ಜುಬಿನ್ ಮೊಹಪಾತ್ರ ಅವರು ತಾಲೂಕಿನ 29 ಕೆರೆಗಳ ಪರಿಶೀಲನೆಗೆ ಮುಂದಾಗಿದ್ದಾರೆ.ಮೇ.8ರಂದು ಅವರು ಆರ್ಯಾಪಿನಲ್ಲಿ ಕೆರೆಯೊಂದನ್ನು ಮತ್ತು ಬನ್ನೂರು ಗ್ರಾಮದ ಅಲುಂಬುಡದಲ್ಲಿ ಬಾವದ ಕೆರೆಯನ್ನು ಪರಿಶೀಲನೆ ಮಾಡಿದರು.
ಬನ್ನೂರಿನಲ್ಲಿ 84 ಸೆಂಟ್ಸ್ ವಿಸ್ತೀರ್ಣದ ಕೆರೆಗೆ ಧಾರ್ಮಿಕ ಮಹತ್ವವಿದೆ.ಇದೀಗ ಅದಕ್ಕೆ ಕೊನೆಗೂ ಕಾಯಕಲ್ಪದ ಯೋಗ ಕೂಡಿ ಬಂದಿದೆ.ನಗರಸಭೆ 15ನೇ ಹಣಕಾಸು ನಿಧಿಯಡಿ ಮಂಜೂರಾದ 38 ಲಕ್ಷ ರೂ ಅನುದಾನ ಮತ್ತು ಮಿಲಿಯನ್ ಪ್ಲಸ್ ಸಿಟೀಸ್ ಯೋಜನೆಯಲ್ಲಿ ಮಂಜೂರಾದ 40 ಲಕ್ಷ ರೂ ಅನುದಾನದಲ್ಲಿ ಕೆರೆಯ ಸಮಗ್ರ ಜೀರ್ಣೋದ್ದಾರ ಕಾರ್ಯ ನಡೆಯುತ್ತಿದೆ.ಪುರಾತನ ಕಾಲದಿಂದಲೂ ಪುತ್ತೂರಿನ ಕೃಷಿ ಹಾಗು ಕುಡಿಯುವ ನೀರಿಗಾಗಿ ಬಳಕೆಯಾಗುತ್ತಿದ್ದ ಅಲುಂಬಡ ಬಾವದ ಕೆರೆಯ ಪುನಶ್ಚೇತನಕ್ಕೆ 9 ವರ್ಷಗಳ ಹಿಂದೆ ರೂ.25 ಲಕ್ಷ ಮಂಜೂರಾಗಿ ಕಾಮಗಾರಿ ನಡೆದರೂ ದುಸ್ಥಿತಿ ಕಂಡಿತ್ತು.ಮತ್ತೆ ಕೆರೆಯಲ್ಲಿ ಹೂಳು ತುಂಬಿ ಹೋಗಿತ್ತು.
ಏನೆಲ್ಲ ಕಾಮಗಾರಿ:
ಬೇಸಿಗೆಯಲ್ಲೂ ತುಂಬಿದ್ದ ಕೆರೆಯಿಂದ ಸತತ 2 ದಿನ ಪಂಪ್ ಮೂಲಕ ನೀರನ್ನು ಹೊರತೆಗೆಯಲಾಯಿತು.ಬಳಿಕ ಪಕ್ಕದಲ್ಲಿ ಕಾಲುವೆ ತೋಡಿ ನೀರನ್ನು ತೋಡಿಗೆ ಬಿಡಲಾಯಿತು.ಹಿಂದೊಮ್ಮೆ ಕಾಮಗಾರಿ ನಡೆದಿರುವ ಕುರುಹು ಕಾಣುತ್ತಿದ್ದು, ನಡುವೆ ದೊಡ್ಡ ದೊಡ್ಡ ಬಂಡೆಕಲ್ಲುಗಳಿವೆ.ಹೂಳೆತ್ತಲು ಮೂರು ನಾಲ್ಕು ಹಿಟಾಚಿಗಳು ಕೆಲಸ ಮಾಡುತ್ತಿವೆ.ಕೆರೆಯನ್ನು ಸುಮಾರು 3 ಮೀಟರ್‌ನಷ್ಟು ಆಳ ಮಾಡಿ ಸುತ್ತಲೂ ಕಲ್ಲಿನ ತಡೆಗೋಡೆ ಕಟ್ಟಲಾಗುತ್ತದೆ.ಕೆರೆಯ ನಾಲ್ಕು ದಿಕ್ಕಿನಲ್ಲೂ 5 ಮೀಟರ್ ಪ್ಯಾಸೇಜ್ ಕಲ್ಪಿಸಲಾಗುತ್ತದೆ ಎಂದು ಮಾಹಿತಿ ಲಭ್ಯವಾಗಿದೆ.
