ಉಪ್ಪಿನಂಗಡಿ: ಈ ಭಾಗದಲ್ಲಿ ಶನಿವಾರ ಸಂಜೆ ಸಾಧಾರಣ ಮಳೆ ಸುರಿದಿದ್ದು, ಇಲ್ಲಿನ ನೇತ್ರಾವತಿ ಸೇತುವೆಯಲ್ಲಿ ಮಳೆಯ ನೀರು ಹರಿದು ಹೋಗಲು ಮಾಡಿರುವ ರಂಧ್ರಗಳು ಮಣ್ಣು ತುಂಬಿ ಮಳೆ ನೀರಿನ ಹರಿವಿಗೆ ತಡೆಯೊಡ್ಡಿ ಸಂಕಷ್ಟವುಂಟಾಗಿದ್ದ ಸಂದರ್ಭದಲ್ಲಿ ಇಳಂತಿಲ ಗ್ರಾ.ಪಂ. ಮಾಜಿ ಸದಸ್ಯ, ಉದ್ಯಮಿ ಯು.ಟಿ. ಫಯಾಝ್ ತನ್ನ ಸಂಗಡಿಗರೊಂದಿಗೆ ರಂಧ್ರದ ಮಣ್ಣನ್ನು ಬಿಡಿಸಿಕೊಡುವ ಮೂಲಕ ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದ್ದಾರೆ.
ಸೇತುವೆಯ ಇಕ್ಕೆಲಗಳಲ್ಲಿ ಮಳೆ ನೀರು ಹರಿದು ಹೋಗಲು ಮಾಡಿರುವ ರಂಧ್ರಗಳು ಕಸ-ಕಡ್ಡಿ, ಮರಳು, ಮಣ್ಣು ತುಂಬಿ ಮಳೆ ನೀರಿನ ಹರಿಯುವಿಕೆಗೆ ತಡೆಯೊಡ್ಡಿದ್ದವು. ಇಂದಿನ ಈ ಮಳೆಗೆ ಸೇತುವೆಯ ಮೇಲೆ ನೀರು ನಿಂತಿದ್ದು, ಇದರಿಂದಾಗಿ ವಾಹನಗಳು ಹೋಗುವಾಗ ಆ ನೀರು ಪಾದಚಾರಿ, ದ್ವಿಚಕ್ರ ಸವಾರರ ಮೇಲೆ ಪ್ರೋಕ್ಷಣೆಯಾಗುತ್ತಿತ್ತು. ಈ ಸಮಸ್ಯೆಯನ್ನು ಗಮನಿಸಿದ ಯು.ಟಿ. ಫಯಾಝ್ ಅವರು ತನ್ನ ಸಂಗಡಿಗರ ಜೊತೆಗೂಡಿ ಸೇತುವೆಯ ಇಕ್ಕೆಲಗಳಲ್ಲಿ ನೀರಿನ ಹರಿಯುವಿಕೆಗೆ ತಡೆಯೊಡ್ಡಿದ್ದ ಎಲ್ಲಾ ರಂಧ್ರಗಳನ್ನು ಸ್ವಚ್ಛ ಮಾಡುವ ಮೂಲಕ ಮಾದರಿಯೆನಿಸುವ ಕಾರ್ಯ ಮಾಡಿದ್ದಾರೆ. ಈ ತಂಡದ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.