ಕೆರೆಯ ಪಕ್ಕದಲ್ಲಿ ನಾಗ ಸಾನಿಧ್ಯ:
ಕೆರೆಯ ದಂಡೆಯ ಮೇಲೆ ಪ್ರಾಚೀನ ನಾಗ ಸಾನಿಧ್ಯವಿದೆ.ನಾಗ ಸಾನಿಧ್ಯ ಪಾಳು ಬಿದ್ದ ಕಾರಣ ಊರಿಗೆ ಕ್ಷೇಮವಿಲ್ಲ ಎಂದು ಕಂಡು ಬಂದ ಬಳಿಕ ಹಿಂದೆ ನೂತನ ನಾಗ ಸಾನಿಧ್ಯ ಕೆರೆಯ ಪಕ್ಕದಲ್ಲಿ ಪ್ರತಿಷ್ಠಾಪಿಸಲಾಗಿದೆ.ಇದಾದ ಬಳಿಕವೇ ಪಕ್ಕದ ದೆಯ್ಯೆರೆ ಮಾಡ, ಆನೆಮಜಲು ಬನ ಸಾನಿಧ್ಯ ಜೀರ್ಣೋದ್ದಾರ ಮಾಡಲು ಸಾಧ್ಯವಾಯಿತು. ಕೆರೆಯ ಪಕ್ಕದಲ್ಲೇ ಪ್ರಶ್ನಾಚಿಂತನೆಯೂ ನಡೆದಿತ್ತು. ಕೆರೆಯಲ್ಲಿ ದೈವೀಕ ಶಕ್ತಿಯಿರುವುದು ಚಿಂತನೆಯಲ್ಲಿ ಕಂಡು ಬಂದಿದೆ. ಇದೀಗ ಕರೆ ಅಭಿವೃದ್ಧಿಗೊಳ್ಳುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಕೆರೆಗಳನ್ನು, ನದಿಗಳನ್ನು ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಿ
ಪ್ರಪಂಚದಲ್ಲೇ ಹವಾಮಾನ ಬದಲಾವಣೆ ಆಗುತ್ತಿರುವಾಗ ಮಳೆಗಾಲದ ಸಮಸ್ಯೆ ಆಗಬಹುದು.ಮಳೆ ಜಾಸ್ತಿ ಆಗಬಹುದು.ಕಡಿಮೆಯೂ ಆಗಬಹುದು.ಇಂತಹ ಸಂದರ್ಭದಲ್ಲಿ ಕೆರೆಗಳು ನೀರನ್ನು ಶೇಖರಣೆ ಮಾಡಬೇಕು.ಈ ನಿಟ್ಟಿನಲ್ಲಿ ಕೆರೆಗಳ ಹೂಳೆತ್ತುವ ಕೆಲಸ ಆಗಬೇಕಾಗಿದೆ.ಕುಡಿಯುವ ನೀರಿನ ಅಗತ್ಯ ಬಹಳಷ್ಟಿದೆ.ಈ ನಿಟ್ಟಿನಲ್ಲಿ ನಾವು ಈಗಲೇ ಎಚ್ಚೆತ್ತುಕೊಳ್ಳಬೇಕು.ಮುಂದೆ ಕೆರೆಗಳನ್ನು, ನದಿಗಳನ್ನು ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಬೇಕು. ಮುಂದೆ ಯಾವುದೇ ರೀತಿಯ ಸಮಸ್ಯೆ ಬಂದಾಗ ಕೆರೆಗಳು ತುಂಬಾ ಪ್ರಯೋಜನವಾಗುತ್ತದೆ.ಹಾಗಾಗಿ ಮುಂದಿನ ಪೀಳಿಗೆಗೆ ಬೇಕಾಗಿ ನಾವು ಕೆರೆಗಳನ್ನು ಉಳಿಸಬೇಕೆಂದು ನಾನು ಸಾರ್ವಜನಿಕರಲ್ಲಿ ಮನವಿ ಮಾಡುತ್ತೇನೆ-
ಜುಬಿನ್ ಮೊಹಪಾತ್ರ, ಉಪವಿಭಾಗಾಧಿಕಾರಿ ಪುತ್ತೂರು